ಕೂಡಿಗೆ, ಜು. ೨೦: ವಿದ್ಯಾರ್ಥಿಗಳ ಕೊರತೆಯಿಂದ ೩೫ ವರ್ಷಗಳ ಹಳೆಯ ಸರಕಾರಿ ಪ್ರಾಥಮಿಕ ಶಾಲೆಗೆ ಬೀಗ ಮುದ್ರೆ ಬಿದ್ದಿದೆ.

೧೯೯೧ರಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರದಲ್ಲಿ ಆರಂಭಗೊAಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕ್ಷೀಣಿಸಿ ಮುಚ್ಚಲ್ಪಟ್ಟಿದೆ. ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದ ಈ ಶಾಲೆ ಮುಚ್ಚುತ್ತಿರುವುದು ಸ್ಥಳೀಯರಲ್ಲಿ ಬೇಸರ ತರಿಸಿದೆ.

ಅಂಗ್ಲ ಮಾಧ್ಯಮದಲ್ಲಿ ಓದಿಸಬೇಕೆಂಬ ಪೋಷಕರ ಒಲವಿನಿಂದ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಸರಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಈ ಸಾಲಿಗೆ ಸಿದ್ದಲಿಂಗಪುರ ಶಾಲೆಯೂ ಇದೀಗ ಸೇರ್ಪಡೆಗೊಂಡಿದೆ.

ಸಿದ್ದಲಿಂಗಪುರ, ಬಸಿರುಗುಪ್ಪೆ, ಅಳಿಲುಗುಪ್ಪೆ, ರಂಗಯ್ಯನಪುರ ವ್ಯಾಪ್ತಿಯ ಮಕ್ಕಳು ಇಲ್ಲಿ ಶಿಕ್ಷಣ ಅವಲಂಭಿಸಿದ್ದರು. ಆದರೆ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ೭, ೬ ಹಾಗೂ ೪ನೇ ತರಗತಿಗಳಲ್ಲಿ ತಲಾ ಓರ್ವ ಮತ್ತು ೫ನೇ ತರಗತಿಯಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದರು. ಈ ಪೈಕಿ ಇಬ್ಬರು ವಸತಿ ಶಾಲೆಗೆ ಸೇರ್ಪಡೆಗೊಂಡು ದಾಖಲಾತಿ ನೆಲಕಚ್ಚಿತ್ತು. ಇತರ ಮಕ್ಕಳು ಬೇರೆ ಶಾಲೆಗೆ ದಾಖಲಾದ ಕಾರಣ ಸಿದ್ದಲಿಂಗಪುರ ಶಾಲೆ ಮುಚ್ಚಬೇಕಾದ ಸ್ಥಿತಿಗೆ ತಲುಪಿದೆ.

ತಾ. ೬ ರಿಂದ ಶಾಲೆ ಮುಚ್ಚಿದ್ದು, ಶಿಕ್ಷಣ ಇಲಾಖೆ ಜಾಗೃತಿ ಮೂಡಿಸಿ ದಾಖಲಾತಿ ಹೆಚ್ಚಳಕ್ಕೆ ಪ್ರಯತ್ನಿಸಬೇಕು ಎಂದು ತೊರೆನೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಡಿ. ರವಿ ಹಾಗೂ ಸತೀಶ್ ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಾಲೆಯಲ್ಲಿದ್ದ ಮೂವರು ಶಿಕ್ಷಕರಲ್ಲಿ ಇಬ್ಬರು ವರ್ಗಾವಣೆಗೊಂಡರೆ, ಓರ್ವ ಶಿಕ್ಷಕಿಯನ್ನು ತೊರೆನೂರು ಪ್ರಾಥಮಿಕ ಶಾಲೆಗೆ ನಿಯೋಜಿಸಲಾಗಿದೆ. ಶಾಲಾ ದಾಖಲೆಗಳನ್ನು ಸಮೀಪದ ಅಳುವಾರ ಶಾಲೆಗೆ ನೀಡಲಾಗಿದೆ. - ಕೆ.ಕೆ. ನಾಗರಾಜಶೆಟ್ಟಿ