ಗುಂಡು ಹಾರಿಸಿ ಕೊಲೆ ಆರೋಪಿಗಳ ಬಂಧನ
ವಿಜಯಪುರ, ಜು. ೧೫: ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಕೊಲೆ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ವಿಜಯಪುರದಲ್ಲಿ ಮಂಗಳವಾರ ನಡೆದಿದೆ. ನಗರದ ಎಸ್.ಎಸ್ ರಸ್ತೆಯ ಅಮರ ವರ್ಷಿಣಿ ಸೌಹಾರ್ದ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಸೋಮವಾರ ರೌಡಿಶೀಟರ್ ಸುಶೀಲ್ ಕುಮಾರ ಕಾಳೆ ಎಂಬಾತನ ಮೇಲೆ ದುಷ್ಕರ್ಮಿಗಳು ಚಾಕು, ಮಚ್ಚಿನಿಂದ ಹೊಡೆದು ಪರಾರಿಯಾಗಿದ್ದರು. ಈ ಆರೋಪಿಗಳು ನಗರ ಹೊರವಲಯದ ಇಟ್ಟಿಂಗಿಹಾಳ ರಸ್ತೆಯಲ್ಲಿ ಇರುವ ಮಾಹಿತಿ ಆಧರಿಸಿ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ನಾಡ ಪಿಸ್ತೂಲ್ನಿಂದ ಗುಂಡು ಹಾರಿಸಿ, ಬೈಕಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಪ್ರತಿಯಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು,ಈ ವೇಳೆ ಆರೋಪಿಗಳ ಕಾಲಿಗೆ ಗುಂಡು ತಗುಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ ತಿಳಿಸಿದ್ದಾರೆ.
ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆ ರಚನೆ
ಬೆಂಗಳೂರು, ಜು. ೧೫: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆ ರಚನೆ ಮಾಡಿ, ಶೀಘ್ರ ಚುನಾವಣೆ ನಡೆಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಜಿಬಿಎ ರಚನೆ ಮಾಡಲಾಗಿದೆ ಈ ಮೂಲಕ ಐದು ಪಾಲಿಕೆಗಳನ್ನು ನಾವು ಮಾಡಿಯೇ ತೀರುತ್ತೇವೆ. ಈ ಕುರಿತು ಸಮಿತಿ ಮಾಡಲಾಗಿದೆ. ಕೆಲವರು ಸಾರ್ವಜನಿಕವಾಗಿ ವಿರೋಧ ಮಾಡಬಹುದು ಆದರೆ ಆಡಳಿತ ದೃಷ್ಟಿಯಿಂದ ಇದನ್ನು ಮಾಡಲೇಬೇಕಾಗಿದೆ. ಪಾಲಿಕೆಗಳು ರಚನೆಯಾದರೆ ನಮ್ಮ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನ ಮಾನ ನೀಡಲೇಬೇಕು ಎಂದು ನಾವು ತೀರ್ಮಾನಿಸಿದ್ದೇವೆ. ಇದಕ್ಕೆ ಅಡಿಪಾಯ ತಯಾರು ಮಾಡಬೇಕಿದೆ. ಏಕೆಂದರೆ ಡಿ.ಕೆ. ಶಿವಕುಮಾರ್ ಒಬ್ಬನೇ ಸರ್ಕಾರ ತರಲು ಆಗುವುದಿಲ್ಲ. ಕಾರ್ಯಕರ್ತರೇ ಇಲ್ಲಿ ಜೀವಾಳ. ನಾವು ವಿಧಾನಸೌಧದಲ್ಲಿ ತೀರ್ಮಾನ ಮಾಡಬಹುದು ಆದರೆ ಸರ್ಕಾರದ ರಾಯಭಾರಿಗಳು ನೀವು. ನಮ್ಮ ಭವಿಷ್ಯ, ಬೆಂಗಳೂರು ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದರು.
ಬಾAಬ್ ಸ್ಫೋಟ ಬೆದರಿಕೆಯೊಡ್ಡಿದ್ದ ಆರೋಪಿ ಮೈಸೂರು ಜೈಲಿನಲ್ಲಿ ಪತ್ತೆ
ಭಟ್ಕಳ, ಜು. ೧೫: ಭಟ್ಕಳ ಪಟ್ಟಣವನ್ನು ೨೪ ಗಂಟೆಗಳ ಒಳಗೆ ಸ್ಫೋಟಿಸುವುದಾಗಿ ಬೆದರಿಕೆ ಹಾಕುವ ಇಮೇಲ್ ಕಳುಹಿಸಲಾದ ಪ್ರಕರಣವನ್ನು ಉತ್ತರ ಕನ್ನಡ ಪೊಲೀಸರು ಭೇದಿಸಿದ್ದಾರೆ. ಮೇಲ್ ಕಳುಹಿಸಿದ ವ್ಯಕ್ತಿ ಒಬ್ಬ ಸಾಮಾನ್ಯ ಅಪರಾಧಿಯಾಗಿದ್ದು, ದೇಶಾದ್ಯಂತ ಪೊಲೀಸ್ ಠಾಣೆಗಳನ್ನು ಸ್ಫೋಟಿಸುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ಮೇಲ್ ಕಳುಹಿಸಿದ ಆರೋಪಿಯನ್ನು ಉತ್ತರ ಪ್ರದೇಶದ ನೋಯ್ಡಾ ಮೂಲದ ಜತಿನ್ ಶರ್ಮಾ ಎಂದು ಗುರುತಿಸಲಾಗಿದೆ. ಈತ ದೇಶಾದ್ಯಂತ ಹಲವಾರು ಸ್ಥಳಗಳಿಗೆ ಈ ಹಿಂದೆ ಇಮೇಲ್ಗಳನ್ನು ಕಳುಹಿಸಿರುವ ಸಾಮಾನ್ಯ ಅಪರಾಧಿಯಾಗಿದ್ದಾನೆ. ಮುನ್ನಾರ್ ಜೈಲಿನಲ್ಲಿ ಕಣ್ಣನ್ ಗುರುಸ್ವಾಮಿ ಎಂಬಾತನನ್ನು ಜತಿನ್ ಶರ್ಮಾ ಈ ಹಿಂದೆ ಭೇಟಿಯಾಗಿದ್ದನು. ಈ ವೇಳೆ ಆತನ ಮೊಬೈಲ್ ಫೋನ್ ಅನ್ನು ಬಳಸಿದ್ದ. "ಶರ್ಮ ತನ್ನ ಪತ್ನಿಯೊಂದಿಗೆ ಮಾತನಾಡಲು ಬಯಸುತ್ತೇನೆ ಎಂದು ಹೇಳುವ ಮೂಲಕ ಕಣ್ಣನ್ನಿಂದ ಫೋನ್ ಪಡೆದಿದ್ದ, ಆದರೆ ಭಟ್ಕಳ ಠಾಣೆಗೆ ಇಮೇಲ್ ಮಾಡಿದ್ದಾನೆ ಎಂದು ಉತ್ತರ ಕನ್ನಡ ಎಸ್ಪಿ ಎಂ. ನಾರಾಯಣ್ ತಿಳಿಸಿದ್ದಾರೆ. ಮುನ್ನಾರ್ ಪೊಲೀಸರನ್ನು ಸಂಪರ್ಕಿಸಿದಾಗ, ಆರೋಪಿ ಮೈಸೂರು ಜೈಲಿನಲ್ಲಿದ್ದಾನೆ ಎಂದು ನಮಗೆ ತಿಳಿದುಬಂದಿತು. ಮುನ್ನಾರ್ ಪೊಲೀಸರು ವಿಚಾರಣೆಗಾಗಿ ಬಾಡಿ ವಾರಂಟ್ ಪಡೆದಿದ್ದರು. ನಾವು ಅವನನ್ನು ವಿಚಾರಣೆಗಾಗಿ ಕಾರವಾರಕ್ಕೆ ಕರೆತರುತ್ತೇವೆ ಎಂದು ಅವರು ಹೇಳಿದರು. ಆರೋಪಿ ಮೈಸೂರು ನಜರ್ಬಾದ್ ಪೊಲೀಸರಿಗೆ ಇ-ಮೇಲ್ ಮೂಲಕ ಪೊಲೀಸ್ ಠಾಣೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.
ಹೃದಯಾಘಾತದಿAದ ಸಾವು ಪ್ರಕರಣಗಳ ಸಂಖ್ಯೆ ಹೆಚ್ಚಾಗಿಲ್ಲ
ಬೆಂಗಳೂರು, ಜು. ೧೫: ರಾಜ್ಯದ ಯಾವುದೇ ಜಿಲ್ಲೆ ಅಥವಾ ಭಾಗದಲ್ಲಿ ಹೃದಯಾಘಾತದಿಂದ ಜನರು ಮೃತಪಡುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿಲ್ಲ. ಹೀಗಾಗಿ ಜನರು ಆತಂತಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಅವರು ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ದಿಢೀರ್ ಹೃದಯಾಘಾತದಿಂದ ೨೪ ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಅವುಗಳಲ್ಲಿ ೧ ರಸ್ತೆ ಅಪಘಾತ, ೧ ವಿದ್ಯುತ್ ಆಘಾತ, ೧ ಹೊಟ್ಟೆಯುಬ್ಬರ, ೧ ಕಿಡ್ನಿ ಸಮಸ್ಯೆಯಿಂದ ಸಂಭವಿಸಿದ ಸಾವು ಎಂದರು. ಉಳಿದ ೨೦ರಲ್ಲಿ ೧೦ ಮಂದಿಗೆ ಈ ಮೊದಲೇ ಹೃದಯ ಸಂಬAಧಿ ಕಾಯಿಲೆಗಳು ಇದ್ದವು. ಇನ್ನುಳಿದ ೧೦ ಮಂದಿಗೆ ಅದೇ ಮೊದಲ ಬಾರಿಗೆ ಹೃದಯ ಸಮಸ್ಯೆ ಕಂಡುಬAದಿತ್ತು. ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು. ೨೦೨೪ ಮತ್ತು ೨೦೨೫ರ ಮೇ-ಜೂನ್ ಅವಧಿಯಲ್ಲಿ ಬೆಂಗಳೂರು, ಮೈಸೂರು, ಕಲಬುರ್ಗಿ ಜಯದೇವ ಆಸ್ಪತ್ರೆಗಳಲ್ಲಿ ದಾಖಲಾದ ಹೃದ್ರೋಗ ಸಂಬAಧಿ ರೋಗಿಗಳು ಮತ್ತು ಅವರಲ್ಲಿ ಮೃತಪಟ್ಟವರ ದತ್ತಾಂಶಗಳನ್ನು ಪರಿಶೀಲಿಸಲಾಗಿದೆ. ಹೃದ್ರೋಗ ರೋಗಿಗಳ ಮತ್ತು ಹೃದಯಾಘಾತದ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ ಎಂದರು.
ಗುಜರಾತ್ನಲ್ಲಿ ಕುಸಿದ ಸೇತುವೆ
ಗುಜರಾತ್, ಜು. ೧೫: ಇಲ್ಲಿನ ಜುನಾಗಢ ಜಿಲ್ಲೆಯಲ್ಲಿ ದುರಸ್ತಿ ಸಮಯದಲ್ಲಿ ಸೇತುವೆಯ ಸ್ಲಾö್ಯಬ್ ಕುಸಿದು ಬಿದ್ದಿದೆ. ಸೇತುವೆಯಲ್ಲಿದ್ದ ೮ ಜನರು ೧೫ ಅಡಿ ಕೆಳಗೆ ಬಿದ್ದಿದ್ದಾರೆ. ಮಂಗ್ರೋಲ್ ತಾಲೂಕಿನ ಅಜಾಜ್ ಗ್ರಾಮದ ಜುನಾಗಢದಲ್ಲಿ ಈ ದುರಂತ ಸಂಭವಿಸಿದೆ. ಈ ಸೇತುವೆ ಕೆಶೋಡ್ ಅನ್ನು ಮಾಧವಪುರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ಅಲ್ಲಿ ಪ್ರತಿದಿನ ಅನೇಕ ವಾಹನಗಳು ಸಂಚರಿಸುತ್ತವೆ. ಇಂದು ಬೆಳಿಗ್ಗೆ ಸೇತುವೆಯ ದುರಸ್ತಿ ಕಾರ್ಯ ನಡೆಯುತ್ತಿತ್ತು. ನಂತರ ಇದ್ದಕ್ಕಿದ್ದಂತೆ ಸೇತುವೆಯ ಸ್ಲ್ಯಾಬ್ ಕುಸಿದು ಹಿಟಾಚಿ ಯಂತ್ರವು ದೊಡ್ಡ ಶಬ್ದದೊಂದಿಗೆ ಕೆಳಗೆ ಬಿದ್ದಿತು. ಸೇತುವೆಯ ಸ್ಲ್ಯಾಬ್ ಮೇಲೆ ಕೆಲವರು ನಿಂತಿದ್ದರು. ಸ್ಲ್ಯಾಬ್ ಬಿದ್ದಾಗ ಅವರು ನೇರವಾಗಿ ನದಿಗೆ ಬಿದ್ದರು. ಆದರೆ ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಂದಕಕ್ಕೆ ಉರುಳಿದ ವಾಹನ-ಐವರ ಸಾವು
ಜಮ್ಮು, ಜು. ೧೫: ಇಲ್ಲಿನ ದೋಡಾ ಜಿಲ್ಲೆಯಲ್ಲಿ ಮಂಗಳವಾರ ಪ್ರಯಾಣಿಕ ವಾಹನವೊಂದು ಕಂದಕಕ್ಕೆ ಉರುಳಿದ ಪರಿಣಾಮ ಒಬ್ಬ ಮಹಿಳೆ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ೧೭ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೋಡಾ-ಬಹತ್ ಮಾರ್ಗವಾಗಿ ಚಲಿಸುತ್ತಿದ್ದ ಟೆಂಪೊ ಟ್ರಾವೆಲ್ಲರ್ ಕಂದಕಕ್ಕೆ ಬಿದ್ದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರಣ ಈ ಘಟನೆ ನಡೆದಿದೆ. ಗಾಯಗೊಂಡಿರುವ ೧೭ ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೃತರನ್ನು ಮೊಹಮ್ಮದ್ ಅಶ್ರಫ್ (೩೫), ಮಂಗ್ತಾ ವಾನಿ (೫೧), ಅಟ್ಟಾ ಮೊಹಮ್ಮದ್ (೩೩), ತಾಲಿಬ್ ಹುಸೈನ್ (೩೫), ರಫೀಕಾ ಬೇಗಮ್ (೬೦) ಎಂದು ಗುರುತಿಸಲಾಗಿದೆ.
ರಾಹುಲ್ ಗಾಂಧಿಗೆ ಜಾಮೀನು
ಲಖನೌ, ಜು. ೧೫: ಭಾರತ್ ಜೋಡೊ ಯಾತ್ರೆ ವೇಳೆ ಸೇನಾಪಡೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬAಧಿಸಿದAತೆ ದಾಖಲಾಗಿರುವ ಮಾನಹಾನಿ ಪ್ರಕರಣದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಇಲ್ಲಿನ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿದೆ. ನ್ಯಾಯಾಧೀಶ ಅಲೋಕ್ ವರ್ಮಾ ಅವರು ರಾಹುಲ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ. ೨೦ ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶೂರಿಟಿ ಒದಗಿಸುವಂತೆ ನ್ಯಾಯಪೀಠ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ ೧೩ಕ್ಕೆ ಮುಂದೂಡಿದೆ.