ಕಾಯಪAಡ ಶಶಿ ಸೋಮಯ್ಯ
ಮಡಿಕೇರಿ, ಜು. ೧೪: ಇಡೀ ರಾಜ್ಯದಲ್ಲಿ ರೈಲ್ವೇ ಸಂಪರ್ಕ ಇಲ್ಲದಿರುವ ಏಕೈಕ ಜಿಲ್ಲೆಯೆಂದರೆ ಅದು ಕೊಡಗು ಮಾತ್ರ. ಕೊಡಗಿಗೆ ರೈಲು ಮಾರ್ಗ ಕಲ್ಪಿಸುವ ವಿಚಾರ ಹಲವು ದಶಕಗಳಿಂದ ಕೇವಲ ಪ್ರಸ್ತಾವನೆಯಲ್ಲಿಯೇ ಉಳಿದಿದೆ. ಜಿಲ್ಲೆಯ ಮೂಲಕ ರೈಲು ಮಾರ್ಗಕ್ಕೆ ಹಲವರ ಆಕ್ಷೇಪಗಳೂ ಒಂದೆಡೆಯಿದೆ. ಆದರೂ ಬಯಲು ಪ್ರದೇಶಕ್ಕೆ ಒತ್ತಿಕೊಂಡAತಿರುವ ಜಿಲ್ಲೆಯ ಗಡಿಭಾಗ ಕುಶಾಲನಗರದತನಕ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಇತ್ತಾದರೂ ಇಲ್ಲಿಯತನಕ ಕೇವಲ ಚರ್ಚೆ ಪ್ರಸ್ತಾವನೆಯಲ್ಲಿ ಮಾತ್ರ ಕೇಳಿಬರುತ್ತಿದೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಸದ್ಯಕ್ಕೆ ಇದು ಕಾರ್ಯಗತಗೊಳ್ಳುವುದು ಕೂಡ ಕೇವಲ ಕನಸ್ಸಷ್ಟೆ... ಇದು ಒತ್ತಟ್ಟಿಗಿರಲು ಆದರೆ ಜಿಲ್ಲೆಯ ಜನತೆಗೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರಾರಂಭಿಸಲಾಗಿದ್ದ ರೈಲ್ವೇ ಟಿಕೆಟ್ ಬುಕ್ಕಿಂಗ್ ಕೇಂದ್ರವೂ ಇದೀಗ ಮುಚ್ಚಲ್ಪಟ್ಟು ಹಲವಾರು ವರ್ಷಗಳೇ ಕಳೆದಿವೆ.
ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ನಗರಸಭಾ ಕಟ್ಟಡದಲ್ಲಿ ರೈಲ್ವೇ ಟಿಕೆಟ್ ಬುಕ್ಕಿಂಗ್ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು.
ಜಿಲ್ಲೆಯವರಾದ ಐಚೆಟ್ಟಿರ ಪ್ರೇಮಾ ಕಾರ್ಯಪ್ಪ ಅವರು, ೨೦೦೨ರಿಂದ ೨೦೦೮ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾಗಿದ್ದ ಜಿ. ರಾಜೇಂದ್ರ ಹಾಗೂ ತಂಡ ಈ ಕೇಂದ್ರದ ಬಗ್ಗೆ ಆಸಕ್ತಿ ವಹಿಸಿ ಪ್ರೇಮಾ ಕಾರ್ಯಪ್ಪ ಅವರ ಮೂಲಕ ನಡೆಸಿದ ಪ್ರಯತ್ನಕ್ಕೆ ರೈಲ್ವೇ ಇಲಾಖೆ ಮೂಲಕ ಒಪ್ಪಿಗೆ ದೊರೆತಿತ್ತು. ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ಎನ್. ಪ್ರಕಾಶ್ ಹಾಗೂ ನಾಪೋಕ್ಲುವಿನ ಡಾ. ಸಣ್ಣುವಂಡ ಕಾವೇರಪ್ಪ ಅವರು ಸಹಕರಿಸಿದ್ದರು.
ಪ್ರೇಮಾ ಕಾರ್ಯಪ್ಪ ಅವರ ಪ್ರಯತ್ನದಂತೆ ಮಡಿಕೇರಿಯಲ್ಲಿ ಈ ಕೌಂಟರ್ ಪ್ರಾರಂಭಗೊAಡು ಕೆಲವು ವರ್ಷಗಳ ತನಕ ಇದು ಜಿಲ್ಲೆಯಿಂದ ಇತರೆಡೆಗೆ ರೈಲು ಮೂಲಕ ಪ್ರಯಾಣಿಸುವವರಿಗೆ ಮುಂಗಡ ಟಿಕೆಟ್ ವ್ಯವಸ್ಥೆ ಮಾಡಿಕೊಳ್ಳಲು ಪ್ರಯೋಜನಕಾರಿಯಾಗಿತ್ತು. ಜಿಲ್ಲೆಯ ಸಾಕಷ್ಟು ಮಂದಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೇನಾ ಸಿಬ್ಬಂದಿಗಳಿಗೆ, ಪ್ರವಾಸಿಗರಿಗೆ ಇದು ಅನುಕೂಲಕರವಾಗಿತ್ತು. ನಂತರದಲ್ಲಿ ಜಿಲ್ಲೆಗೆ ಉತ್ತರ ಭಾರತದ ರಾಜ್ಯಗಳಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದ್ದು, ಈ ಕೇಂದ್ರ ಕಾರ್ಮಿಕರಿಗೆ ಮಾತ್ರವಲ್ಲದೆ ಜಿಲ್ಲೆಯ ಬೆಳೆಗಾರರಿಗೂ ಕಾರ್ಮಿಕರನ್ನು ಕರೆಸಿಕೊಳ್ಳಲು ಮತ್ತೆ ವಾಪಸ್ಸು ಕಳಿಸಲು ಟಿಕೆಟ್ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿತ್ತು.
ಮುಚ್ಚಲ್ಪಟ್ಟ ಕೇಂದ್ರ
ಸುಮಾರು ೧೦ ವರ್ಷಗಳ ಸುಲಲಿತವಾಗಿ ಲಾಭದಾಯಕವಾ ಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಈ ಕೇಂದ್ರ ೨೦೧೮ರ ಪ್ರಾಕೃತಿಕ ವಿಕೋಪ, ನಂತರದ ಕೋವಿಡ್ ಸಂದರ್ಭದಲ್ಲಿ ಮುಚ್ಚಲ್ಪಟ್ಟಿದ್ದು ಮತ್ತೆ ಈತನಕವೂ ಬಾಗಿಲು ತೆರೆದಿಲ್ಲ. ೪ಐದÀನೇ ಪುಟಕ್ಕೆ
(ಮೊದಲ ಪುಟದಿಂದ) ಈ ಕೇಂದ್ರದೊಳಗಿರುವ ಕಂಪ್ಯೂಟರ್, ಪೀಠೋಪಕರಣಗಳು ಈಗಲೂ ಪಾಳುಬಿದ್ದಿವೆ. ನಗರಸಭಾ ಕಟ್ಟಡದ ಈ ಮಳಿಗೆ ಬೀಗಜಡಿದ ಸ್ಥಿತಿಯಲ್ಲೇ ಉಳಿದಿದೆ.
ಪ್ರಸ್ತುತ ಆನ್ಲೈನ್ ಮೂಲಕ ಹೆಚ್ಚಾಗಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಿರುವುದರಿಂದ ರೈಲ್ವೇ ಇಲಾಖೆಯೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡAತಿಲ್ಲ. ಆದರೆ ಎಷ್ಟು ಜನರಿಗೆ ಈ ಆನ್ಲೈನ್ ವ್ಯವಸ್ಥೆ ಪ್ರಯೋಜನಕಾರಿಯಾಗುತ್ತಿದೆ ಎಂಬುದು ಪ್ರಶ್ನೆಯಾಗಿದೆ. ಜಿಲ್ಲೆಯಾದ್ಯಂತ ನೆಟ್ವರ್ಕ್ ವ್ಯವಸ್ಥೆ ಸರಿಯಿಲ್ಲದೆ ಜನರು ಪರದಾಡುವುದು ಒಂದೆಡೆಯಾದರೆ ಮತ್ತೊಂದೆಡೆ ಈ ಆನ್ಲೈನ್ನ ಪ್ರಯೋಜನ ಪಡೆಯಲು ಬಹುತೇಕ ಜನರಿಗೆ ಸೂಕ್ತ ತಿಳುವಳಿಕೆ ಇಲ್ಲ. ಅದರಲ್ಲೂ ಕಾರ್ಮಿಕರು ಇದನ್ನು ಬಳಸುವುದು ಅಷ್ಟಕಷ್ಟೇ. ಈ ಹಿಂದೆ ಟಿಕೆಟ್ ಕಾಯ್ದಿರಿಸುವದಲ್ಲದೆ ರೈಲು ಸಂಚಾರದ ಮಾಹಿತಿಯನ್ನೂ ಕೇಂದ್ರದ ಸಿಬ್ಬಂದಿಗಳ ಮೂಲಕ ಜನರು ಅರಿತುಕೊಳ್ಳಲು ಸುಲಭವಾಗುತ್ತಿತ್ತು. ಆದರೆ ಕಳೆದ ಏಳೆಂಟು ವರ್ಷಗಳಿಂದ ಈ ಕೇಂದ್ರಕ್ಕೆ ಬೀಗ ಜಡಿಯಲ್ಪಟ್ಟಿದ್ದು, ಯಾವುದೇ ಪ್ರಯೋಜನ ಇಲ್ಲದಂತಾಗಿದೆ.
ಕಳೆದ ಅವಧಿಯಲ್ಲಿ ಪ್ರತಾಪ್ಸಿಂಹ ಅವರು ಸಂಸದರಾಗಿದ್ದ ಸಂದರ್ಭದಲ್ಲಿ ಈ ಕೇಂದ್ರವನ್ನು ಮತ್ತೆ ಪ್ರಾರಂಭಿಸುವ ಬಗ್ಗೆ ಮೈಸೂರಿನಲ್ಲಿ ರೈಲ್ವೇ ಇಲಾಖೆ ಅಧಿಕಾರಿಗಳ ಜತೆ ಒಂದೆರಡು ಸಭೆ ಚರ್ಚೆಗಳು ನಡೆದಿತ್ತು. ಆದರೂ ಕೇಂದ್ರದ ಬಾಗಿಲು ಈತನಕ ತೆರೆದಿಲ್ಲ. ಇದೀಗ ಈಗಿನ ಸಂಸದರಾಗಿರುವ ಯದುವೀರ್ ಒಡೆಯರ್ ಅವರು ಈ ಬಗ್ಗೆ ಆಸಕ್ತಿ ತೋರಬೇಕಿದೆ.
ತಾಂತ್ರಿಕತೆ ಎಷ್ಟೇ ಮುಂದುವರಿದಿದ್ದರೂ ಎಲ್ಲಾ ಜನಸಾಮಾನ್ಯರಿಗೆ ಇದರ ಜ್ಞಾನ ಹೆಚ್ಚಿರುವುದಿಲ್ಲ. ಆದಕಾರಣ ಈ ಹಿಂದಿನAತೆ ಟಿಕೆಟ್ ಬುಕ್ಕಿಂಗ್ ಕೇಂದ್ರವನ್ನು ಮತ್ತೆ ಪ್ರಾರಂಭಿಸಿದರೆ ಜನತೆಗೆ ಅನುಕೂಲವಾದೀತು.