ಮಡಿಕೇರಿ, ಜು. ೧೬: ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಿಂದಾಗಿ ಲಾರಿಗಳನ್ನೇ ನಂಬಿಕೊAಡು ಬದುಕು ಸಾಗಿಸುತ್ತಿರುವವರಿಗೆ ಸಂಕಷ್ಟ ಎದುರಾಗಿದ್ದು, ಈ ನಿಟ್ಟಿನಲ್ಲಿ ತಾ. ೧೮ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕುಶಾಲನಗರದ ಕೊಡಗು ಲಾರಿ ಚಾಲಕರ ಸಂಘದ ಅಧ್ಯಕ್ಷ ಮಹಮ್ಮದ್ ಮಾತನಾಡಿ; ಜಿಲ್ಲಾಧಿಕಾರಿಗಳು ಮೂರು ತಿಂಗಳುಗಳ ಕಾಲ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ್ದಾರೆ. ಆದೇಶಕ್ಕೆ ಮನ್ನಣೆ ನೀಡಿ ಜಿಲ್ಲೆಯ ಎಲ್ಲಾ ಲಾರಿ ಮಾಲೀಕರುಗಳು ಲಾರಿ ಸಂಚಾರ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಲಾರಿ ಚಾಲಕರು, ಕಾರ್ಮಿಕರು, ಲಾರಿಗಳನ್ನೇ ನಂಬಿಕೊAಡಿರುವ ಇತರ ಅವಲಂಬಿತರಿಗೆ ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಮಾಲೀಕರುಗಳಿಗೆ ತೆರಿಗೆ ಕಟ್ಟಲೂ ಅನಾನುಕೂಲವಾಗುತ್ತಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಕಂಟೈನರ್‌ಗಳು ಸೇರಿದಂತೆ ಭಾರೀ ವಾಹನಗಳು ಎಗ್ಗಿಲ್ಲದೆ ಸಂಚರಿಸುತ್ತಿವೆ. ಇವುಗಳಿಗೆ ಯಾವದೇ ನಿಯಮಗಳು ಇಲ್ಲವಾಗಿವೆ. ಆದೇಶವಿದ್ದರೂ ಜಿಲ್ಲೆಯ ಗಡಿಭಾಗದ ಗೇಟ್‌ಗಳಲ್ಲಿ ಹೇಗೆ ಪ್ರವೇಶಿಸುತ್ತವೆ ಎಂಬದೇ ತಿಳಿಯುತ್ತಿಲ್ಲ. ಈಚೆಗೆ ತಡರಾತ್ರಿಯಲ್ಲಿ ಕೆಲವು ಹೊರಜಿಲ್ಲೆಯ ಲಾರಿಗಳನ್ನು ತಡೆದು ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ ಎಂದರು.

ಲಾರಿ ಮಾಲೀಕರು ಹಾಗೂ ಕಾರ್ಮಿಕರ ಸಂಕಷ್ಟದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ತಾ. ೧೮ರಂದು ಬೆಳಿಗ್ಗೆ ೧೧ ಗಂಟೆಗೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗುವದು. ಟಿಂಬರ್ ವ್ಯಾಪಾರಿಗಳ ಸಂಘ, ಟಿಂಬರ್ ಕಾರ್ಮಿಕರ ಸಂಘ, ಕ್ರೇನ್ ಆಪರೇಟರ್‌ಗಳ ಸಂಘ ಸೇರಿದಂತೆ ಹಲವು ಸಂಘಟನೆಗಳ ಸಹಕಾರದೊಂದಿಗೆ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಅಶ್ರಫ್ ಮಾತನಾಡಿ; ಲಾರಿಗಳ ಸಂಚಾರ ನಿಷೇಧದಿಂದಾಗಿ ಚಾಲಕರು, ಕಾರ್ಮಿಕರು ಬೀದಿಗೆ ಬರುವಂತಾಗಿದೆ.

ಜಿಲ್ಲೆಯಲ್ಲಿ ಯಾವದೇ ಕಾರ್ಖಾನೆಗಳಿಲ್ಲ, ರೈತರು ಬೆಳೆದ ಸಿಲ್ವರ್ ಮರ ಹಾಗೂ ಕಾಫಿ ಸಾಗಾಟ ಮಾತ್ರ ಸಾಧ್ಯ. ಈಗ ಅದಕ್ಕೂ ನಿರ್ಬಂಧ ಹೇರಿರುವದರಿಂದ ಸಮಸ್ಯೆ ಉಂಟಾಗಿದೆ. ಹೊರ ರಾಜ್ಯದ ಲಾರಿಗಳು ಮಾತ್ರ ಯಾವದೇ ತಡೆಯಿಲ್ಲದೆ ಸಂಚರಿಸುತ್ತಿವೆ. ಜಿಲ್ಲಾಧಿಕಾರಿಗಳ ಆದೇಶಕ್ಕೆ ಯಾವದೇ ಬೆಲೆ ಇಲ್ಲದಂತಾಗಿದೆ. ಕನಿಷ್ಟ ಮರ ಸಾಗಾಟ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಟಿಂಬರ್ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಹುರೇಶಿ, ಖಜಾಂಚಿ ಶಾಂ ಮಾತನಾಡಿ; ೨೦೧೮ರಲ್ಲಿ ಭೂಕುಸಿತವಾದ ನಂತರ ಜಿಲ್ಲೆಯಲ್ಲಿ ಈ ಆದೇಶವನ್ನು ಜಾರಿಮಾಡಿಕೊಂಡು ಬರಲಾಗುತ್ತಿದೆ. ಭೂಕುಸಿತವಾಗಿರುವ ಸ್ಥಳಗಳಲ್ಲಿ ನಿಷೇಧ ಮಾಡಲಿ, ಉಳಿದೆಡೆ ಮರ ಸಾಗಾಟಕ್ಕೆ ಅವಕಾಶ ಮಾಡಿಕೊಡಲಿ, ನಮ್ಮನ್ನೇ ನಂಬಿಕೊAಡು ಬದುಕುತ್ತಿರುವ ಕಾರ್ಮಿಕರಿಗೆ ಸಂಬಳ ನೀಡಲು ಕೂಡ ಕಷ್ಟವಾಗುತ್ತಿದೆ. ಕಾರ್ಮಿಕರಿಗೂ ತೊಂದರೆಯಾಗುತ್ತಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಲಾರಿ ಚಾಲಕರ ಸಂಘದ ಕಾರ್ಯದರ್ಶಿ ಅಜೀಜ್ ಇದ್ದರು.