ಮಡಿಕೇರಿ. ಜು. ೧೫: ಕೊಡಗು ಜಿಲ್ಲೆಗೆ ಈ ವರ್ಷದ ಜನವರಿಯಿಂದ ಜೂನ್ ಅಂತ್ಯದವರೆಗೆ ೧೦.೫೦ ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಕೊಡಗು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್ ಮಾಹಿತಿ ನೀಡಿದರು.

ಇಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಂಡು ಬಂದ ಅಭಿವೃದ್ಧಿ ಕುರಿತು ವಿವರಿಸಿದರು.

ಹೊಸ ಪ್ರವಾಸೋದ್ಯಮ ನೀತಿ ಅಡಿಯಲ್ಲಿ ಕರ್ನಾಟಕದಲ್ಲಿ ೭೭೮ ಪ್ರವಾಸಿ ತಾಣಗಳನ್ನು ಗುರುತಿಸಿದ್ದು ಕೊಡಗು ಜಿಲ್ಲೆಯಲ್ಲಿ ೨೩ ಪ್ರವಾಸಿ ತಾಣಗಳನ್ನು ಸರ್ಕಾರ ಗುರುತಿಸಿದೆ ಎಂದ ಅವರು, ಗದ್ದುಗೆ, ಕೋಟೆ, ನಾಲ್ಕುನಾಡು ಅರಮನೆ, ಅಬ್ಬಿ ಜಲಪಾತ ಮಾಂದಲ್ಪಟ್ಟಿ, ಭಾಗಮಂಡಲ, ತಲಕಾವೇರಿ, ರಾಜಾಸೀಟ್, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ, ಮಲ್ಲಳ್ಳಿ ಜಲಪಾತ, ನಿಶಾನಿ ಮೊಟ್ಟೆ, ಚೇಲಾವರ ಜಲಪಾತ, ಇರ್ಪು ಜಲಪಾತ, ದುಬಾರೆ, ಚೆಟ್ಟಳ್ಳಿ ಫಾರ್ಮ್, ಹೊನ್ನಮ್ಮನಕೆರೆ, ಮಕ್ಕಳಗುಡಿ ಬೆಟ್ಟ, ಚಿಕ್ಲಿ ಹೊಳೆ, ಕುಂದಬೆಟ್ಟ, ಬರಪೊಳೆ ರ‍್ಯಾಫ್ಟಿಂಗ್, ಜನರಲ್ ತಿಮ್ಮಯ್ಯ ಮ್ಯೂಸಿಯಂ ಹಾಗೂ ನಾಗರಹೊಳೆ ರಾಷ್ಟಿçÃಯ ಉದ್ಯಾನವನಗಳು ಈ ಗುರುತಿಸಲ್ಪಟ್ಟ ತಾಣಗಳಲ್ಲಿ ಸೇರಿವೆ ಎಂದು ವಿವರವಿತ್ತರು.

ತಲಕಾವೇರಿ ಭಾಗಮಂಡಲ ದೇವಾಲಯಗಳನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈ ಬಿಟ್ಟು ಧಾರ್ಮಿಕ ಕ್ಷೇತ್ರಗಳ ಪಟ್ಟಿಗೆ ಸೇರಿಸುವಂತೆ ಆಯುಕ್ತರನ್ನು ಕೋರಲಾಗಿದೆ ಎಂದು ಅವರು ಸಭೆಗೆ ತಿಳಿಸಿದರು.

ಸರಕಾರ, ಈ ಕ್ಷೇತ್ರಗಳನ್ನು ಗುರುತಿಸಿರುವುದರಿಂದ ಹೆಚ್ಚಿನ ಅನುದಾನದ ಮೂಲಕ ಅಭಿವೃದ್ಧಿ ಸುಲಭ ಸಾಧ್ಯ ಎಂದು ಹೇಳಿದರು.

ಮಾಂದಲ್‌ಪಟ್ಟಿ ಆಯ್ಕೆ

ಪ್ರವಾಸೋದ್ಯಮ ಇಲಾಖೆ, ಜಿಲ್ಲೆಯ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿವಿಧ ಪ್ರವಾಸಿ ತಾಣಗಳಿಗೆ ೨೮೧೩.೯ ಲಕ್ಷ ರೂಪಾಯಿ ಅನುದಾನದಲ್ಲಿ ೧೪ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಾರ್ಯರೂಪ ಹಮ್ಮಿಕೊಂಡಿದೆ ಎಂದ ಅವರು, ‘ಒಂದು ಜಿಲ್ಲೆ ಒಂದು ತಾಣ’ ಅಡಿ ಕೊಡಗು ಜಿಲ್ಲೆಯ ಮಾಂದಲಪಟ್ಟಿ ಪ್ರವಾಸಿ ತಾಣವನ್ನು ಸರ್ಕಾರ ಆಯ್ಕೆ ಮಾಡಿದ್ದು ಅದರಂತೆ ಜಂಕ್ಷನ್‌ನಲ್ಲಿ ಗಾಳಿಬೀಡು ಪಂಚಾಯಿತಿ ವತಿಯಿಂದ ೫೦ ಲಕ್ಷ ರೂಪಾಯಿ ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದೆ ಬಂದಿದೆ ಎಂದರು. ಮಾಂದಲಪಟ್ಟಿ ಪ್ರದೇಶವು ಅರಣ್ಯ ಇಲಾಖೆಗೆ ಒಳಪಡುವುದರಿಂದ ಸದರಿ ಜಾಗದಲ್ಲಿ ಅರಣ್ಯ ಇಲಾಖೆಯಿಂದ ರಸ್ತೆ ದುರಸ್ತಿ ಹಾಗೂ ಇತರ ಕಾಮಗಾರಿಗಳನ್ನು ಕಲ್ಪಿಸಲು ಅರಣ್ಯ ಇಲಾಖೆ ೩ ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ಮಾಹಿತಿ ನೀಡಿದರು.

ಕೊಡವ ಹೆರಿಟೇಜ್ ಕೇಂದ್ರವನ್ನು ಅಭಿವೃದ್ಧಿಪಡಿಸುವ ಸಂಬAಧ ಐದು ಕೋಟಿ ಅಂದಾಜು ಮೊತ್ತದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಹಾಗೂ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಅನುಮತಿ ಕೋರಲಾಗಿದೆ ಎಂದರು.

ಅಬ್ಬಿಫಾಲ್ಸ್ನಲ್ಲಿ ದುರಸ್ತಿಗೊಂಡಿರುವ ತೂಗು ಸೇತುವೆಯನ್ನು ಸರಿಪಡಿಸಲು ತಜ್ಞರು ಸ್ಥಳ ಪರಿಶೀಲನೆ ಮಾಡಿ ಅಲ್ಲಿನ ಮಣ್ಣು, ಸೇತುವೆ ನಿರ್ಮಾಣಕ್ಕೆ ಸೂಕ್ತವಲ್ಲ ಎಂದು ವರದಿ ನೀಡಿರುವುದರಿಂದ ಯಾವುದೇ ಹೊಸ ನಿರ್ಮಾಣ ಸಾಧ್ಯವಿಲ್ಲ ಎಂದರು. ಅಲ್ಲಿ ವಾಚ್ ಟವರ್ ಹಾಗೂ ಮಡಿಕೇರಿಯ ಕೋಟೆಗೆ ಸೌಂಡ್ ಅಂಡ್ ಲೈಟ್ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ, ಗದ್ದುಗೆ ಪ್ರವಾಸಿ ತಾಣದಲ್ಲಿ ಉದ್ಯಾನವನ್ನು ತೋಟಗಾರಿಕಾ ಇಲಾಖೆಯಿಂದ ಅಭಿವೃದ್ಧಿಪಡಿಸಲು ೯೯.೪೫ ಲಕ್ಷಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

ಪೊನ್ನAಪೇಟೆ ತಾಲೂಕು ಇರ್ಪು ಫಾಲ್ಸ್ ಅಭಿವೃದ್ಧಿಗೆ ೨೫ ಲಕ್ಷ, ವೀರಾಜಪೇಟೆ ತಾಲೂಕು ಮಲೆ ತಿರಿಕೆ ಈಶ್ವರ ದೇವಾಲಯ ಅಭಿವೃದ್ಧಿಗೆ ೨೫ ಲಕ್ಷ, ಪೆರುಂಬಾಡಿ ಕೆರೆ ಅಭಿವೃದ್ಧಿಗೆ ೨೫ ಲಕ್ಷ, ಪೊನ್ನಂಪೇಟೆ ತಾಲೂಕು ಬರ್ಪುಹೊಳೆ ಸ್ಪಾಟ್ ಮತ್ತು ರಿವರ್ ರ‍್ಯಾಫ್ಟಿಂಗ್ ೪ನಾಲ್ಕನೇ ಪುಟಕ್ಕೆ (ಮೊದಲ ಪುಟದಿಂದ) ಅಭಿವೃದ್ಧಿಗೆ ೨೫ ಲಕ್ಷಗಳನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅನಿತಾ ವಿವರಿಸಿದರು.

ಗೌರಿ ಕೆರೆ ಅಭಿವೃದ್ಧಿ

ಪೊನ್ನಂಪೇಟೆ ತಾಲೂಕಿನ ಗೌರಿ ಕೆರೆಯನ್ನು ಅಭಿವೃದ್ಧಿಪಡಿಸಲು ೮೭೦.೨೧ ಲಕ್ಷಗಳ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಪ್ರವಾಸೋದ್ಯಮ ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಲಾಗಿದ್ದು, ಒಟ್ಟು ೨೫ ಕೋಟಿ ವೆಚ್ಚದಲ್ಲಿ ಜಿಲ್ಲೆಯ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಲಾದ ಬಗ್ಗೆ ಸಭೆಗೆ ಅವರು ತಿಳಿಸಿದರು.

ತಲಾ ಒಂದು ಕೋಟಿ ವೆಚ್ಚದಲ್ಲಿ ಮಾಂದಲಪಟ್ಟಿ, ಮಕ್ಕಳಗುಡಿ ಯಡದಂಡೆ ಫಾಲ್ಸ್, ಕುಮಾರಧಾರ ವಾಟರ್ ರಾಫ್ಟಿಂಗ್ ಮತ್ತು ಕಯಾಕಿಂಗ್, ಹೊನ್ನಮನ ಕೆರೆ, ಹಾರಂಗಿ ವೃಕ್ಷೋದ್ಯಾನವನ, ೫ ಕೋಟಿ ವೆಚ್ಚದಲ್ಲಿ ಮಾಂದಲಪಟ್ಟಿ ಪ್ರವಾಸಿ ತಾಣ, ಕೋಟೆಬೆಟ್ಟ ಮತ್ತು ಗರ್ವಾಲೆ ಜಲಪಾತದಲ್ಲಿ ಮೂಲಭೂತ ಸೌಕರ್ಯ, ೧.೫ ಕೋಟಿ ವೆಚ್ಚದಲ್ಲಿ ದೊಡ್ಡಕಲ್ಲು ಬೆಟ್ಟದಲ್ಲಿ ಪ್ರವಾಸಿ ಸೌಕರ್ಯ, ೧.೧ ಕೋಟಿ ವೆಚ್ಚದಲ್ಲಿ ರಾಜಾಸೀಟು ಅಭಿವೃದ್ಧಿ, ಮೂರು ಕೋಟಿ ವೆಚ್ಚದಲ್ಲಿ ಕೊಡವ ಹೆರಿಟೇಜ್ ಸೆಂಟರ್‌ಗೆ ಅವಶ್ಯವಿರುವ ಮೂಲಭೂತ ಸೌಕರ್ಯ ಹಾಗೂ ೩.೪ ಕೋಟಿ ವೆಚ್ಚದಲ್ಲಿ ಸೋಮವಾರಪೇಟೆ ತಾಲೂಕು, ಕುಸಬೂರು ಗ್ರಾಮದ ಬೇಲೂರು ಕ್ಲಬ್ ಗಾಲ್ಫ್ ಕೋರ್ಸ್ ಅಲ್ಲಿರುವ ೭.೧೨ ಎಕರೆ ಜಮೀನಿನಲ್ಲಿ ಪ್ರವಾಸಿಗರಿಗೆ ರಸ್ತೆ ಬದಿಯ ಅನುಕೂಲಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ಇತ್ತರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚೇಲಾವರದಲ್ಲಿ ಪಾರ್ಕಿಂಗ್ ಮತ್ತು ಸೇತುವೆ ನಿರ್ಮಾಣಕ್ಕೆ ಒಂದು ಕೋಟಿ, ಮತ್ತಿಗೋಡು ಆನೆ ಶಿಬಿರದ ಪಕ್ಕ ರಸ್ತೆ ಬದಿ ಅನುಕೂಲಕ್ಕೆ ಎರಡು ಕೋಟಿ, ಕುಂದಬೆಟ್ಟ ಅಭಿವೃದ್ಧಿಗೆ ೩ ಕೋಟಿ, ಇರ್ಪು ಫಾಲ್ಸ್ನಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಎರಡು ಕೋಟಿ, ಕಬ್ಬೆ ಹಿಲ್ಸ್ ಅಭಿವೃದ್ಧಿಗೆ ೧.೫ ಕೋಟಿ... ಹೀಗೆ ಸುಮಾರು ೧೦ ಕೋಟಿಯ ಯೋಜನೆಯನ್ನು ರೂಪಿಸಿ ಕೇಂದ್ರ ಕಚೇರಿಗೆ ಕಳುಹಿಸಲಾದ ಬಗ್ಗೆ ಅನಿತಾ ಭಾಸ್ಕರ್ ಸಭೆಯ ಮುಂದೆ ಮಾಹಿತಿ ಇತ್ತರು.

ಜಲಕ್ರೀಡೆ

ಸೋಮವಾರಪೇಟೆ ಹೊನ್ನಮ್ಮನ ಕೆರೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಜಲ ಸಾಹಸ ಕ್ರೀಡೆಗಳನ್ನು ನಡೆಸಲು ತೀರ್ಮಾನಿಸಿದ್ದು ಈ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಅಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ ನಾಲ್ಕು ಸೆಂಟ್ ಜಾಗದಲ್ಲಿ ಮೂಲಭೂತ ಸೌಕರ್ಯ ಹಾಗೂ ಅಡುಗೆ ಕೋಣೆಗಳನ್ನು ನಿರ್ಮಿಸಲಿದ್ದು ಹೆಚ್ಚಿನ ಅಭಿವೃದ್ಧಿಗೆ ಗ್ರಾಮಸ್ಥರು ಊರಿನ ಜಾಗವನ್ನು ನೀಡುವುದಾಗಿ ತಿಳಿಸಿದ ಬಗ್ಗೆ ಸಭೆಯ ಗಮನ ಸೆಳೆದರು.

ಜಲ ಕ್ರೀಡೆಯನ್ನು ಉತ್ತೇಜನಗೊಳಿಸಲು ಕೊಡಗು ಜಿಲ್ಲೆಯ ವಿವಿಧೆಡೆ ಕಯಾಕಿಂಗ್ ನಡೆಸಲು ೧೩ ಅರ್ಜಿಗಳು ಬಂದಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೆ ೨೩೦೦ ಹೋಂಸ್ಟೇಗಳು ಆನ್‌ಲೈನ್‌ನಲ್ಲಿ ನೋಂದಾಯಿಸಿ ಪ್ರಮಾಣಪತ್ರಗಳನ್ನು ಪಡೆದ ಬಗ್ಗೆ ಮಾಹಿತಿ ನೀಡಿದರು.

ಸೋಮವಾರಪೇಟೆ ತಾಲೂಕಿನ ಮಕ್ಕಳ ಗುಡಿಬೆಟ್ಟ ಪ್ರವಾಸಿ ತಾಣವನ್ನು ಖಾಸಗಿ ರೆಸಾರ್ಟ್ನವರು ತಮ್ಮ ಸಿ.ಎಸ್.ಆರ್. ಅನುದಾನದಲ್ಲಿ ಅಭಿವೃದ್ಧಿಪಡಿಸಲು ಮುಂದೆ ಬಂದ ಬಗ್ಗೆ ಸಭೆಯ ಗಮನಕ್ಕೆ ತಂದ ಅನಿತಾ ಅವರು, ಮಲ್ಲಳ್ಳಿ ಜಲಪಾತದ ಬಳಿ ರೋಪ್‌ವೇಗೆ ಸಂಬAಧಿಸಿದAತೆ ಸರ್ವೆ ಕಾರ್ಯ ನಡೆದಿದೆ ಎಂದರು.

ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಒಂಬತ್ತು ಪ್ರವಾಸಿ ಮಿತ್ರರುಗಳನ್ನು ನಿಯೋಜಿಸಿದ್ದು ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಟ್ಯಾಕ್ಸಿಗಳಿಗೆ ಬ್ಯಾಗ್

ಕೊಡಗು ಜಿಲ್ಲೆಯಲ್ಲಿ ಶೂನ್ಯ ತ್ಯಾಜ್ಯ ಪ್ರವಾಸವನ್ನು ಜಿಲ್ಲಾಧಿಕಾರಿಗಳು ಜಾರಿಗೊಳಿಸಿದ್ದು ಅದರಂತೆ ಜಿಲ್ಲೆಯಲ್ಲಿರುವ ಪ್ರವಾಸಿ ಟ್ಯಾಕ್ಸಿಗಳಲ್ಲಿ ವಾಹನದಿಂದ ಹೊರಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಸಾಡದಂತೆ ತಡೆಯಲು ಬ್ಯಾಗುಗಳನ್ನು ವಿತರಿಸಲಿದ್ದು ತಾ.೨೧ರಂದು ಪಾಲಿಬೆಟ್ಟದಲ್ಲಿ ಈ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ತಿಳಿಸಿದರು.

ಜಿಲ್ಲಾ ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ಮೋಂತಿ ಗಣೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೆಹರು, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎನ್.ಎಸ್.ಪಣೀಂದ್ರ, ಪರಿಸರ ಅಧಿಕಾರಿ ರಘುರಾಮ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ಕೆಆರ್‌ಐಡಿಎಲ್ ಸಂಸ್ಥೆಯ ಎಂಜಿನಿಯರ್ ಪ್ರಮೋದ್, ಕೊಡಗು ಜಿಲ್ಲಾ ಟೂರ್ ಅಂಡ್ ಟ್ರಾವೆಲ್ ಅಧ್ಯಕ್ಷರಾದ ವಸಂತ್, ಸೋಮವಾರಪೇಟೆ ತಾಲೂಕಿನ ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ರೋಹಿತ್, ದುಬಾರೆ ರಿವರ್ ರ‍್ಯಾಫ್ಟಿಂಗ್ ಅಸೋಷಿಯೇಷನ್ ಅಧ್ಯಕ್ಷರಾದ ಚಂಗಪ್ಪ, ಬರಪೊಳೆ ರಿವರ್ ರ‍್ಯಾಫ್ಟಿಂಗ್ ಅಧ್ಯಕ್ಷರಾದ ರತನ್ ಸಿ.ಎಸ್., ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರಾದ ಜತಿನ್ ಇತರರು ಇದ್ದರು.