ಮಡಿಕೇರಿ, ಜು. ೧೬: ಭಾರತ ವಿವಿಧತೆಯಲ್ಲಿ ಏಕತೆ ಸಾರುವ ದೇಶ. ಬಹುಸಂಸ್ಕೃತಿಗಳನ್ನು ಆಚರಿಸುತ್ತಾ ಸರ್ವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಗುಣಗಳಿಂದ ನಾವು ಪ್ರಖ್ಯಾತರಾಗಿದ್ದೇವೆ. ನಮಗೆ ಬಳುವಳಿಯಾಗಿ ಬಂದಿರುವ ಜ್ಯೋತಿಷ್ಯಶಾಸ್ತç ಕಲೆಯನ್ನು ಉಳಿಸಬೇಕು ಎಂದು ಮೇಲುಕೋಟೆಯ ಶ್ರೀ ಯಶಿರಾಜದಾಸರು ಗುರುಪೀಠ ಗೃಹಸ್ಥ ಪೀಠಾಧಿಪತಿ ಶ್ರೀ ಶ್ರೀನಿವಾಸ ನರಸಿಂಹ ಗುರೂಜಿ ಸಲಹೆ ನೀಡಿದರು.
ಬೆಂಗಳೂರಿನ ಬಿ.ಸಿ. ರಂಗಪ್ಪ ವಿದ್ಯಾನಿಧಿ ಟ್ರಸ್ಟ್, ಮಂಡ್ಯ ಜಿಲ್ಲೆ ಮೇಲುಕೋಟೆ ಶ್ರೀ ಯತಿರಾಜದಾಸರ್ ಗುರುಪೀಠ, ಮತ್ತು ಕೊಡಗು ಕಣಿಯರ ವಿದ್ಯಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ಬಿಟ್ಟಂಗಾಲ ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಕಣಿಯರ ಜನಾಂಗದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಪೂರ್ವಜರಿಂದ ಬಂದ ಕಲೆಗಳು ಇಂದು ನಶಿಸಿಹೋಗುವ ಹಂತದಲ್ಲಿವೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ಕಣಿಯರು ಜನಾಂಗವು ನಲೆ ನಿಂತಿದ್ದರು. ಆರ್ಥಿಕವಾಗಿ ಸಬಲತೆಯನ್ನು ಸಾಧಿಸುವಲ್ಲಿ ವಿಫಲರಾಗಿದ್ದಾರೆ.
ಶಾಸ್ತç ಕಲೆಯನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು. ರಾಜ್ಯ ಸರ್ಕಾರವು ಇತರ ಜನಾಂಗಕ್ಕೆ ನೀಡುವ ಸೌಲಭ್ಯ ಮತ್ತು ಸವಲತ್ತುಗಳನ್ನು ನಮ್ಮ ಕಣಿಯ ಜನಾಂಗಕ್ಕೂ ನೀಡುವಂತೆ ಒತ್ತಾಯಿಸಿದರು.
ಕೊಡಗು ಕಣಿಯರ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿಗಳಾದ ಕಣಿಯರ ಜಿ. ಪ್ರಕಾಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಣಿಯರ ಜನಾಂಗದ ಸಂಖ್ಯೆ ಬಹು ವಿರಳವಾಗಿದೆ. ಜನಾಂಗದ ಹಿರಿಯರು ಇತರ ಎಲ್ಲಾ ಜನಾಂಗದ ಕಷ್ಟ-ಸುಖಗಳಲ್ಲಿ ಭಾಗಿಗಳಾಗಿ ಶಾಸ್ತçದ ಮೂಲಕ ಪರಿಹಾರ ಕಂಡುಕೊಳ್ಳುತ್ತಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಣಿಯರ ಜನಾಂಗದ ಗ್ರಾಮೀಣ ಭಾಗದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ನಗದು ಹಾಗೂ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ಜನಾಂಗದವರಾದ ಸಿ. ಸಂಜಯ್‌ಕುಮಾರ್, ಸಂಗೀತ ಕ್ಷೇತ್ರದಲ್ಲಿ ವಿದ್ವಾನ್ ಆರ್. ಪುರುಷೋತ್ತಮ, ನೃತ್ಯ ಕ್ಷೇತ್ರದಲ್ಲಿ ವಿದ್ವಾನ್ ಯೋಗೇಶ್ ಕುಮಾರ್ ಎಸ್., ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಗಿರೀಶ್‌ಚಂದ್ರ, ಕಿರುತೆರೆ ಕಲಾವಿದರಾದ ಕಡುವಚೇರಿರ ಉಮೇಶ್, ನಿವೃತ್ತ ಸೈನಿಕ ಚೊಂಡೆಪAಡ ಶಂಬು ಪೂಣಚ್ಚ, ಜ್ಯೋತಿಷ್ಯ ಕ್ಷೇತ್ರದಲ್ಲಿ ಪಂ. ನಾಗರತ್ನ, ಡಾ. ರವಿಕುಮಾರ್ ಬೆಂಗಳೂರು, ಶಶಿಕುಮಾರ್ ಪಂಡಿತ್ ಸುಳ್ಯ, ಪಂಡಿತ್ ಶಿಜು ಗುರುಕಳ್ ವೀರಾಜಪೇಟೆ, ಪ್ರಭಾಕರ್ ಪಂಡಿತ್ ಉಳ್ಳಾಲ ಅವರುಗಳಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು, ಜನಾಂಗ ಬಾಂಧವರಿAದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕೊಡಗು ಕಣಿಯರ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಣಿಯರ ಸೇವಾ ಸಮಾಜ, ಬೆಂಗಳೂರು. ಅಧ್ಯಕ್ಷರಾದ ಆರ್. ಪ್ರಸನ್ನಕುಮಾರ್, ಕೊಡಗು ಕಣಿಯರ ವಿದ್ಯಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ಕೆ.ಎನ್. ನಾಣಯ್ಯ, ಕಣಿಯರ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿಗಳಾದ ಕಣಿಯರ ಜೆ. ಪ್ರಕಾಶ್ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಕಣಿಯರ ಸೇವಾ ಸಂಘದ ಪದಾಧಿಕಾರಿಗಳು, ಜನಾಂಗ ಬಾಂಧವರು ಕೊಡಗು ಜಿಲ್ಲಾ ಕಣಿಯರ ಜನಾಂಗದ ಮುಖಂಡರು ಹಾಜರಿದ್ದರು.