ಸೋಮವಾರಪೇಟೆ, ಜು. ೧೪: ಇಲ್ಲಿನ ಸವಿತಾ ಸಮಾಜದ ವತಿಯಿಂದ ವಚನಕಾರ ಹಡಪದ ಅಪ್ಪಣ್ಣ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಪಟ್ಟಣದ ಸವಿತಾ ಸಮಾಜದ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕು ಅಧ್ಯಕ್ಷೆ ಶರ್ಮಿಳಾ ರಮೇಶ್ ಮಾತನಾಡಿ, ಹಡಪದ ಅಪ್ಪಣ್ಣ ಅವರು ೧೨ನೇ ಶತಮಾನದಲ್ಲಿ ಬಸವಾದಿ ಶರಣರೊಂದಿಗೆ ಸಮಾಜದ ಸುಧಾರಣೆಗೆ ಶ್ರಮಿಸಿದ ಮಹಾನ್ ದಾರ್ಶನಿಕ ಎಂದು ಬಣ್ಣಿಸಿದರು.

ಬಸವಣ್ಣ ಅವರ ನಿಕಟವರ್ತಿಯಾಗಿದ್ದ ಹಡಪದ ಅಪ್ಪಣ್ಣ ಅವರು ೨೫೦ಕ್ಕೂ ಅಧಿಕ ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿದ್ದ ಕಂದಾಚಾರ, ಮೂಢನಂಬಿಕೆ, ಅಸ್ಪೃಶ್ಯತೆಯ ವಿರುದ್ಧ ಜಾಗೃತಿ ಮೂಡಿಸಿದರು. ಬಸವಣ್ಣ ಅವರ ಚಿಂತನೆಗಳೊAದಿಗೆ ಸಾಮ್ಯತೆ ಹೊಂದಿದ್ದ ಅಪ್ಪಣ್ಣ ಅವರಿಗೆ ಅನುಭವ ಮಂಟಪದ ಮುಖ್ಯ ಹುದ್ದೆಯನ್ನೂ ನೀಡಲಾಗಿತ್ತು ಎಂದರು.

ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತನೆ ಹರಿಸುವ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದ ಇಂತಹ ಮಹಾನ್ ಕ್ರಾಂತಿಕಾರಿಗಳ ಆದರ್ಶ ಹಾಗೂ ತತ್ವಗಳ ಅಧ್ಯಯನ ಮಾಡಬೇಕು. ಅವರ ಮಾರ್ಗದರ್ಶನದಂತೆ ನಡೆಯಬೇಕೆಂದು ಇದೇ ಸಂದರ್ಭ ಕಿವಿಮಾತು ಹೇಳಿದರು.

ಮತ್ತೋರ್ವ ಅತಿಥಿ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ದೊರೇಶ್ ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಹಡಪದ ಅಪ್ಪಣ್ಣ ಅವರ ಜನ್ಮ ದಿನಾಚರಣೆಯನ್ನು ನಡೆಸುವಂತೆ ಸರ್ಕಾರದ ಆದೇಶವಿದೆ. ಇಂತಹ ಕಾರ್ಯಕ್ರಮದಲ್ಲಿ ಸಮಾಜವನ್ನು ಒಳಪಡಿಸಿಕೊಳ್ಳಬೇಕು ಎಂದರು.

ಸಣ್ಣಪುಟ್ಟ ಸಮಾಜಗಳು ಸಂಘಟನೆಯಾದರೆ ಮಾತ್ರ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬಹುದು. ಸಮಾಜದ ಮಕ್ಕಳಿಗೆ ಇತಿಹಾಸ ತಿಳಿಸಬೇಕು. ಪದ್ಧತಿ ಪರಂಪರೆಯನ್ನು ಮುಂದುವರೆಸಿಕೊAಡು ಹೋಗಬೇಕು ಎಂದು ಕರೆ ನೀಡಿದರು.

೨೦೧೪ರಲ್ಲಿ ರಾಜ್ಯ ಸರ್ಕಾರದಿಂದ ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದು, ಈ ನಿಗಮದ ಮೂಲಕ ಲಭಿಸುವ ಯೋಜನೆಗಳನ್ನು ಬಳಸಿಕೊಳ್ಳಬೇಕು. ಸ್ವ ಉದ್ಯೋಗ, ನೇರ ಸಾಲ ಯೋಜನೆ, ಸಹಾಯ ಧನದಂತಹ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಕಾಗಡಿಕಟ್ಟೆ ರಾಮಚಂದ್ರ, ಪಟ್ಟಣದ ಸಿದ್ದರಾಜು, ಮಂಜುನಾಥ್, ನಿಂಗರಾಜು, ಶರ್ಮಿಳಾ ರಮೇಶ್ ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಅರುಣ್ ವಹಿಸಿದ್ದರು. ಉಪಾಧ್ಯಕ್ಷ ಶಿವಕುಮಾರ್, ಮಾಜೀ ಅಧ್ಯಕ್ಷ ಶಂಕರ್, ಕಾರ್ಯದರ್ಶಿ ಮೋಹನ್, ಖಜಾಂಚಿ ಪಣೀಶ್ ಅವರುಗಳು ಉಪಸ್ಥಿತರಿದ್ದರು. ಬಾಲಕೃಷ್ಣ ಅವರು ಕಾರ್ಯಕ್ರಮ ನಿರ್ವಹಿಸಿದರು.