ಸೋಮವಾರಪೇಟೆ,ಜು.೨೦: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಷ್ಟು ಪ್ರವಾಸಿ ಸ್ಥಳಗಳಿದ್ದು, ಇಲ್ಲಿಗೆ ಬರುವ ಕೆಲವು ಪ್ರವಾಸಿಗಳಿಂದ ಸ್ಥಳೀಯರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಕೆಲವು ಪ್ರವಾಸಿಗರು ಸೂರ್ಲಬ್ಬಿ ಸರ್ಕಾರಿ ಶಾಲೆಯನ್ನು ಹೋಂ ಸ್ಟೇ ಮಾಡಿಕೊಂಡಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ನಿನ್ನೆ ಸಂಜೆ ವೇಳೆಗೆ ಈ ಭಾಗಕ್ಕೆ ಎರಡು ಬೈಕ್‌ಗಳಲ್ಲಿ ಆಗಮಿಸಿದ ಈರ್ವರು ಪ್ರವಾಸಿಗರು, ಸ್ಥಳೀಯರ ಮನೆಯ ಬಾಗಿಲು ತಟ್ಟಿ ರಾತ್ರಿ ವೇಳೆ ಸರ್ಕಾರಿ ಶಾಲೆಯ ಆವರಣದಲ್ಲಿ ತಂಗಲು ಅವಕಾಶವಿದೆಯೇ ಎಂದು ಕೇಳಿದ್ದಾರೆ.

ಶಾಲೆಯಲ್ಲಿ ತಂಗಬಾರದು, ಬೇಕಿದ್ದರೆ ಬಸ್ ನಿಲ್ದಾಣದಲ್ಲಿ ಉಳಿದುಕೊಳ್ಳಿ; ಇಲ್ಲವೇ ಸುತ್ತಮುತ್ತಲಲ್ಲಿ ಇರುವ ಹೋಂ ಸ್ಟೇಗಳಲ್ಲಿ ತಂಗುವAತೆ ತಿಳಿಸಿದ್ದಾರೆ. ಬಸ್ ನಿಲ್ದಾಣಕ್ಕೆ ತೆರಳಿದ ಪ್ರವಾಸಿಗರು, ನಂತರ ಸೂರ್ಲಬ್ಬಿ ಸರ್ಕಾರಿ ಶಾಲೆಯ ಗೇಟ್ ತೆಗೆದು ಎರಡು ಬೈಕ್‌ಗಳನ್ನು ಶಾಲಾ ಆವರಣದೊಳಗೆ ನಿಲುಗಡೆಗೊಳಿಸಿ, ಬಯಲು ವೇದಿಕೆಯಲ್ಲಿ ತಂಗಿದ್ದಾರೆ.

ಇAದು ಬೆಳಿಗ್ಗೆ ಸ್ಥಳೀಯರು ಯುವಕರನ್ನು ಕರೆದು ವಿಚಾರಿಸಿದ ಸಂದರ್ಭ, ‘ಇಲ್ಲಿ ಮಲಗಿದ್ದಕ್ಕೆ ನಿಮಗೇನು ಕಷ್ಟ? ಮಲಗಿದ ತಕ್ಷಣ ಏನಾಯಿತು ಇವಾಗ? ಯಾರಿಗೆ ಫೋನ್ ಮಾಡಬೇಕು ಹೇಳಿ; ಎಂಎಲ್‌ಎಗೆ ಫೋನ್ ಮಾಡಬೇಕಾ?’ ಎಂದು ದಬಾಯಿಸಿದ್ದಾರೆ.

ಈ ಸಂದರ್ಭ ಸ್ಥಳೀಯರು ಮಾದಾಪುರ ಪೊಲೀಸ್ ಉಪ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ ನಂತರ ಸುಮ್ಮನಾದ ಪ್ರವಾಸಿಗರು, ನಂತರ ಸ್ಥಳದಿಂದ ತೆರಳಿದ್ದಾರೆ. ವಿಚಾರಣೆ ಸಂದರ್ಭ ಓರ್ವ ಪ್ರವಾಸಿಗ ಗೋಣಿಕೊಪ್ಪದ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ಈತನ ಸ್ನೇಹಿತ ಬೆಂಗಳೂರಿನ ಯುವಕನೊಂದಿಗೆ ಬೈಕ್‌ನಲ್ಲಿ ಈ ಭಾಗಕ್ಕೆ ಆಗಮಿಸಿರುವುದಾಗಿ ತಿಳಿಸಿದ್ದಾನೆ.