ಚೆಯ್ಯಂಡಾಣೆ, ಜು. ೧೫: ನರಿಯಂದಡ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು, ಭತ್ತದ ಗದ್ದೆಗಳು, ಕಾಫಿ ತೋಟಗಳಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿ ಫಸಲು ನಾಶಗೊಳಿಸುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಇಲ್ಲಿನ ಕೃಷಿಕರೊಬ್ಬರು ದಾಳಿ ಮಾಡುತ್ತಿರುವ ಗದ್ದೆಯಲ್ಲಿಯೇ ಮರಳಿ ನಾಟಿ ಕಾರ್ಯ ನಡೆಸುವ ಮೂಲಕ ಕೃಷಿ ಪ್ರೇಮ ಮೆರೆಯುತ್ತಿದ್ದಾರೆ.
ಪೊಕ್ಕುಳಂಡ್ರ ದನೋಜ್ ಕುಮಾರ್ ಅವರಿಗೆ ಸೇರಿದ ಒಟ್ಟು ೪ ಎಕರೆಯ ೬ ಗದ್ದೆಯಲ್ಲಿ ೧೨ ಜನ ಹಾಡು ಹಾಡುತ್ತ, ಕುಣಿಯುತ್ತ ಬಿರುಸಿನ ಮಳೆಯ ನಡುವೆ ಭತ್ತ ನಾಟಿ ಮಾಡುವ ಮೂಲಕ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಗಮನ ಸೆಳೆಯುತ್ತಿದೆ.
ಕಳೆದ ವರ್ಷ ಅರಣ್ಯ ಇಲಾಖೆ ರೈತರು ಕೃಷಿ ಚಟುವಟಿಕೆ ಕೈಗೊಳ್ಳುವ ಸಂದರ್ಭದಲ್ಲಿ ಗನ್ಮ್ಯಾನ್ ನಿಯೋಜಿಸುವ ಭರವಸೆ ನೀಡಿದ್ದು, ಅದು ಕೂಡ ಅನುಷ್ಠಾನಕ್ಕೆ ಬಂದಿಲ್ಲ. ಈ ವರ್ಷ ಕಾಡಾನೆ ಹಾವಳಿ ಇದ್ದರೂ ಕೂಡ ಗದ್ದೆಗಳಲ್ಲಿ ಭತ್ತದ ನಾಟಿ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.
ಭತ್ತದ ಕಣಜವಾಗಿದ್ದ ಕೊಡಗಿನಲ್ಲಿ ಪ್ರತಿಕೂಲ ಹವಾಮಾನ, ವನ್ಯಜೀವಿ ದಾಂಧಲೆಯಿAದ ಕೃಷಿಕರು ಭತ್ತ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ನಡುವೆ ದನೋಜ್ ಅವರು ಮಾಡಿರುವ ಈ ಕಾರ್ಯ ಇತರರಿಗೆ ಪ್ರೇರಣೆಯನ್ನು ನೀಡಿದೆ.
ಕಾಡಾನೆ ಹಾವಳಿ ಕಾರಣದಿಂದ ಭತ್ತ ಕೃಷಿಯಿಂದ ದೂರ ಉಳಿದರೆ ಭವಿಷ್ಯದಲ್ಲಿ ಆಹಾರ ಕ್ಷಾಮ ಎದುರಾಗಬಹುದು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾಡಾನೆ ಹಾವಳಿಗೆ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ಶಾಶ್ವತ ಕಾರ್ಯಯೋಜನೆ ರೂಪಿಸಬೇಕು ಎಂಬುದು ಕೃಷಿಕರ ಆಗ್ರಹವಾಗಿದೆ. - ಅಶ್ರಫ್