ಕೂಡಿಗೆ, ಜು. ೨೦: ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಸೀಮಂತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಹೆಬ್ಬಾಲೆಯ ವೈದ್ಯಾಧಿಕಾರಿ ಡಾ. ಸಾನಿಯಾ ಅವರು ಸಾರ್ವಜನಿಕರಿಗೆ ಜನಸಂಖ್ಯಾ ಸ್ಫೋಟ, ಕುಟುಂಬ ಕಲ್ಯಾಣ ವಿಧಾನಗಳು, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಗರ್ಭಿಣಿಯರ, ಬಾಣಂತಿಯರ ಆರೈಕೆ ಬಗ್ಗೆ, ಮಕ್ಕಳ ಲಸಿಕೆ ಬಗ್ಗೆ, ಶಿಶುವಿನ ಆರೈಕೆ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಎಪಿಡಮೊಲೋಜಿಸ್ಟ್ ಕಿಶೋರ್ ಅವರು ಡೆಂಗ್ಯೂ ಜ್ವರದ ಬಗ್ಗೆ ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ತಂಬಾಕು ನಿಯಂತ್ರಣದ ಮೇಲ್ವಿಚಾರಕ ಪುನೀತ ಮತ್ತು ಮಂಜುನಾಥ್ ಅವರು ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ತೊಂದರೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಅಂಗನವಾಡಿ ಶಿಕ್ಷಕಿ ಶಾಲಿನಿ ಸೀಮಂತ ಕಾರ್ಯಕ್ರಮ ಹಾಗೂ ಪೋಷಣೆ ಆಹಾರದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಹಾಡಿಯ ಮುಖಂಡ ಮುತ್ತ ವಹಿಸಿದ್ದರು. ಆರೋಗ್ಯ ನಿರೀಕ್ಷಕ ಸಂಜಯ್ ಕುಮಾರ್ ಸ್ವಾಗತಿಸಿ, ವಂದಿಸಿದರು. ಸಮುದಾಯ ಆರೋಗ್ಯ ಅಧಿಕಾರಿ ದೀಪು, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಶೋಭಾ, ಸೌಮ್ಯ, ಸುಗುಣ ಹಾಗೂ ಆಶಾ ಕಾರ್ಯಕರ್ತೆಯರಾದ ಕವಿತಾ, ಶುಷಾ, ಚಂದ್ರಾವತಿ ಸೇರಿದಂತೆ ಹಾಡಿಯ ನೂರಾರು ಜನರು ಪಾಲ್ಗೊಂಡಿದ್ದರು. ನಾಲ್ಕು ಮಂದಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಯಿತು.