ಚೆಯ್ಯಂಡಾಣೆ, ಜು. ೧೪: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಗ್ರಾಮದ ಬೆಳಗಾರರ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿ ಕೃಷಿ ಫಸಲನ್ನು ಹಾಗೂ ಮನೆಯ ಗೇಟ್‌ನ ಕಾಂಪೌAಡನ್ನು ತುಳಿದು ಹಾನಿ ಪಡಿಸಿ ನಷ್ಟ ಉಂಟು ಮಾಡಿದೆ. ರಾತ್ರಿ ವೇಳೆ ಈ ರಸ್ತೆಯಲ್ಲಿ ಕಾಡಾನೆ ಸಂಚರಿಸುವ ದೃಶ್ಯ ವಾಹನ ಸವಾರರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನರಿಯಂದಡ ಗ್ರಾಮದ ಬೊವ್ವೇರಿಯಂಡ ನಾಚಪ್ಪ, ಸಾಬು ತಿಮ್ಮಯ್ಯ, ರವಿ ಸೊಮ್ಮಯ್ಯ ಅವರ ತೋಟಕ್ಕೆ ನುಗ್ಗಿ ಕಾಡಾನೆಗಳು ತೋಟದಲ್ಲಿ ಬೆಳೆದ ಅಡಿಕೆ,ಕಾಫಿ, ಬಾಳೆ ಮತ್ತಿತರ ಗಿಡಗಳನ್ನು ತುಳಿದು ನಾಶ ಪಡಿಸಿದ್ದಲ್ಲದೆ ನಾಚಪ್ಪ ಅವರ ಮನೆಗೆ ತೆರಳುವ ಗೇಟ್‌ನ ಕಾಂಪೌAಡನ್ನು ತುಳಿದು ಹಾನಿಪಡಿಸಿದೆ.
ಮಳೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ತೋಟದಲ್ಲಿ ಕೆಲಸ ಕಾರ್ಯಗಳಿಗೆ ತೆರಳಲು ಕಾಡಾನೆ ಭಯದಿಂದ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟಬೇಕು. ಅಥವಾ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು. ಜೀವ ಹಾನಿ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕು ಹಾಗೂ ಸರಕಾರ ನಷ್ಟಕ್ಕೊಳಗಾದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. -ಅಶ್ರಫ್