ಶ್ರೀಮಂಗಲ, ಜು. ೧೬: ನ್ಯುಮೋನಿಯಾದಿಂದ ಶ್ರೀಮಂಗಲ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಟಿ.ಶೆಟ್ಟಿಗೇರಿ ಗ್ರಾಮದ ಚೀಪೆಕೊಲ್ಲಿ ನಿವಾಸಿ ವಿಜು ಮತ್ತು ಮಂಜುಳಾ ದಂಪತಿಯ ಪುತ್ರ ಕಿಶನ್ ಹೆಚ್.ವಿ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾನೆ. ಕಳೆದ ಹಲವು ದಿನಗಳಿಂದ ಕಿಶನ್‌ಗೆ ಜ್ವರ ಕಾಣಿಸಿಕೊಂಡಿತ್ತು. ಸ್ವಲ್ಪ ಮಟ್ಟದ ಜ್ವರ ಇದ್ದರೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಕಾಲೇಜಿಗೆ ತೆರಳುತ್ತಿದ್ದನು. ಆದರೂ ಜ್ವರ ಕಡಿಮೆಯಾಗದ ಕಾರಣ ಸ್ಥಳೀಯ ಆಸ್ಪತ್ರೆಯಿಂದ ಡೆಂಗ್ಯೂ ಇರುವ ಲಕ್ಷಣದ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ನ್ಯುಮೋನಿಯಾ ಇರುವುದು ಖಚಿತಪಟ್ಟಿದೆ. ಒಳ ರೋಗಿಯಾಗಿ ಕಿಶನ್ ಅವರು ೨-೩ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ ಚಿಕಿತ್ಸೆ ಫಲಕಾರಿಯಾಗದೆ ತಾ. ೧೬ ರಂದು ಮೃತಪಟ್ಟಿದ್ದಾನೆ.

ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಕಿಶನ್ ಹೆಚ್.ವಿ. ಅವರ ಅಕಾಲಿಕ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿ ವಿದ್ಯಾಸಂಸ್ಥೆಗೆ ಬುಧವಾರ ರಜೆ ಘೋಷಿಸಿತ್ತು. ಮೃತನು ತಂದೆ-ತಾಯಿ, ತಂಗಿಯನ್ನು ಅಗಲಿದ್ದಾನೆ. ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.