ಸೋಮವಾರಪೇಟೆ, ಜು.೧೩: ಗುರು ಶ್ರೀ ರಾಘವೇಂದ್ರ ಸ್ವಾಮಿಯ ಪುಣ್ಯಕ್ಷೇತ್ರ ಮಂತ್ರಾಲಯಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಕೊಡಗಿನ ಯುವಕನೋರ್ವನೂ ಸೇರಿದಂತೆ ಮೂವರು ಸ್ನಾನಘಟ್ಟದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಸಮೀಪದ ಸಂಗಯ್ಯನಪುರ ಗ್ರಾಮದ ಕೃಷಿಕ ರಮೇಶ್ ಹಾಗೂ ಇಂದಿರಾ ದಂಪತಿ ಪುತ್ರ, ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಕೆ.ಆರ್. ಅಜಿತ್ (೨೦) ಸೇರಿದಂತೆ ಹಾಸನದ ಈರ್ವರು ದುರ್ಮರಣಕ್ಕೀಡಾಗಿದ್ದಾರೆ.

ಕಳೆದ ತಾ.೧೧ ರಂದು ಹಾಸನದಿಂದ ಮಂತ್ರಾಲಯಕ್ಕೆ ಪ್ರವಾಸ ತೆರಳಿದ್ದ ೭ ಮಂದಿ ಸ್ನೇಹಿತರ ತಂಡದೊAದಿಗಿದ್ದ ಅಜಿತ್, ನಿನ್ನೆ ದಿನ ಮಂತ್ರಾಲಯದ ತುಂಗಭದ್ರಾ ನದಿಯ ಸ್ನಾನಘಟಕ್ಕೆ ತನ್ನ ಮೂವರು ಸ್ನೇಹಿತರೊಂದಿಗೆ ಇಳಿದಿದ್ದು, ಆಕಸ್ಮಿಕವಾಗಿ ಆಯತಪ್ಪಿ ಮೂವರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ನಿನ್ನೆಯಿಂದ ಸ್ಥಳೀಯ ಪೊಲೀಸರು ಹಾಗೂ ಈಜುಗಾರರ ತಂಡ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಇಂದು ಬೆಳಿಗ್ಗೆ ಎನ್.ಡಿ.ಆರ್.ಎಫ್. ತಂಡದೊAದಿಗೆ ಸ್ಥಳೀಯರು ನದಿಯಲ್ಲಿ ಹುಡುಕಾಟ ನಡೆಸಿದ ಸಂದರ್ಭ ಮೃತದೇಹಗಳು ಪತ್ತೆಯಾಗಿವೆ. ಸೋಮವಾರಪೇಟೆಯ ಅಜಿತ್ ಸೇರಿದಂತೆ ಹಾಸನ ಅರಸೀಕೆರೆಯ ಪ್ರಮೋದ್, ಸಚಿನ್ ಅವರುಗಳ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಮೊಕದ್ದಮೆ ದಾಖಲಾಗಿದೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಅವರು ಹೆಚ್ಚಿನ ಮುತುವರ್ಜಿ ವಹಿಸಿ, ಉಸ್ತುವಾರಿ ಸಚಿವರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಕಾರ್ಯಾಚರಣೆ ಚುರುಕುಗೊಳಿಸಲು ಸಹಕರಿಸಿದ್ದಾರೆ. ತಾ.೧೪ರಂದು (ಇಂದು) ಸ್ವಗ್ರಾಮ ಸಂಗಯ್ಯನಪುರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತ ಅಜಿತ್, ಪೋಷಕರೊಂದಿಗೆ ಈರ್ವರು ಸಹೋದರರನ್ನು ಅಗಲಿದ್ದಾರೆ.