(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಜು. ೧೯: ಕೃಷಿ ಪ್ರಧಾನವಾಗಿರುವ ಕೊಡಗು ಜಿಲ್ಲೆಯಲ್ಲಿ ವರ್ಷಂಪ್ರತಿ ಭತ್ತದ ಕೃಷಿಯತ್ತ ರೈತರು ಆಸಕ್ತಿ ತೋರದಿರುವುದು ಕಂಡು ಬರುತ್ತಿದೆ. ಈ ಕೃಷಿ ಕೆಲಸ ಕಾರ್ಯಕ್ಕೆ ಜಿಲ್ಲೆಯಲ್ಲಿ ಪ್ರಸ್ತುತ ಹಲವಾರು ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಗದ್ದೆಗಳಲ್ಲಿ ತೋಟಗಾರಿಕಾ ಬೆಳೆಗಳು ಮತ್ತಿತರ ರೀತಿಯ ಬೆಳೆಗಳನ್ನು ಬೆಳೆಯುವತ್ತ ಆಸಕ್ತಿ ತೋರುತ್ತಿರುವಂತಿದೆ.
ಗದ್ದೆಗಳಲ್ಲಿ ಅಡಿಕೆ, ಕರಿಮೆಣಸು, ಬಾಳೆ, ಶುಂಠಿ ಸೇರಿದಂತೆ ಕಾಫಿ, ಏಲಕ್ಕಿಯಂತಹ ಬೆಳೆಗಳನ್ನು ರೈತರು ಅಭಿವೃದ್ಧಿಪಡಿಸಲು ಮುಂದಾಗುತ್ತಿದ್ದಾರೆ. ಭತ್ತದ ಕೃಷಿ ಮಾಡುವುದು ಜಿಲ್ಲೆಯಲ್ಲಿ ಲಾಭಕರವಲ್ಲ ಎಂಬ ಚಿಂತನೆ ಬಹುತೇಕರಲ್ಲಿ ಮೂಡಿದ್ದು, ಇದು ಇಂತಹ ಬದಲಾವಣೆಗಳಿಗೆ ಕಾರಣವಾಗುತ್ತಿದೆ ಎನ್ನಲಾಗುತ್ತಿದೆ. ಜತೆಗೆ ಕಾಡಾನೆಗಳು ಸೇರಿದಂತೆ ವನ್ಯಜೀವಿಗಳ ಉಪಟಳ, ವಾತಾವರಣದಲ್ಲಿನ ಏರು - ಪೇರು, ಕಾರ್ಮಿಕರ ಸಮಸ್ಯೆಗಳೂ ಮತ್ತೊಂದು ಪ್ರಮುಖ ವಿಚಾರವಾಗಿದೆ.
ಕಳೆದ ವರ್ಷ ೭ ಸಾವಿರ ಹೆಕ್ಟೇರ್‌ನಲ್ಲಿ ಕುಂಠಿತ
ಜಿಲ್ಲೆಯಲ್ಲಿ ಕಳೆದ ವರ್ಷ ಒಟ್ಟು ೨೯ ಸಾವಿರ ಹೆಕ್ಟೇರ್‌ನಲ್ಲಿ ಭತ್ತದ ಕೃಷಿ ಬೆಳೆಯುವ ಬಗ್ಗೆ ಗುರಿ ಹೊಂದಲಾಗಿತ್ತು. ಆದರೆ, ಕೃಷಿ ಇಲಾಖೆಯ ಮಾಹಿತಿಯಂತೆ ಕೇವಲ ೨೨ ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಭತ್ತ ಬೆಳೆಯಲಾಗಿದ್ದು, ೭ ಸಾವಿರ ಹೆಕ್ಟೇರ್‌ನಲ್ಲಿ ಗುರಿ ಸಾಧನೆಯಾಗಿಲ್ಲ ಎಂದು ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದಾರೆ. ಇದಕ್ಕೆ ಕಾರಣವೇನಿರಬಹುದೆಂಬ ‘ಶಕ್ತಿ’ಯ ಪ್ರಶ್ನೆಗೆ ಉತ್ತರಿಸಿದ ಅವರು ಕೂಡ ಈ ಮೇಲಿನ ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತಿದ್ದಾರೆ.
ವಿವಿಧ ಸಮಸ್ಯೆಗಳ ಜತೆ ಅವ್ಯಾಹತವಾಗಿ ಗದ್ದೆಗಳು ಇತರ ಉದ್ದೇಶಗಳಿಗೂ ಪರಿವರ್ತನೆಗೊಳ್ಳುತ್ತಿರುವುದೂ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಈ ಹಿಂದೆ ಕಂಡುಬರುತ್ತಿದ್ದ ಸಾಲು ಸಾಲು ಗದ್ದೆಗಳು ಇದೀಗ ನಿವೇಶನಗಳಾಗುತ್ತಿದ್ದು, ಮನೆ ಸೇರಿದಂತೆ ಕಟ್ಟಡಗಳು ತಲೆ ಎತ್ತುತ್ತಿವೆ. ವಾಣಿಜ್ಯ ಉದ್ದೇಶಗಳತ್ತವೇ ಹೆಚ್ಚು ಕೇಂದ್ರೀಕರಣವಾಗುತ್ತಿರುವ ದೃಶ್ಯವನ್ನು ಜಿಲ್ಲಾದ್ಯಂತ ಕಾಣಬಹುದಾಗಿದೆ.
ಪ್ರಸಕ್ತ ವರ್ಷವೂ ೨೯ ಸಾವಿರ ಹೆಕ್ಟೇರ್ ಗುರಿ
ಪ್ರಸಕ್ತ ವರ್ಷವೂ ಜಿಲ್ಲೆಯಲ್ಲಿ ೨೯ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಇದರಲ್ಲಿ ಎಷ್ಟು ಸಾಧನೆಯಾಗಬಹುದೆಂಬದನ್ನು ಕಾದು ನೋಡಬೇಕಿದೆ.
(ಮೊದಲ ಪುಟದಿಂದ) ಪ್ರಸ್ತುತ ೮೦ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಕೆಲಸ ನಡೆದಿದ್ದು, ಆಗಸ್ಟ್ ೩ನೇ ವಾರದತನಕ ಭತ್ತದ ಕೃಷಿ ಕೆಲಸದ ಸಮಯದ ಪರ್ವಕಾಲವಾಗಿರುತ್ತದೆ ಎಂದು ಕೃಷಿ ಇಲಾಖಾ ಜಂಟಿ ನಿರ್ದೇಶಕ ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ಬಿತ್ತನೆ ಬೀಜ ಪಡೆಯುವಲ್ಲೂ ಕುಂಠಿತ
ಕೃಷಿ ಇಲಾಖೆ ಈ ಬಾರಿ ಜಿಲ್ಲೆಯಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಜಿಲ್ಲೆಯ ೧೬ ರೈತ ಸಂಪರ್ಕ ಕೇಂದ್ರಗಳಲ್ಲಿ ೧೭೦೦ ಕ್ವಿಂಟಾಲ್‌ಗಳಷ್ಟು ಬಿತ್ತನೆ ಬೀಜವನ್ನು ದಾಸ್ತಾನು ಮಾಡಲು ವ್ಯವಸ್ಥೆ ಮಾಡಿತ್ತು. ಆದರೆ ಈ ತನಕ ೧೧೦೦ ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜವನ್ನು ಮಾತ್ರ ರೈತರು ಪಡೆದುಕೊಂಡಿದ್ದಾರೆ. ಇಲಾಖೆ ವತಿಯಿಂದ ಅತಿರ, ತುಂಗ, ಇಂಟಾನ್, ತನು ತಳಿಯ ಬಿತ್ತನೆ ಬೀಜಗಳು ರೈತರಿಗೆ ಲಭ್ಯವಿದೆ.
ಸಾಂಪ್ರದಾಯಿಕ ಬೆಳೆ
ಭತ್ತ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾದ ಕೃಷಿಯಾಗಿದೆ. ಕೆಲವಾರು ಕೃಷಿಕರು ಲಾಭ - ನಷ್ಟದ ಉದ್ದೇಶವನ್ನು ಹೊಂದಿದ್ದಾರೆ. ಸಮಸ್ಯೆಗಳ ನಡುವೆಯೂ ಭತ್ತವನ್ನು ಬೆಳೆಯುತ್ತಿರುವುದನ್ನು ಸ್ವಾಗತಿಸಬೇಕಿದೆ. ಇದಲ್ಲದೆ ಕೆಲವು ಸಂಘಟನೆಗಳೂ ಪಾಳುಬಿದ್ದ ಗದ್ದೆಗಳಲ್ಲಿ ಮತ್ತೆ ಕೃಷಿ ಮಾಡಲು ಮುಂದಾಗುತ್ತಿರುವುದು ಕೂಡ ಒಂದು ರೀತಿಯ ಆಶಾದಾಯಕ ಬೆಳೆವಣಿಗೆಯಾಗಿದೆ.
ಮುಸುಕಿನ ಜೋಳ
ಪ್ರಸಕ್ತ ವರ್ಷ ೧೫೦೦ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ. ಈ ಕೃಷಿ ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿದ್ದು, ಪ್ರಸ್ತುತ ೧೫೦ ಹೆಕ್ಟೇರ್ ಜಾಗದಲ್ಲಿ ಕೃಷಿ ನಡೆದಿದೆ ಎಂದು ಕೃಷಿ ಇಲಾಖಾ ಜಂಟಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.
ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲೂ ಮರೆ...
ಕೂಡಿಗೆ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆ ಕೊಡಗಿನ ಗಡಿ ಭಾಗವಾದ ಶಿರಂಗಾಲ ಗ್ರಾಮದವರೆಗೆ ಭತ್ತದ ಬೆಳೆಗೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಅಣೆಕಟ್ಟೆ ನಿರ್ಮಾಣವಾದ ನಂತರ ಜಿಲ್ಲೆಯ ಮತ್ತು ಪಕ್ಕದ ಎರಡು ಜಿಲ್ಲೆಯ ರೈತರಿಗೆ ಬೇಸಾಯಕ್ಕೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಅಣೆಕಟ್ಟೆಯ ಮುಂಭಾಗದಿAದ ಮುಖ್ಯ ನಾಲೆಯ ಮೂಲಕ ನೀರು ಹರಿಸುವ ಮೂಲಕ ರೈತರಿಗೆ ಸಹಕಾರಿಯಾಗಿದೆ.
ಕೊಡಗಿನ ಗಡಿಭಾಗದ ಅಚ್ಚುಕಟ್ಟು ಪ್ರದೇಶ ಗ್ರಾಮಗಳಾದ ಹುದುಗೂರು, ಮದಲಾಪುರ, ಶಿರಂಗಾಲ, ಮಲ್ಲೇನಹಳ್ಳಿ, ಹೆಬ್ಬಾಲೆ, ತೊರೆನೂರು, ಭುವನಗಿರಿ, ಅಳುವಾರ, ಕಣಿವೆ, ಹುಲುಸೆ ಸೇರಿದಂತೆ ಅನೇಕ ಉಪ ಗ್ರಾಮಗಳನ್ನು ಒಳಗೊಂಡAತೆ ನೀರಾವರಿ ಇಲಾಖೆಯ ಪ್ರಕಾರ ೬,೯೦೦ ಎಕರೆ ಪ್ರದೇಶವು ಹಾರಂಗಿ ನಾಲೆಯ ನೀರಾವರಿ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ.
ಇತ್ತೀಚಿನ ವರ್ಷಗಳಲ್ಲಿ ಅಚ್ಚುಕಟ್ಟು ಪ್ರದೇಶದ ಭೂಮಿಯಲ್ಲಿ ಭತ್ತದ ಗದ್ದೆಗಳಲ್ಲಿ ಭತ್ತದ ನಾಟಿ ಕೆಲಸ ಮರೆಯಾಗುತ್ತಿವೆ. ಈ ವ್ಯಾಪ್ತಿಯಲ್ಲಿ ಭತ್ತದ ನಾಟಿ ಗದ್ದೆಗಳು ಇದೀಗ ವಾಣಿಜ್ಯ ಬೆಳೆಗಳತ್ತ ಮುಖಮಾಡಿವೆ.
ಮೊದಲನೆಯದಾಗಿ ಈ ವ್ಯಾಪ್ತಿಯಲ್ಲಿ ಕಾರ್ಮಿಕರ ಸಮಸ್ಯೆ, ರೈತರು ಒಂದು ಎಕರೆ ಭತ್ತದ ಬೇಸಾಯಕ್ಕೆ ೩೦ ಸಾವಿರದಷ್ಟು ಹಣವನ್ನು ಖರ್ಚು ಮಾಡುವಂತಹ ಪ್ರಸಂಗ ಎದುರಾಗುತ್ತಿದೆ. ಆದರೆ ಬೇಸಾಯ ಮಾಡಿದರೂ ಭತ್ತದ ಬೆಳೆಗೆ ಸಮರ್ಪಕವಾದ, ನಿಗದಿತ ಬೆಲೆ ಇರದಿರುದರಿಂದಾಗಿ ನಷ್ಟ ಅನುಭವಿಸುವಂತಾಗಿದೆ. ಇದರಿಂದಾಗಿ ಶೇ. ೫೦ರಷ್ಟು ಭತ್ತದ ಕೃಷಿ ಭೂಮಿ ಕಡಿಮೆ ಯಾಗಿರುವುದು ಕಂಡುಬರುತ್ತಿದೆ.
ಅಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ಕೊಡಗಿನ ಗಡಿ ಭಾಗದವರೆಗೆ ಅಣೆಕಟ್ಟೆಯಿಂದ ಎರಡೂ ಬೆಳೆಗಳನ್ನು ಬೆಳೆಯಲು ನೀರಾವರಿ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಲಾಯಿತು. ಇದುವರೆಗೂ ಸಮರ್ಪಕವಾಗಿ ಎರಡನೇ ಬೆಳೆಗೆ ನೀರಾವರಿ ಸೌಲಭ್ಯ ಒದಗಿಸಿಲ್ಲ. ಜೊತೆಯಲ್ಲಿ ಅನೇಕ ರೈತರು ತಮ್ಮ ಜಮೀನಿನಲ್ಲಿ ಉತ್ತಮವಾದ ಗೃಹ ನಿರ್ಮಾಣದೊಂದಿಗೆ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆಗೆ ಸಂಬAಧಿಸಿದAತೆ ಗೃಹ ನಿರ್ಮಾಣ ಮಾಡಲಾಗಿದೆ. ಹಾಗಾಗಿ ಭತ್ತದ ಗದ್ದೆಗಳು ಕಡಿಮೆಯಾಗುತ್ತಾ ಬರುತ್ತಿವೆ.
ಭತ್ತದ ಬೇಸಾಯಕ್ಕೆ ಕಾರ್ಮಿಕರ ಕೊರತೆಯಿಂದಾಗಿ ಭತ್ತದ ಗದ್ದೆಗಳಲ್ಲಿ ರೈತರು ಟ್ರಾö್ಯಕ್ಟರ್ ಮೂಲಕ ಬೇಸಾಯ ಕ್ರಮಗಳನ್ನು ಅನುಸರಿಸಿ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಕೆ ಮಾಡಿಕೊಂಡು ಭತ್ತದ ಬದಲು ಪರ್ಯಾಯ ಬೆಳೆಗಳಾಗಿ ಅಡಿಕೆ, ತೆಂಗು, ಕಾಫಿ, ಸಿಹಿಗೆಣಸು, ಮರಗೆಣಸು ಸೇರಿದಂತೆ ವಾಣಿಜ್ಯ ಬೆಳೆಗಳಲ್ಲಿ ತೊಡಗಿದ್ದಾರೆ. ಇದರಿಂದಾಗಿ ಹಾರಂಗಿ ಅಣೆಕಟ್ಟೆಯ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಗದ್ದೆಗಳಲ್ಲಿ ಭತ್ತದ ಬೆಳೆ ಮರೆಯಾಗುತ್ತಿದೆ.
- ಕೆ.ಕೆ. ನಾಗರಾಜಶೆಟ್ಟಿ