ಇಂದು ಜಗತ್ತಿನಾದ್ಯಂತ "ವಿಶ್ವ ಉರಗ ದಿನ"ವೆಂದು ಆಚರಿಸಲಾಗುತ್ತದೆ. ಹಾಗಾಗಿ ಹಾವುಗಳ ಬಗ್ಗೆ ಕೆಲವೊಂದು ಮಾಹಿತಿ ಇಲ್ಲಿದೆ.
ಕೊಡಗು ಜಿಲ್ಲೆಯ ಕಾಡು ಮತ್ತು ವಾತಾವರಣ ಹಾವುಗಳಿಗೆ ಸೂಕ್ತವಾಗಿದ್ದು, ಇಲ್ಲಿ ಮಳೆಗಾಲದಲ್ಲಿ ಹಾವುಗಳು ಹೆಚ್ಚಾಗಿ ಕಂಡುಬರುತ್ತವೆ. ಇವುಗಳಲ್ಲಿ ನಾಲ್ಕು ವಿಧಗಳು ವಿಷಕಾರಿಯಾಗಿರುತ್ತವೆ. ಹಾವು ಕಂಡರೆ ಮನುಷ್ಯ ಭಯಪಡುವುದು ಸಹಜವಾದರೂ, ನಾವು ಕಾಣುವ ಹೆಚ್ಚಿನ ಹಾವುಗಳಲ್ಲಿ ವಿಷವಿಲ್ಲದೆ, ಪರಿಸರಕ್ಕೆ ಅವುಗಳ ಕೊಡುಗೆ ಅಪಾರವಿದೆ.
ಇಲ್ಲಿರುವ ವಿವಿಧ ಜಾತಿಯ ಹಾವುಗಳು
* ಕಾಳಿಂಗ ಸರ್ಪ: ವಿಶ್ವದ ಅತಿ ಉದ್ದದ ವಿಷಕಾರಿ ಹಾವು. ಕೊಡಗಿನ ದಟ್ಟ ಅರಣ್ಯ ಪ್ರದೇಶಗಳಲ್ಲಿ ಇರುವ ಇವು ಸಾಮಾನ್ಯವಾಗಿ ಮನುಷ್ಯರಿಂದ ದೂರವಿರಲು ಬಯಸುತ್ತವೆ. ಆದರೆ ಕೆರಳಿಸಿದಾಗ ಮಾತ್ರ ಅಪಾಯಕಾರಿ ಆಗಬಹುದು. ಇವುಗಳ ಮುಖ್ಯ ಆಹಾರ ಇತರ ಹಾವುಗಳು.
* ನಾಗರಹಾವು: ಭಾರತದಲ್ಲಿ ಇರುವ ಅತಿ ವಿಷಕಾರಿ ಹಾವು. ಇವು ಕಾಡು, ಕೃಷಿಭೂಮಿ, ಮನೆಗಳ ಬಳಿ ಕಾಣಿಸಿಕೊಳ್ಳುತ್ತವೆ. ಇವುಗಳ ಹೆಡೆಯಲ್ಲಿರುವ ಕನ್ನಡಕ ಗುರುತು, ಮತ್ತು ಬುಸುಗುಡುವ ಶಬ್ದದಿಂದ ಸುಲಭವಾಗಿ ಗುರುತಿಸಬಹುದು. ಇವು ಕೂಡ ತಮ್ಮಷ್ಟಕ್ಕೆ ಇರುವಂತಹವು. ಆದರೂ ನಾವು ಗೊತ್ತಿಲ್ಲದೆ ತುಳಿದರೆ ಕಚ್ಚಬಹುದು.
* ವೈಪರ್ (ಮಂಡಲ ಹಾವು): ಇದು ಕೂಡಾ ವಿಷಕಾರಿ ಹಾವು. ಕಂದು ಬಣ್ಣದ ದೇಹದ ಮೇಲೆ ದಪ್ಪನೆಯ ಕಪ್ಪು ವೃತ್ತಾಕಾರದ ಗುರುತುಗಳನ್ನು ಹೊಂದಿರುತ್ತದೆ. ಇವುಗಳು ಕಚ್ಚಿದ ಸ್ಥಳ ನಿಧಾನವಾಗಿ ಕೊಳೆಯುತ್ತಾ ಹೋಗುತ್ತದೆ.
* ಕಟ್ಟು ಹಾವು: ಇದು ರಾತ್ರಿಯ ವೇಳೆಯಲ್ಲಿ ಸಕ್ರಿಯವಾಗಿರುವ ಬಹಳ ವಿಷವುಳ್ಳ ಹಾವು. ಸಾಮಾನ್ಯವಾಗಿ ಕಡು ನೀಲಿ-ಕಪ್ಪು ಬಣ್ಣದಲ್ಲಿ, ಬಿಳಿ ಪಟ್ಟೆಗಳೊಂದಿಗೆ ಇರುತ್ತದೆ. ಇವು ರಾತ್ರಿ ಮನೆಗಳೊಳಗೆ ಪ್ರವೇಶಿಸುವ ಸಾಧ್ಯತೆಯಿದೆ. ಕೆಲವೊಮ್ಮೆ ಇವು ಕಚ್ಚುವುದು ತಿಳಿಯುವುದೇ ಇಲ್ಲ.
* ಕೇರೆ ಹಾವು: ವಿಷ ಇಲ್ಲದ ಇದು ಇಲಿ, ಕಪ್ಪೆ ಮತ್ತು ಇತರ ಸಣ್ಣ ಪ್ರಾಣಿಗಳನ್ನು ಬೇಟೆಯಾಡುತ್ತವೆ.
*ಹಸಿರು ಹಾವು: ಇದು ತೆಳ್ಳನೆಯ, ಹಸಿರು ಬಣ್ಣದ ಹಾವು. ಇದು ಮರಗಳ ಮೇಲೆ ವಾಸಿಸುತ್ತದೆ ಮತ್ತು ತನ್ನ ಸುತ್ತಮುತ್ತಲಿನ ಪರಿಸರದೊಂದಿಗೆ ಸುಲಭವಾಗಿ ವಿಲೀನಗೊಳ್ಳುತ್ತದೆ. ಇದು ಸ್ವಲ್ಪ ವಿಷಕಾರಿ ಆಗಿದ್ದರೂ, ಇದರ ವಿಷವು ಸಾಮಾನ್ಯವಾಗಿ ಮನುಷ್ಯರಿಗೆ ಅಪಾಯಕಾರಿಯಲ್ಲ.
* ನೀರು ಹಾವು: ವಿಷವಿಲ್ಲದ ಇವು ಸಾಮಾನ್ಯವಾಗಿ, ಕೆರೆ, ನದಿ, ಹಳ್ಳಗಳ ಬಳಿ ಕಂಡುಬರುತ್ತವೆ. ಇವು ಮೀನು ಮತ್ತು ಕಪ್ಪೆಗಳನ್ನು ತಿಂದು ಬದುಕುತ್ತವೆ. ಇವು ಗಾಬರಿಗೊಂಡಾಗ ಕಚ್ಚಿದರೂ ಇದರಿಂದ ಯಾವುದೇ ಅಪಾಯವಿಲ್ಲ.
* ಹೆಬ್ಬಾವು: ಇದು ಭಾರತದಲ್ಲಿ ಕಂಡುಬರುವ ಅತಿ ದೊಡ್ಡ, ವಿಷವಿಲ್ಲದ ಹಾವು. ಇವು ತಮ್ಮ ಬೇಟೆಯನ್ನು ಬಿಗಿಯಾಗಿ ಸುತ್ತಿ ಉಸಿರುಗಟ್ಟಿಸಿ ಸಾಯಿಸುತ್ತವೆ. ಇವು ಸಾಮಾನ್ಯವಾಗಿ ಕಾಡುಗಳಲ್ಲಿ, ಗುಹೆಗಳಲ್ಲಿ ಅಥವಾ ಬಂಡೆಗಳ ನಡುವೆ ವಾಸಿಸುತ್ತವೆ.
ಹಾವುಗಳ ಬಗ್ಗೆ ತಪ್ಪು ಕಲ್ಪನೆಗಳು...
ಹಾವುಗಳ ಬಗ್ಗೆ ಜಗತ್ತಿನಲ್ಲಿ ಬಹಳಷ್ಟು ಮೂಢನಂಬಿಕೆಗಳಿವೆ. "ಎಲ್ಲಾ ಹಾವುಗಳೂ ವಿಷಕಾರಿ, ಕಚ್ಚಿದರೆ ಬದುಕುಳಿಯುವುದು ಕಷ್ಟ" ಎಂಬ ತಪ್ಪು ಕಲ್ಪನೆ ಇದೆ. ಅದಕ್ಕಾಗಿಯೇ ಹಾವು ಕಂಡ ತಕ್ಷಣ ಬಹಳಷ್ಟು ಮಂದಿ ಅದನ್ನು ಕೊಲ್ಲಲು ಹೊರಡುತ್ತಾರೆ.
ವಾಸ್ತವವೇನೆಂದರೆ ಕರ್ನಾಟಕದಲ್ಲಿರುವ ಸುಮಾರು ೫೦ ಜಾತಿಯ ಹಾವುಗಳಲ್ಲಿ ಕೇವಲ ೪ ಜಾತಿಯ ಹಾವುಗಳು ಮಾತ್ರ ವಿಷಪೂರಿತವಾಗಿವೆ.
ಹಾವಿನ ದ್ವೇಷ ಹನ್ನೆರಡು ವರುಷ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ.
ಇತರ ಸಸ್ತನಿಗಳಿಗೆ ಹೋಲಿಸಿದರೆ ಹಾವುಗಳು ಸರಳವಾದ ಮೆದುಳನ್ನು ಹೊಂದಿರುವುದರಿAದ ಹೆಚ್ಚು ನೆನಪಿನ ಶಕ್ತಿ ಇರುವುದಿಲ್ಲ. ಅವು ಆಹಾರ ಇದ್ದ ಸ್ಥಳ ಅಥವಾ ಆಶ್ರಯವನ್ನು ನೆನಪಿಸಿ ಕೊಳ್ಳಬಹುದು.
ರೈತ ಮಿತ್ರ ಹಾವುಗಳು...
ನಮ್ಮ ರೈತರು ಇಲಿ ಮತ್ತು ಹೆಗ್ಗಣಗಳಿಂದಾಗಿ ತಮ್ಮ ಫಸಲಿನ ಶೇ. ೪೦ ರಷ್ಟು ಭಾಗವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಇಲಿಗಳ ಸಂತತಿ ಅತಿಯಾಗದಂತೆ ನೋಡಿಕೊಳ್ಳಲು ಪ್ರಕೃತಿ ಸೃಷ್ಟಿಸಿದ ಅಸ್ತç, ಹಾವು. ಅವು ಸುರಂಗದೊಳಗೆ ಸುಲಭವಾಗಿ ನುಗ್ಗಿ ಇಲಿಗಳನ್ನು ಬೇಟೆಯಾಡುತ್ತವೆ. ಒಂದು ಹಾವು ವಾರಕ್ಕೆ ಕನಿಷ್ಟ ಎರಡು ಇಲಿಗಳನ್ನು ತಿಂದು ವರ್ಷಕ್ಕೆ ನೂರಾರು ಇಲಿಗಳನ್ನು ನಾಶ ಮಾಡುತ್ತದೆ. ಇಂತಹ ರೈತ ಸ್ನೇಹಿ ಹಾವುಗಳನ್ನು ಕೊಲ್ಲುವುದು ತಪ್ಪು.
ಇಷ್ಟೆಲ್ಲಾ ಹೇಳಿದರೂ, ವಿಷಕಾರಿ ಹಾವು ಕಡಿತವು ಒಂದು ತುರ್ತು ಪರಿಸ್ಥಿತಿಯಾಗುತ್ತದೆ. ತಕ್ಷಣವೇ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಇದು ಮನುಷ್ಯನ ಸಾವಿಗೆ ಕಾರಣವಾಗಬಹುದು.
ಹಾವುಗಳ ವಿಷದಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ
* ನ್ಯೂರೋಟಾಕ್ಸಿಕ್ ವಿಷ: ಇದು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ನಾಗರಹಾವು, ಕಾಳಿಂಗ ಸರ್ಪ ಮತ್ತು ಸಮುದ್ರ ಹಾವುಗಳಲ್ಲಿ ಈ ವಿಷವಿರುತ್ತದೆ.
* ಹೆಮೋಟಾಕ್ಸಿಕ್ ವಿಷ: ಇದು ಹೃದಯ- ರಕ್ತನಾಳದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಕಟ್ಟ ಹಾವು, ಮತ್ತು ಮಂಡಲ ಹಾವುಗಳಲ್ಲಿ ಈ ವಿಷ ಕಂಡುಬರುತ್ತದೆ.
* ಸೈಟೊಟಾಕ್ಸಿಕ್ ವಿಷ: ಇದು ಸ್ಥಳೀಯ ಜೀವಕೋಶಗಳು ಮತ್ತು ಅಂಗಾAಶಗಳಿಗೆ ಹಾನಿ ಮಾಡುತ್ತದೆ. ಮಂಡಲ ಹಾವು ಮತ್ತು ನಾಗರಹಾವುಗಳ ಕಡಿತದಲ್ಲಿ ಇದು ಕಂಡುಬರುತ್ತದೆ.
ಹಾವು ಕಡಿತದ ಸಾಮಾನ್ಯ ಲಕ್ಷಣಗಳು...
* ಕಚ್ಚಿದ ಜಾಗದಲ್ಲಿ ಎರಡು ಚುಚ್ಚಿದ ಗುರುತುಗಳು (ಪಂಕ್ಚರ್ ಮಾರ್ಕ್), ಆ ಸ್ಥಳದ ಸುತ್ತ ಕೆಂಪು ಬಣ್ಣ, ಊತ, ರಕ್ತಸ್ರಾವ ಅಥವಾ ಗುಳ್ಳೆಗಳು, ತೀವ್ರವಾದ ನೋವು, ವಾಕರಿಕೆ, ಪಾರ್ಶ್ವವಾಯು, ಕಣ್ಣುರೆಪ್ಪೆಗಳು ಇಳಿ ಬೀಳುವುದು, ನುಂಗಲು, ಉಸಿರಾಡಲು ಕಷ್ಟ, ವೇಗದ ಹೃದಯ ಬಡಿತ, ದುರ್ಬಲ ನಾಡಿ, ಕಡಿಮೆ ರಕ್ತದೊತ್ತಡ, ದೃಷ್ಟಿ ಮಂಜಾಗುವುದು, ಬಾಯಲ್ಲಿ ಜೊಲ್ಲು ಸುರಿಯುವುದು, ಹೆಚ್ಚು ಬೆವರುವುದು, ಶರೀರದ ಮರಗಟ್ಟುವಿಕೆ ಅಥವಾ ಜುಮ್ಮೆನ್ನುವುದು, ಸ್ನಾಯು ಸೆಳೆತ, ವಾಂತಿ, ಭೇದಿ, ಚರ್ಮದ ಕೆಳಗೆ ರಕ್ತದ ಕಲೆಗಳು ಕೆಲವೊಂದು ಲಕ್ಷಣಗಳು. ಹೆಮೋಟಾಕ್ಸಿಕ್ ವಿಷದಲ್ಲಿ ಸರಿಯಾಗಿ ಚಿಕಿತ್ಸೆ ಮಾಡದಿದ್ದರೆ ಆ ಅಂಗವನ್ನು ಕತ್ತರಿಸಬೇಕಾಗಬಹುದು (ಆಂಪ್ಯುಟೇಷನ್).
ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು ಎಂಬುದು ಬಹಳ ಮುಖ್ಯ
* ಶಾಂತವಾಗಿರಿ ಮತ್ತು ಅಲುಗಾಡಬೇಡಿ. ಗಾಬರಿಗೊಂಡರೆ ರಕ್ತದ ಒತ್ತಡ ಹೆಚ್ಚಾಗಿ ವಿಷ ಬೇಗನೆ ಹರಡುತ್ತದೆ.
* ಕಚ್ಚಿದ ಜಾಗವನ್ನು ಹೃದಯ ಮಟ್ಟಕ್ಕಿಂತ ಕೆಳಗೆ ಇಡಿ.
* ಊತ ಪ್ರಾರಂಭವಾಗುವ ಮೊದಲು ಉಂಗುರ, ಬಳೆ, ಕೈಗಡಿಯಾರಗಳನ್ನು ತೆಗೆದು ಹಾಕಿ.
* ಕಚ್ಚಿದ ಜಾಗವನ್ನು ಸಾಬೂನು ಮತ್ತು ನೀರಿನಿಂದ ತೊಳೆದು, ಸ್ವಚ್ಛವಾದ ಬಟ್ಟೆಯಿಂದ ಮುಚ್ಚಿ.
* ಹಾವನ್ನು ಗುರುತಿಸುವುದು ಸರಿಯಾದ ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಸಾಧ್ಯವಾದರೆ, ಸುರಕ್ಷಿತ ದೂರದಿಂದ ಹಾವಿನ ಫೋಟೋ ತೆಗೆಯಿರಿ.
ಹಾವು ಕಚ್ಚಿದಾಗ ಮಾಡಬಾರದ ತಪ್ಪುಗಳು...
* ಸಾಯುತ್ತಿರುವ ಹಾವು ಕೂಡ ಕಚ್ಚುವ ಸಾಧ್ಯತೆ ಇರುವುದರಿಂದ ಅದನ್ನು ಮುಟ್ಟಬೇಡಿ.
* ಗಾಯದ ಮೇಲ್ಭಾಗದಲ್ಲಿ ಹಗ್ಗವನ್ನು ಬಿಗಿಯಾಗಿ ಕಟ್ಟುವುದರಿಂದ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ.
* ಗಾಯವನ್ನು ಕತ್ತರಿಸಬೇಡಿ ಅಥವಾ ವಿಷವನ್ನು ಬಾಯಿಯಿಂದ ಹೀರಿಕೊಳ್ಳಬೇಡಿ. ಇದು ಗಾಯವನ್ನು ದೊಡ್ಡದು ಮಾಡಿ, ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
* ನೋವು ಕಡಿಮೆ ಮಾಡಲು ಮದ್ಯಪಾನ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ.
ವೈದ್ಯಕೀಯ ಚಿಕಿತ್ಸೆ...
ಪ್ರತಿವಿಷವು (ಆ್ಯಂಟಿ ವೆನಮ್) ಹಾವು ಕಡಿತಕ್ಕೆ ಇರುವ ಏಕೈಕ ಪರಿಣಾಮಕಾರಿ ಚಿಕಿತ್ಸೆಯಾಗಿರುವುದರಿಂದ ತುರ್ತು ವೈದ್ಯಕೀಯ ಆರೈಕೆ ಅತ್ಯಗತ್ಯ. ವೈದ್ಯರಿಗೆ ಹಾವಿನ ಬಗ್ಗೆ ಸರಿಯಾದ ವಿವರಣೆ ನೀಡುವುದರಿಂದ ಸೂಕ್ತವಾದ ಪ್ರತಿವಿಷ ನೀಡಲು ಸಹಾಯವಾಗುತ್ತದೆ.
ಹಾವು ಕಡಿತ ತಡೆಗಟ್ಟಲು ಮುನ್ನೆಚ್ಚರಿಕೆಗಳು...
* ಮನೆ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ.
*ಹಾವುಗಳಿಗೆ ಆಶ್ರಯ ತಾಣವಾಗುವ ಹಳೆಯ ಮರದ ತುಂಡುಗಳು ಅಥವಾ ಕಲ್ಲುಗಳನ್ನು ರಾಶಿ ಹಾಕಬೇಡಿ.
* ಇಲಿ-ಹೆಗ್ಗಣಗಳ ಸಂಖ್ಯೆ ನಿಯಂತ್ರಿಸಿ.
* ಮನೆ ಬಾಗಿಲು, ಕಿಟಕಿಗಳನ್ನು ಸಾಧ್ಯವಾದಷ್ಟು ಮುಚ್ಚಿಡಿ.
* ಹಾವುಗಳಿಗೆ ಹೊರ ಕಿವಿ ಇಲ್ಲದಿರುವುದರಿಂದ ಅವು ನಿಮ್ಮ ನಡೆಯ ಕಂಪನಗಳನ್ನು ಮಾತ್ರ ಗ್ರಹಿಸುತ್ತವೆ. ನೀವು ಅಲುಗಾಡದೆ ಸುಮ್ಮನಿದ್ದರೆ, ಅವು ನಿಮ್ಮನ್ನು ಅಪಾಯವೆಂದು ಪರಿಗಣಿಸದೆ ಅಲ್ಲಿಂದ ಹೋಗುತ್ತವೆ.
* ಹಾವುಗಳಿರುವ ಸ್ಥಳಗಳಲ್ಲಿ ರಾತ್ರಿ ಸಂಚರಿಸುವಾಗ ಸೂಕ್ತ ಪಾದರಕ್ಷೆ (ಶೂ ಅಥವಾ ಗಂಬೂಟ್) ಮತ್ತು ಟಾರ್ಚ್ ಬೆಳಕು ಬಳಸಿ. ಕೊಡಗಿನಲ್ಲಿ ಜೀವಿಸುವಾಗ, ಪ್ರಕೃತಿಯನ್ನು ಆನಂದಿಸುವಾಗ, ಹಾವುಗಳ ಬಗ್ಗೆ ತಿಳಿದು, ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಮತ್ತು ತುರ್ತು ಸಂದರ್ಭದಲ್ಲಿ ತಕ್ಷಣವೇ ವೈದ್ಯಕೀಯ ನೆರವು ಪಡೆಯುವುದು ಬಹಳ ಮುಖ್ಯ. - ಡಾ. ಕೆ.ಬಿ. ಸೂರ್ಯಕುಮಾರ್