ನಾಪೋಕ್ಲು, ಜು. ೧೫: ತೆಂಗಿನ ಮರದ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಆ ಮರವೂ ಮನೆ ಮೇಲೆ ಬಿದ್ದು ಮನೆಗೆ ಹಾನಿಯಾಗಿರುವ ಘಟನೆ ಯವಕಪಾಡಿಯಲ್ಲಿ ನಡೆದಿದೆ. ಯವಕಪಾಡಿ ಗ್ರಾಮದ ಕುಡಿಯರ ಕಾಲೋನಿಯಲ್ಲಿ ಸೋಮವಾರ ರಾತ್ರಿ ಕಾಡಾನೆ ದಾಂಧÀಲೆ ನಡೆಸಿ ನಿವಾಸಿ ಗಣೇಶ್ ಅವರ ಮನೆಯ ಆವರಣದಲ್ಲಿದ್ದ ತೆಂಗಿನ ಮರವನ್ನು ಗುದ್ದಿ ಬೀಳಿಸಿದ್ದು, ಆ ಮರ ನೇರವಾಗಿ ಮನೆ ಮೇಲೆ ಬಿದ್ದಿದೆ. ಮನೆಯವರು ಕಾರ್ಯನಿಮಿತ್ತ ಬೇರೆಡೆಗೆ ತೆರಳಿದ್ದ ಹಿನ್ನೆಲೆ ಪ್ರಾಣಾಪಾಯ ತಪ್ಪಿದೆ.

ಹಲವು ವರ್ಷಗಳಿಂದ ಗಣೇಶ್ ಕುಟುಂಬ ಈ ಮನೆಯಲ್ಲಿ ನೆಲೆಸಿದೆ. ಕಾಡಾನೆ ಉಪಟಳ ತಡೆಗೆ ಕ್ರಮಕೈಗೊಳ್ಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಗಣೇಶ್ ಹಾಗೂ ಅವರ ಸಹೋದರ ಬಿದ್ದಪ್ಪ ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ, ಎರಡು ವರ್ಷದಿಂದ ಈ ಭಾಗದಲ್ಲಿ ವಾಸಿಸುವವರ ಮನೆ, ಆಸ್ತಿ ವನ್ಯ ಜೀವಿ ದಾಂಧಲೆಯಿAದ ನಾಶವಾಗುತ್ತಿದೆ ಯವಕಪಾಡಿ, ಮರಂದೋಡ, ಕುಂಜಿಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಕಾಫಿ ತೋಟಗಳು ಹಾನಿಯಾಗಿವೆ. ಇಲ್ಲಿ ಒಂಟಿ ಸಲಗ ಓಡಾ ಡುತ್ತಿದ್ದು, ಅದನ್ನು ಸೆರೆಹಿಡಿಯಬೇಕು. ಸಂತ್ರಸ್ತ ಕುಟುಂಬಕ್ಕೆ ಕನಿಷ್ಟ ೧೦ ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.