ಮಡಿಕೇರಿ, ಜು. ೨೦: ಹಣ ಹಾಗೂ ಆಸ್ತಿಗಾಗಿ ತಂದೆಯ ಮೇಲೆ ಹಲ್ಲೆಗೈದು ನದಿಗೆ ಎಸೆದ ಮಗನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೂಡುಮಂಗಳೂರುವಿನಲ್ಲಿ ನೆಲೆಸಿದ್ದ ಮಂಜಣ್ಣ ಅವರ ಮೇಲೆ ಹಲ್ಲೆಗೈದು ಕೊಲೆ ಮಾಡಿದ ಆರೋಪದಡಿ ಪುತ್ರ ಕೆ.ಎಂ. ಚಂದ್ರಶೇಖರ್ (೨೮) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರ ಬಂಧನಕ್ಕೆ ಬಲೆಬೀಸಿದ್ದಾರೆ.
ನದಿಯಲ್ಲಿ ಪತ್ತೆಯಾಗಿದ್ದ ಮೃತದೇಹ
ಕುಶಾಲನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಚಿಕ್ಕಬೆಟ್ಟಗೇರಿ ಗ್ರಾಮದ ಕಾವೇರಿ ನದಿ ದಡದಲ್ಲಿ ಮಾ. ೧೬ ರಂದು ಮೃತದೇಹ ಪತ್ತೆಯಾಗಿದ್ದು, ವಿಚಾರಣೆ ಸಂದರ್ಭ ಕೂಡುಮಂಗಳೂರು ನಿವಾಸಿ ಮಂಜಣ್ಣ ಎಂದು ಗುರುತು ಪತ್ತೆಯಾಗಿದೆ. ಕೌಟುಂಬಿಕ ಸಮಸ್ಯೆಯಿಂದ ಪತ್ನಿ ಮತ್ತು ಮಕ್ಕಳಿಂದ ಬೇರೆಯಾಗಿದ್ದ ಮಂಜಣ್ಣ ಒಬ್ಬಂಟಿಯಾಗಿ ವಾಸವಿದ್ದರು. ೧೪ ವರ್ಷಗಳ ಹಿಂದೆ ಕಾಫಿ ಕ್ಯೂರಿಂಗ್ ಕೆಲಸ ಮಾಡುವ ಸಂದರ್ಭ ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಮಂಜಣ್ಣ ಅವರ ಎಡಕಾಲು ತುಂಡಾಗಿತ್ತು. ೪ಐದÀನೇ ಪುಟಕ್ಕೆ
(ಮೊದಲ ಪುಟದಿಂದ) ನಡೆಯಲಾಗದಿದ್ದರೂ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹುಣಸೂರಿನಲ್ಲಿ ನೆಲೆಸಿರುವ ಪತ್ನಿ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಡಿವೈಎಸ್‌ಪಿ ಚಂದ್ರಶೇಖರ್, ಸಿಪಿಐ ದಿನೇಶ್ ಕುಮಾರ್, ಪಿಎಸ್‌ಐ ರಾಮಚಂದ್ರ ಮತ್ತು ಸಿಬ್ಬಂದಿಗಳ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡ ಸಂದರ್ಭ ಮಂಜಣ್ಣ ಅವರ ಬಳಿಯಿದ್ದ ಹಣ, ಸ್ವಂತ ಮನೆ ಹಾಗೂ ಜಮೀನಿಗಾಗಿ ಮಗನಿಂದಲೇ ಕೃತ್ಯ ನಡೆದಿರುವುದು ಬಯಲಾಗಿದೆ.
ಮೈಸೂರಿನಲ್ಲಿ ಅಂಗಡಿ ನಡೆಸುತ್ತಿರುವ ಚಂದ್ರಶೇಖರ್ ತಂದೆಯ ಹಣ ಹಾಗೂ ಆಸ್ತಿಗಾಗಿ ಸಿದ್ದಾಪುರ ಹಾಗೂ ಚಿಕ್ಕಬೆಟ್ಟಗೇರಿಯ ತನ್ನ ಸ್ನೇಹಿತರೊಂದಿಗೆ ಕೊಲೆ ಮಾಡುವ ಉದ್ದೇಶದಿಂದ ಮೊದಲೇ ರೂಪಿಸಿದ ಸಂಚಿನAತೆ ಮಾ. ೧೪ ರಂದು ಚಂದ್ರಶೇಖರ್ ಸ್ನೇಹಿತನಿಗೆ ಸೇರಿದ ಆಲ್ಟೋ ಕಾರಿನಲ್ಲಿ ಕೂಡುಮಂಗಳೂರಿನ ಮನೆಯಿಂದ ಬಲವಂತವಾಗಿ ಮಂಜಣ್ಣ ಅವರನ್ನು ಕರೆದೊಯ್ದಿದ್ದಾರೆ. ಈ ವೇಳೆ ಮಂಜಣ್ಣ ಕೂಗಿಕೊಂಡಾಗ ಚಂದ್ರಶೇಖರ್ ಹಾಗೂ ಸಹಚರರು ಹಲ್ಲೆಗೈದಿದ್ದಾರೆ. ಇದರಿಂದ ಪ್ರಜ್ಞೆ ತಪ್ಪಿದ ಮಂಜಣ್ಣ ಸಾವನ್ನಪ್ಪಿರಬಹುದು ಎಂದು ಭಾವಿಸಿ ದೇಹವನ್ನು ಚಿಕ್ಕಬೆಟ್ಟಗೇರಿಯಲ್ಲಿ ಹರಿಯುತ್ತಿರುವ ಕಾವೇರಿ ನದಿಗೆ ಎಸೆದಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ. ಚಂದ್ರಶೇಖರ್ ವಿರುದ್ಧ ಬಿಎನ್‌ಎಸ್ ೬೧ (೨), ೧೩೭ (೨), ೧೦೩ (೧), ೨೩೮, ೩ (೫) ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿರುವ ಇತರ ಇಬ್ಬರು ಆರೋಪಿಗಳ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.