ಸಿದ್ದಾಪುರ, ಜು. ೧೪: ಮಳೆಯಿಂದಾಗಿ ಭೂಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಉಲ್ಲಂಘಿಸಿ ರಾತ್ರಿ ವೇಳೆಯಲ್ಲಿ ಮರಗಳನ್ನು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳನ್ನು ಸಿದ್ದಾಪುರ ಪೊಲೀಸರು ವಶಪಡಿಸಿ ಕೊಂಡಿದ್ದಾರೆ.

ಸಿದ್ದಾಪುರ ಸಮೀಪದ ಆನಂದ ಪುರ ಹಂಚಿಬೆಟ್ಟ ಕಾಫಿತೋಟದ ಬಳಿ ಜಿಲ್ಲಾಧಿಕಾರಿಗಳ ಕಾನೂನು ಆದೇಶ ಉಲ್ಲಂಘಿಸಿ ಲಾರಿಯಲ್ಲಿ ತಡರಾತ್ರಿ ಮರಗಳ ದಿಮ್ಮಿಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಹಾಯಕ ಠಾಣಾಧಿಕಾರಿ ಶ್ರೀನಿವಾಸ್ ಮತ್ತು ಸಿಬ್ಬಂದಿಗಳಾದ ಪ್ರಸನ್ನ ಹಾಗೂ ಇತರ ಸಿಬ್ಬಂದಿ ಸೇರಿ ಧಾಳಿ ನಡೆಸಿ ಮೂರು ಮರ ತುಂಬಿದ ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕ್ಕೆ ಜಿಲ್ಲಾ ಸಾರಿಗೆ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಆದೇಶ ಉಲ್ಲಂಘನೆ ಮಾಡಿ ಮರಗಳನ್ನು ಸಾಗಾಟ ಮಾಡುವುದು ಕಂಡುಬAದಲ್ಲಿ ಅಂತಹ ಚಾಲಕರ ಹಾಗೂ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಮಂಜು ನಾಥ್ ಎಚ್ಚರಿಕೆ ನೀಡಿದ್ದಾರೆ. -ವಾಸು