ಕೊಡ್ಲಿಪೇಟೆ, ಜು. ೧೬: ಸಮೀಪದ ಕ್ಯಾತೆ ಗ್ರಾಮದಲ್ಲಿ ಚಿರತೆ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಗ್ರಾಮಕ್ಕೆ ಒತ್ತಿಕೊಂಡಿರುವ ಕೃಷಿ ಪ್ರದೇಶದಲ್ಲಿ, ಮನೆಗಳ ಸಮೀಪವೇ ಹೆಜ್ಜೆಗಳು ಪತ್ತೆಯಾಗಿರುವುರಿಂದ ಗ್ರಾಮಸ್ಥರು ಭಯಾತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸ್ಥಳೀಯ ರೈತ ಶಿವಕುಮಾರ್ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ವನ್ಯಪ್ರಾಣಿಯ ಚಲನ ವಲನ ಗಮನಿಸಿ ಬೋನ್ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯ ಪಾಲಕ ವಿಶ್ವನಾಥ್ ಭರವಸೆ ನೀಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಓಡಾಡಿಕೊಂಡಿರುವ ಚಿರತೆಯನ್ನು ಆದಷ್ಟು ಬೇಗ ಪತ್ತೆಹಚ್ಚಿ ಸೆರೆಹಿಡಿಯಬೇಕೆಂದು ಶಿವಕುಮಾರ್ ಒತ್ತಾಯಿಸಿದ್ದಾರೆ.