ಕೂಡಿಗೆ, ಜು. ೧೬: ಶುಂಠಿ ಕೃಷಿ ಮಾಡುವುದರ ಮೂಲಕ ಒಂದಷ್ಟು ಬದುಕುಕಟ್ಟಿಕೊಳ್ಳಲು ಮುಂದಾಗಿದ್ದ ರೈತರು ಇದೀಗ ಬೆಲೆಕುಸಿತ ಸೇರಿದಂತೆ ಹತ್ತಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಕಂಗಾಲಾಗಿದ್ದಾರೆ. ಲಕ್ಷಾಂತರ ರೂಪಾಯಿ ವ್ಯಯಮಾಡಿ ಬೆಳೆದ ಶುಂಠಿಗೆ ಧಾರಣೆ ಅತ್ಯಲ್ಪವಾಗಿದ್ದರೆ ರೋಗಬಾಧೆ, ಕಾರ್ಮಿಕರ ಸಮಸ್ಯೆ, ದುಬಾರಿ ವೇತನ ಮತ್ತಿತರ ಸಮಸ್ಯೆಗಳಿಂದ ಶುಂಠಿ ಬೆಳೆಗಾರರು ಪರಿತಪಿಸುವಂತಾಗಿದೆ.

೨೦೨೨-೨೩ನೇ ಸಾಲಿನಲ್ಲಿ ಜಿಲ್ಲೆಯ ಶುಂಠಿ ಬೆಳೆಗಾರರಿಗೆ ತಮ್ಮ ಜಮೀನಿನಲ್ಲಿ ಬೆಳೆದ ಶುಂಠಿಗೆ ಉತ್ತಮವಾದ ಬೆಲೆ ದೊರೆತ ಹಿನ್ನೆಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ಇನ್ನಷ್ಟು ಬೆಲೆ ಸಿಗಬಹುದೆಂದು ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ಶುಂಠಿ ಬೇಸಾಯ ಮಾಡಲು ಮುಂದಾಗಿದ್ದರು. ಆದರೆ ೨೦೨೩-೨೪ನೇ ಸಾಲಿನಲ್ಲಿ ಬೆಳೆದ ಶುಂಠಿಗೆ ಬೆಲೆಯು ತೀರಾ ಕಡಿಮೆ ಆದ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಅವಧಿಯಲ್ಲಿ ಉತ್ತಮವಾದ ಬೆಲೆ ಸಿಗಬಹುದೆಂಬ ಆಸೆಯಲ್ಲಿ ಜಮೀನಿನಲ್ಲಿ ಶುಂಠಿ ಬೆಳೆಯನ್ನು ಕೀಳದೆ ಹಾಗೇ ಬಿಟ್ಟ ಹಿನ್ನೆಲೆಯಲ್ಲಿ ಇದೀಗ ರೋಗ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅನೇಕ ರೈತರು ತಮ್ಮ ಜಮೀನಿನಲ್ಲಿ ಬೆಳೆಸಿದ ಶುಂಠಿ ತಾವೇ ಉಳುಮೆ ಮಾಡುತ್ತಿರುವುದು ಕಂಡುಬರುತ್ತದೆ.

ಕಳೆದ ಸಾಲಿನ ಶುಂಠಿ ಬೆಳೆಗೆ ಈ ಬಾರಿ ಉತ್ತಮವಾದ ಬೆಲೆ ಬರಬಹುದೆಂದೂ ಜಮೀನಿನಲ್ಲಿ ಬಿಟ್ಟಿದ್ದ ರೈತರು ಸಮಸ್ಯೆ ಎದುರಿಸುವಂತಾಗಿದೆ. ಜಮೀನಿನಲ್ಲಿ ತೇವಾಂಶದ ಹತೋಟಿ ಇಲ್ಲದೆ ಒಣಗಿದ ರೀತಿಯಲ್ಲಿ ರೋಗ ಲಕ್ಷಣಗಳು ಕಂಡುಬರುತ್ತಿವೆ. ಶುಂಠಿಯಲ್ಲಿ ಹುಳುಗಳಾಗುತ್ತಿದ್ದು, ಮಾರಾಟಗಾರರು ಖರೀದಿಗೆ

(ಮೊದಲ ಪುಟದಿಂದ) ಮುಂದಾಗಿದ್ದ ಹಿನ್ನೆಲೆಯಲ್ಲಿ ರೈತರೇ ಉಳುಮೆ ಮಾಡುವಂತಹ ಪ್ರಸಂಗ ಈ ಸಾಲಿನಲ್ಲಿ ಶುಂಠಿ ಜಮೀನಿನಲ್ಲಿ ಕಂಡುಬರುತ್ತಿದ್ದು ಬೆಳೆಗಾರರು ತೀರಾ ಕಂಗಾಲಾಗಿದ್ದಾರೆ.

ರೂ. ೫ ಸಾವಿರ ಬೆಲೆ ಇದ್ದ ಶುಂಠಿ ಇದೀಗ ರೂ. ೫೦೦ ಮಾತ್ರ

ಜಿಲ್ಲೆಯಲ್ಲಿ ೨೦೨೨-೨೩ನೇ ಸಾಲಿನಲ್ಲಿ ಬೆಳೆದ ಶುಂಠಿ ಬೆಳೆಗೆ ಮೊದಲ ಬಾರಿಗೆ ಒಂದು ಮೂಟೆಗೆ (೬೦ ಕೆ.ಜಿ. ಚೀಲ) ರೂ. ೫ ಸಾವಿರದಿಂದ ರೂ. ೬ ಸಾವಿರದಷ್ಟು ಬೆಲೆ ದೊರೆತ್ತಿತ್ತು. ಅದೇ ಬೆಲೆ ಸಿಗಬಹುದೆಂದು ಸಾವಿರಾರು ಎಕರೆಗಳಷ್ಟು ಪ್ರದೇಶದಲ್ಲಿ ಅಧಿಕವಾಗಿ ಶುಂಠಿ ಬೇಸಾಯ ಮಾಡಲಾಗಿತ್ತು. ಆದರೆ ೨೦೨೩-೨೪ ರಲ್ಲಿ ಶುಂಠಿ ಬೆಲೆ ದಿಢೀರ್ ಆಗಿ ೫೦೦ ರಿಂದ ಸಾವಿರ ರೂಪಾಯಿಗಳಿಗೆ ಇಳಿದಿತ್ತು. ಇದರಿಂದಾಗಿ ಬೇಸಾಯಕ್ಕೆ ಖರ್ಚು ಮಾಡಿದ ಸ್ವಲ್ಪ ಭಾಗ ಹಣವೂ ಸಿಗದೆ ರೈತರು ಭಾರಿ ನಷ್ಟ ಅನುಭವಿಸಬೇಕಾಯಿತು.

ಅದೇ ರೀತಿಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ಈಗಾಗಲೇ ಜಿಲ್ಲೆಯ ಅನೇಕ ರೈತರು ಈ ಸಾಲಿನಲ್ಲಿಯಾದರೂ ಬೆಲೆ ಸಿಗಬಹುದೆಂಬ ಆಸೆಯಲ್ಲಿ ಶುಂಠಿ ಬೇಸಾಯ ಮಾಡಿರುತ್ತಾರೆ. ಆದರೆ ಈಗಾಗಲೇ ಬಿತ್ತನೆ ಮಾಡಿದ ಮೂರು ತಿಂಗಳುಗಳ ಶುಂಠಿ ಬೆಳೆಗೆ ವಿಚಿತ್ರ ಬ್ಯಾಕ್ಟೀರಿಯಾ ರೋಗ, ಕೊಳೆ ರೋಗ ಕಾಣಿಸಿಕೊಂಡು ಶುಂಠಿಯನ್ನು ಕೀಳಲು ಆರಂಭ ಮಾಡಿದ್ದಾರೆ.

ಶುಂಠಿ ಬೆಳೆದು ೧೨ ತಿಂಗಳುಗಳು ಜಮೀನಿನಲ್ಲಿ ಇಟ್ಟುಕೊಂಡು ಅದಕ್ಕೆ ಬೇಕಾಗುವ ತೇವಾಂಶದ ಅಂಶಗಳನ್ನು ಕಾಪಾಡಿಕೊಂಡು ಬಂದರೆ ಮಾತ್ರ ಉತ್ತಮ ಗುಣಮಟ್ಟದ ಶುಂಠಿಯಾಗಿರುತ್ತದೆ. ಸ್ವಲ್ಪ ಒಣಗಿದರೆ ಶುಂಠಿಯ ಗಾತ್ರದಲ್ಲಿ ಕುಸಿತ ಕಂಡು ರೋಗದ ಬಾಧೆಗೆ ತುತ್ತಾಗುತ್ತದೆ.

ರೈತರು ತಮ್ಮ ಆರ್ಥಿಕ ಮಟ್ಟದ ಸುಧಾರಣೆಗಾಗಿ ಶುಂಠಿ ಬೆಳೆಯನ್ನು ಬೆಳೆಯಲು ಮುಂದಾಗಿದ್ದರೂ, ಬೆಲೆಯ ಕುಸಿತದಿಂದಾಗಿ ಲಕ್ಷಾಂತರ ಹಣವನ್ನು ಕಳೆದುಕೊಂಡು, ತಾವು ಸಾಲ ಮಾಡಿದ ಸಹಕಾರ ಸಂಘ, ಬ್ಯಾಂಕ್‌ಗಳಿಗೆ ಬಡ್ಡಿ ಕಟ್ಟಲು ಸಾಧ್ಯವಾಗದಂತಹ ಪರಿಸ್ಥಿತಿ ಈ ಸಾಲಿನಲ್ಲಿ ಕಂಡುಬರುತ್ತಿದೆ. ಇದರಿಂದಾಗಿ ಶುಂಠಿ ಬೆಳೆಗಾರರು ಭಾರಿ ನಷ್ಟ ಅನುಭವಿಸುವಂತಹ ಸ್ಥಿತಿಯಲ್ಲಿರುವುದು ಕಂಡುಬರುತ್ತಿದೆ.

ಈ ಸಾಲಿನ ಮಾರ್ಚ್ ತಿಂಗಳ ಅಂತ್ಯದಲ್ಲಿ ಬಿತ್ತನೆ ಮಾಡಿದ ಶುಂಠಿ ಬೆಳೆಗೆ ಸಮರ್ಪಕವಾದ ಮಳೆಯು ಈ ಬಾರಿ ಬಿದ್ದ ಹಿನ್ನೆಲೆಯಲ್ಲಿ ಶುಂಠಿ ಬೆಳೆಯು ಉತ್ತಮವಾಗಿ ಬಂದಿದೆ. ಆದರೆ ರೋಗ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಾಳಾಗುವ ಬದಲು ರೈತರು ಕೀಳಲು ಆರಂಭ ಮಾಡಿದರೂ ಬೆಲೆ ಮಾತ್ರ ಕೇವಲ ರೂ. ೪೦೦ ಮಾತ್ರ ಇದೆ. ಕಾರ್ಮಿಕರ ಕೂಲಿ ಹೆಚ್ಚಳ, ರಸಗೊಬ್ಬರದ ಬೆಲೆ ಹೆಚ್ಚಳದಿಂದಾಗಿ ಕಾರ್ಮಿಕರಿಗೆ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಕುಶಾಲನಗರ ತಾಲೂಕು ವ್ಯಾಪ್ತಿಯ ಶುಂಠಿ ಬೆಳೆಗಾರರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.