ಸೋಮವಾರಪೇಟೆ,ಜು.೨೦: ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸುವೊಂದು ಕಬ್ಬಿಣದ ವಿದ್ಯುತ್ ಕಂಬದಲ್ಲಿ ಹರಿಯುತ್ತಿದ್ದ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಸಮೀಪದ ಬಳಗುಂದ ಗ್ರಾಮದಲ್ಲಿ ನಡೆದಿದೆ.

ಬಳಗುಂದ ಗ್ರಾಮದ ಕೆ.ಆರ್.ಪೂವಯ್ಯರವರಿಗೆ ಸೇರಿದ ಹಸುವನ್ನು ಇಂದು ಬೆಳಿಗ್ಗೆ ಮೇಯಲು ಸಮೀಪದ ಗದ್ದಗೆ ಬಿಡಲಾಗಿತ್ತು. ಅಲ್ಲೇ ಇದ್ದ ಸುಮಾರು ೪೦ ವರ್ಷದ ಹಳೆಯ ಕಬ್ಬಿಣದ ವಿದ್ಯುತ್ ಕಂಬದ ಬಳಿ ಹಸು ಮೇಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಂಬವನ್ನು ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದೆ.

ಓಬಿರಾಯನ ಕಾಲದ ಕಂಬವನ್ನು ಬದಲಿಸಿ ಹೊಸ ಕಂಬ ಅಳವಡಿಸಲು ಸೆಸ್ಕ್ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವಾರದ ಒಳಗೆ ಹೊಸ ಕಂಬ ಅಳವಡಿಸಿ ತಂತಿಗಳನ್ನು ಸರಿಪಡಿಸದೆ ಇದ್ದಲ್ಲಿ ವಿದ್ಯುತ್ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಬಳಗುಂದ ಗ್ರಾಮದ ಗ್ರಾಮಾಧ್ಯಕ್ಷ ಬಿ.ಪಿ. ದಿವಾನ್, ಬಿ.ಆರ್. ಚೇತನ್, ಬಿ.ಬಿ. ಪ್ರಕಾಶ್, ಬಿ.ಸಿ. ಚಂದ್ರರಾಜು, ಪಿ.ಬಿ. ಆನಂದ, ಬಿ.ಪಿ. ಮೇಘನ್ ಅವರುಗಳು ಎಚ್ಚರಿಸಿದ್ದಾರೆ.