ಮಡಿಕೇರಿ, ಜು. ೧೬: ಜಿಲ್ಲೆಯಲ್ಲಿ ಮುಂಗಾರುಮಳೆ ಮುಂದುವರಿದಿದ್ದು, ನಿನ್ನೆಯಿಂದ ಮಳೆ ಒಂದಷ್ಟು ಬಿರುಸು ತೋರುತ್ತಿದೆ. ತೀವ್ರ ರಭಸದ ಮಳೆ ಇಲ್ಲವಾದರೂ ನಿರಂತರವಾಗಿ ಮಳೆ ಸುರಿಯುತ್ತಿದೆ. ಪ್ರಸ್ತುತ ಪುನರ್ವಸು ಮಳೆಯಾಗುತ್ತಿದ್ದು, ಇದರ ಕೊನೆಯ ಪಾದದಲ್ಲಿ ಇದೀಗ ಒಂದಷ್ಟು ರಭಸ ಕಂಡುಬರುತ್ತಿದೆ. ರಾಜ್ಯ ಹವಾಮಾನ ಇಲಾಖೆ ಬುಧವಾರ ಹಾಗೂ ಗುರುವಾರ (ಇಂದು) ಜಿಲ್ಲೆಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ ಕಳೆದ ವರ್ಷಕ್ಕಿಂತ ಹೆಚ್ಚಿನ ಮಳೆಯಾಗಿದ್ದು, ಇನ್ನೂ ಮುಂಗಾರಿನ ಅವಧಿ ಬಾಕಿ ಉಳಿದಿದೆ. ಈಗಿನ ಸನ್ನಿವೇಶದಿಂದಾಗಿ ಕಾಫಿ ಫಸಲಿಗೆ ಧಕ್ಕೆಯಾಗುತ್ತಿದ್ದು, ಕೊಳೆರೋಗದೊಂದಿಗೆ ಉದುರುವಿಕೆ ಹೆಚ್ಚುತ್ತಿರುವುದು ಬೆಳೆಗಾರರಿಗೆ ಆತಂಕ ತಂದೊಡ್ಡುತ್ತಿದೆ. ಭತ್ತದ ಕೃಷಿ ಕೆಲಸಗಳು ಅಲ್ಲಲ್ಲಿ ಆರಂಭಗೊAಡಿದ್ದು ಪ್ರಗತಿಯಲ್ಲಿದೆ. ಆದರೆ ಕಾಡಾನೆಗಳ ಹಾವಳಿ, ಜತೆಗೆ ಹುಲಿ ಧಾಳಿಯಂತಹ ಪ್ರಕರಣಗಳು ಕೃಷಿಕರಿಗೆ ವ್ಯತಿರಿಕ್ತವಾಗಿ ಪರಿಣಮಿಸುತ್ತಿದೆ.
ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸರಾಸರಿ ೦.೫೫ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧.೪೪ ಇಂಚು ಮಳೆಯಾಗಿದ್ದು, ಇನ್ನಿತರ ತಾಲೂಕುಗಳಲ್ಲಿ ಮಂಗಳವಾರದAದು ಹೆಚ್ಚಿನ ಮಳೆಯಾಗಿರಲಿಲ್ಲ. ಕಳೆದ ೨೪ ಗಂಟೆಗಳಲ್ಲಿ ಮಡಿಕೇರಿ ತಾಲೂಕಿನ ಮಡಿಕೇರಿ ಹೋಬಳಿ ೧.೨೪, ನಾಪೋಕ್ಲು ೦.೮೮, ಸಂಪಾಜೆ ೧.೯೦, ಭಾಗಮಂಡಲ ಹೋಬಳಿಯಲ್ಲಿ ಸರಾಸರಿ ೧.೭೫ ಇಂಚು ಮಳೆಯಾಗಿದೆ.
ಇಂದು ರಜೆ
ಮಡಿಕೇರಿ, ಜು. ೧೬: ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಾ. ೧೭ ರಂದು (ಇಂದು) ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶಿಸಿದ್ದಾರೆ.
ತಲಕಾವೇರಿಗೆ ೧೯೩.೫೦ ಇಂಚು
ರಾಜ್ಯದ ಜೀವನದಿ ಕಾವೇರಿ ತವರು ತಲಕಾವೇರಿ ಪ್ರಸಕ್ತ ವರ್ಷ ಜನವರಿಯಿಂದ ಈತನಕ ಅಂದಾಜು ೧೯೩.೫೦ ಇಂಚುಗಳಷ್ಟು ಭಾರೀ ಮಳೆಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದೀಗ ಜುಲೈ ೪ ರಿಂದ ಈತನಕ ಕೇವಲ ೧೧ ದಿನಗಳಲ್ಲಿ ೩೮.೫೦ ಇಂಚು ಮಳೆ ಬಿದ್ದಿದೆ. ಜುಲೈ ೪ ರಂದು ಒಂದೇ ದಿನ ೭ ಇಂಚು ಮಳೆ ಸುರಿದಿತ್ತು ಎಂದು ಸ್ಥಳೀಯರ ಪ್ರಕಾರ ವರದಿಯಾಗಿದೆ.