ಸೋಮವಾರಪೇಟೆ, ಜು. ೧೬: ಪಟ್ಟಣದ ಮಹದೇಶ್ವರ ಬ್ಲಾಕ್‌ನ ಹೊಸ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಶೆಡ್‌ಅನ್ನು ತೆರವುಗೊಳಿಸಲು ಪಂಚಾಯಿತಿ ಮುಂದಾಗಿರುವ ಕ್ರಮವನ್ನು ವಿರೋಧಿಸಿ ಸ್ಥಳೀಯರು ಪ.ಪಂ.ಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು. ಒಂದು ವೇಳೆ ಶೆಡ್ ತೆರವಿಗೆ ಮುಂದಾದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೊಸ ಬಡಾವಣೆಯಲ್ಲಿ ಶೆಡ್ ನಿರ್ಮಿಸಿ ಅದರ ಒಳಗೆ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಎಂಬ ಬ್ಯಾನರ್ ಅಳವಡಿಸಲಾಗಿತ್ತು. ಸ್ಥಳೀಯರೇ ಸೇರಿಕೊಂಡು ಶೆಡ್ ನಿರ್ಮಾಣ ಮಾಡಿದ್ದರೂ ಕೆಲವರು ಇದು ಅನಧಿಕೃತ ಎಂದು ಪ.ಪಂ.ಗೆ ದೂರು ನೀಡಿದ್ದರು.
ಈ ಹಿನ್ನೆಲೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸತೀಶ್ ಸ್ಥಳ ಪರಿಶೀಲನೆ ನಡೆಸಿ, ಪಂಚಾಯಿತಿಯಿAದ ಯಾವುದೇ ಪೂರ್ವಾನುಮತಿ ಪಡೆಯದೇ ನಿರ್ಮಾಣ ಮಾಡಿರುವ ಶೆಡ್ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಈ ಹಿನ್ನೆಲೆ ಸ್ಥಳೀಯರು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಶೆಡ್ ತೆರವುಗೊಳಿಸದಂತೆ ಪ್ರತಿಭಟನೆ ನಡೆಸಿದರು.
ಕಳೆದ ಸರ್ಕಾರವಿದ್ದ ಸಂದರ್ಭವೇ ಹೊಸ ಬಡಾವಣೆಯಲ್ಲಿ ಸ್ಥಳೀಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಾಗವನ್ನು ಕಾಯ್ದಿರಿಸಿದ್ದು, ಇದೀಗ ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿಯ ಹೆಸರಿನಲ್ಲಿ ಸ್ಥಳೀಯರೇ ತಾತ್ಕಾಲಿಕ ಶೆಡ್ ನಿರ್ಮಿಸಿದ್ದಾರೆ. ಇದರಲ್ಲಿ ಗೌರಿ ಗಣೇಶೋತ್ಸವಕ್ಕೆ ಮಾತ್ರ ಬಳಕೆಯಾಗುವಂತೆ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿದೆ. ಈ ಜಾಗ ನಿವೇಶನಕ್ಕೆ ಅಯೋಗ್ಯವಾಗಿರುವ ಪ್ರದೇಶವಾಗಿದ್ದು, ಒಂದು ವೇಳೆ ಈ ಸ್ಥಳದಲ್ಲಿ ನಿವೇಶನ ನಿರ್ಮಿಸಲು ಪಂಚಾಯಿತಿ ಮುಂದಾದರೆ ತೆರವುಗೊಳಿಸುವ ಬಗ್ಗೆ ಪಂಚಾಯಿತಿಯಲ್ಲಿ ನಿರ್ಣಯವಾಗಿದೆ. ಇದೀಗ ನಿವೇಶನ ಮಾಡದೇ ಶೆಡ್ ತೆರವಿಗೆ ಮುಂದಾಗುತ್ತಿರುವುದು ಸರಿಯಲ್ಲ ಎಂದು ಮಾಜಿ ನಾಮ ನಿರ್ದೇಶಿತ ಸದಸ್ಯ ಶರತ್ ಚಂದ್ರ ಹೇಳಿದರು. ಶೆಡ್ ನಿರ್ಮಾಣದ ಬಗ್ಗೆ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಆ ಸ್ಥಳದಲ್ಲಿ ಗೌರಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಈ ಹಿಂದೆ ಪಂಚಾಯಿತಿ ಆಡಳಿತ ಮಂಡಳಿ ಅನುಮತಿ ನೀಡಿದೆ ಎಂದು ಬಿಜೆಪಿಯ ಎಸ್.ಆರ್. ಸೋಮೇಶ್ ವಾದಿಸಿದರು. ಅಲ್ಲಿ ಶಾಶ್ಚತ ಶೆಡ್ ನಿರ್ಮಿಸಿಲ್ಲ ಎಂದು ಶರತ್‌ಚಂದ್ರ ಹೇಳಿದರು. ಪೊಲೀಸ್ ಠಾಣೆಗೆ ದೂರು ನೀಡಿರುವ ಬಗ್ಗೆ ಮೋಹನ್ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಹಲವಷ್ಟು ಅನಧಿಕೃತ ಶೆಡ್‌ಗಳು ನಿರ್ಮಾಣಗೊಂಡಿದ್ದು, ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಇವುಗಳನ್ನು ಬಿಟ್ಟು ಬಡಾವಣೆಯಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಪೂಜೆಗಾಗಿ ನಿರ್ಮಿಸಿರುವ ಶೆಡ್ ತೆರವಿಗೆ ಮುಂದಾಗಿರುವುದು ಸರಿಯಲ್ಲ ಎಂದು ಎಸ್.ಆರ್. ಸೋಮೇಶ್ ಹೇಳಿದರು. ಇದೇ ವಿಷಯವಾಗಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳೊಂದಿಗೆ ಸ್ಥಳೀಯರು ಕೆಲಕಾಲ ವಾಗ್ವಾದ ನಡೆಸಿದರು. ತಾ.೧೮ ರಂದು ಪಟ್ಟಣ ಪಂಚಾಯಿತಿ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ತಿಳಿಸಿದರು. ಈ ಸಂದರ್ಭ ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಮನೊಜ್, ಸ್ಥಳೀಯರಾದ ಮೋಹನ್, ಕಮಲ್, ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.