ನಾಪೋಕ್ಲು, ಜು. ೧೫: ಮಾದಕವಸ್ತು ದುಶ್ಚಟಗಳಿಂದ ದೂರವಿರಿ, ಕಾನೂನನ್ನು ಪಾಲಿಸಿ ಎಂದು ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಬಿ.ಜಿ. ರಾಘವೇಂದ್ರ ಹೇಳಿದರು.
ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಲಮುರಿ ಗ್ರಾಮದ ಕೂಡುಪರಂಬು ಕಾಲೋನಿಯಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯದವರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಭೆಯಲ್ಲಿ ಪೋಕ್ಸೋ ಕಾಯ್ದೆ, ಅಟ್ರಾಸಿಟಿ ಕಾಯ್ದೆ, ಅಪ್ರಾಪ್ತ ವಯಸ್ಕರು ಮಾಡುವ ವಾಹನ ಚಾಲನೆ ಬಗ್ಗೆ ಮಾದಕ ವಸ್ತು ಸೇವನೆ ಬಗ್ಗೆ ತಿಳಿಸಿ ಅದರಿಂದ ಸಮಾಜಕ್ಕೆ ಆಗುವ ಹಾನಿಯ ಬಗ್ಗೆ ವಿವರಿಸಿದರು. ಎಲ್ಲರೂ ಕಾನೂನನ್ನು ತಪ್ಪದೆ ಪಾಲಿಸಬೇಕು ಎಂದರು. ಸಭೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯರು, ಕುಂದುಕೊರತೆಗಳನ್ನು ಠಾಣಾಧಿಕಾರಿಯ ಗಮನಕ್ಕೆ ತಂದರು.
ಈ ಸಂದರ್ಭ ಕಾಲೋನಿ ನಿವಾಸಿಗಳು, ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.