ಗೋಣಿಕೊಪ್ಪಲು, ಜು. ೧೯ : ಹುಲಿಯ ಸೆರೆಗಾಗಿ ಹಾಗೂ ಹುಲಿಯ ಚಲನವಲನಗಳ ಬಗ್ಗೆ ಮಾಹಿತಿ ತಿಳಿಯಲು ಕಾರ್ಯಾಚರಣೆ ತಂಡ ಇದೀಗ ಕೆಲವು ಭಾಗದಲ್ಲಿ ಕ್ಯಾಮರಾಗಳನ್ನು ಅಳವಡಿಸಿ ಪ್ರಯತ್ನ ಮುಂದುವರೆಸಿದೆ. ಅಲ್ಲದೆ ಹುಲಿಯ ಸೆರೆಗಾಗಿ ಬೋನನ್ನು ಅಳವಡಿಸಿರುವ ಸಿಬ್ಬಂದಿಗಳು ಹುಲಿಯ ಸೆರೆಗೆ ಎದುರು ನೋಡುತ್ತಿದ್ದು, ಆದರೆ ಹುಲಿಯ ಚಲನವಲನ ಹಾಗೂ ಹೆಜ್ಜೆ ಗುರುತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ೫ ದಿನಗಳಿಂದ ಹುಲಿ ಸೆರೆಗೆ ಅರಣ್ಯ ಸಿಬ್ಬಂದಿಗಳು ಮಳೆಯ ನಡುವೆ ಕೂಂಬಿAಗ್ ಕಾರ್ಯಾಚರಣೆ ಮುಂದುವರೆಸಿದ್ದು ಹುಲಿ ಪತ್ತೆಗಾಗಿ ಸಾಕಾನೆಗಳ ಸಹಾಯ ಪಡೆದಿದ್ದಾರೆ. ಈ ಕಾರ್ಯಾಚರಣೆಗೆ ಅರಣ್ಯ ಇಲಾಖೆಯ ೮೦ಕ್ಕೂ ಅಧಿಕ ಸಿಬ್ಬಂದಿಗಳು ಮುಂದಾಗಿದ್ದು ವಿವಿಧ ತಂಡವಾಗಿ ಹಲವು ಪ್ರದೇಶಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಹುದಿಕೇರಿ ಸಮೀಪದ ಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಶಿಬಿರ ಆರಂಭಿಸಲಾಗಿದ್ದು, ಶಿಬಿರದಲ್ಲಿ ಮತ್ತಿಗೋಡು ಆನೆ ಶಿಬಿರದಿಂದ ಆಗಮಿಸಿದ ಭೀಮಾ ಹಾಗೂ ಬಳ್ಳೆಕ್ಯಾಂಪ್‌ನಿAದ ಬಂದಿರುವ ಮಹೇಂದ್ರ ಸಾಕಾನೆಗಳು ಹಾಗೂ ಕಾರ್ಯಾಚರಣೆ ತಂಡ ಬೀಡುಬಿಟ್ಟಿದ್ದು ಇಲ್ಲಿಂದ ವಿವಿಧ ಭಾಗಕ್ಕೆ ತೆರಳಿ ಕಾರ್ಯಾಚರಣೆಯಲ್ಲಿ ಆನೆಗಳು ಹಾಗೂ ಕಾರ್ಯಾಚರಣೆ ಸಿಬ್ಬಂದಿಗಳು ಪಾಲ್ಗೊಳ್ಳುತ್ತಿದ್ದಾರೆ.
ಹುದಿಕೇರಿ ಸುತ್ತಮುತ್ತಲಿನ ಅರಣ್ಯ ಪ್ರದೇಶ ಹಾಗೂ ಕಾಫಿ ತೋಟದಲ್ಲಿ ಕಾರ್ಯಾಚರಣೆ ಮುಂದು ವರೆಯುತ್ತಿದೆ. ಕಾರ್ಯಾಚರಣೆ ತಂಡದಲ್ಲಿ ಅರಣ್ಯ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ. ರಮೇಶ್ ಹಾಗೂ ಇಲಾಖೆಯ ಅರವಳಿಕೆ ತಜ್ಞರಾದ ರಂಜನ್ ಕೂಡ ಪಾಲ್ಗೊಂಡಿದ್ದು ಹಿರಿಯ ಅಧಿಕಾರಿಗಳ ನಿರ್ದೇಶನ ಮೇರೆಗೆ ಕಾರ್ಯಾಚರಣೆ ಸಾಗುತ್ತಿದೆ. ಹುಲಿ ಕಾರ್ಯಾಚರಣೆಗೆ ವೀರಾಜಪೇಟೆ ಡಿಎಫ್‌ಓ ಜಗನ್ನಾಥ್, ತಿತಿಮತಿ ಎಸಿಎಫ್ ಗೋಪಾಲ್, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್, ತಿತಿಮತಿ ಆರ್‌ಎಫ್‌ಓ ಗಂಗಾಧರ್ ಹಾಗೂ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿರುವ ಸಿಬ್ಬಂದಿಗಳಿಗೆ ಕ್ಯಾಂಪ್ ಆರಂಭಿಸಿರುವ ಬೆಳ್ಳೂರು ಶಾಲಾ ಆವರಣದಲ್ಲಿ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿಶೇಷ ತಂಡವು ಕಾರ್ಯಾಚರಣೆಯ ಸ್ಥಳಕ್ಕೆ ತೆರಳಿ ಅಗತ್ಯವಿರುವ ಆಹಾರ ಹಾಗೂ ನೀರನ್ನು ಸರಬರಾಜು ಮಾಡುತ್ತಿದೆ. ಕಾರ್ಯಾಚರಣೆ ತಂಡಕ್ಕೆ ಮಳೆ ಹಾಗೂ ಗಾಳಿ ಅಡ್ಡಿಪಡಿಸುತ್ತಿದ್ದು, ಇವುಗಳ ನಡುವೆ ಕಾರ್ಯಾಚರಣೆ ತಂಡ ಹುಲಿ ಪತ್ತೆಗಾಗಿ ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಿದೆ. ಹುಲಿಯ ಪತ್ತೆಗಾಗಿ ಅಳವಡಿಸಿರುವ ಕ್ಯಾಮರಾಗಳಲ್ಲಿ ಹುಲಿಯ ಚಲನವಲನಗಳ ಬಗ್ಗೆ ಯಾವುದೇ ಚಿತ್ರ ಸೆರೆಯಾಗದಿರುವುದು ತಂಡಕ್ಕೆ ನಿರಾಸೆ ಮೂಡಿಸಿದೆ. -ಹೆಚ್.ಕೆ. ಜಗದೀಶ್