ಕುಶಾಲನಗರ, ಜು. ೨೧: ಕಳೆದ ಕೆಲವು ದಿನಗಳ ಕಾಲ ವಿಶಿಷ್ಟ ರೀತಿಯ ಹೂವು ಅರಳಿ ಪ್ರವಾಸಿಗರ ಮನ ಸೆಳೆದು ತಾತ್ಕಾಲಿಕ ಪ್ರವಾಸಿ ಕೇಂದ್ರವಾಗಿ ಪರಿವರ್ತನೆಗೊಂಡಿದ್ದ ಕುಶಾಲನಗರದ ತಾವರೆಕೆರೆಯಲ್ಲಿ ಇದೀಗ ಬೆಳೆದಿದ್ದ ಹೂಗಳು ಸಂಪೂರ್ಣ ಮಾಯವಾಗತೊಡಗಿವೆ.
ಕುಶಾಲನಗರ ಮಡಿಕೇರಿ ರಸ್ತೆಯ ಬೈಚನಹಳ್ಳಿ ಬಳಿಯ ಹೆದ್ದಾರಿ ಒತ್ತಿನಲ್ಲಿ ಅಭಿವೃದ್ಧಿ ಕಾಣದೆ ಪಾಳು ಬಿದ್ದಿರುವ ಕೆರೆಯಲ್ಲಿ ಸಮೀಪದ ವಾಣಿಜ್ಯ ಕಟ್ಟಡಗಳಿಂದ ಚರಂಡಿ ಮೂಲಕ ಸಂಗ್ರಹವಾಗುವ ಶೌಚ ತ್ಯಾಜ್ಯಗಳಿಂದ ಸಂಪೂರ್ಣ ಕಲುಷಿತಗೊಂಡು ಪಾಚಿ ಬೆಳೆದು ವಿಶಿಷ್ಟ ರೀತಿಯ ವರ್ಣ ರಂಜಿತ ಪುಷ್ಪಗಳು ಬೆಳೆದು ನಿಂತು ದಾರಿಹೋಕರನ್ನು ಆಕರ್ಷಿಸುತ್ತಿತ್ತು.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಇದನ್ನು ಪ್ರವಾಸಿ ತಾಣವೆಂದು ಭಾವಿಸಿ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಕೂಡ ತೊಡಕುಂಟಾಗುತಿತ್ತು.
ಇದನ್ನು ತಪ್ಪಿಸಲು ಕುಶಾಲನಗರ ಸಂಚಾರಿ ಪೊಲೀಸರು ಒಂದು ತಿಂಗಳ ಕಾಲ ಹೆಣಗಾಡಬೇಕಾದ ಪರಿಸ್ಥಿತಿ ಕೂಡ ಸೃಷ್ಟಿಯಾಗಿತ್ತು. ಜಿಲ್ಲೆ ಸೇರಿದಂತೆ ರಾಜ್ಯ ರಾಷ್ಟ್ರ ಮಾಧ್ಯಮಗಳಲ್ಲಿ ಕೂಡ ಕುಶಾಲನಗರದ ಐತಿಹಾಸಿಕ ತಾವರೆ ಕೆರೆ ಏಕಾಏಕಿ ಸುದ್ದಿಯಾಗಿತ್ತು. ಆದರೆ ಇದೀಗ ದಿಢೀರ್ ಸೃಷ್ಟಿಯಾದ ಹೂಗಳು ಅದೇ ರೀತಿಯಲ್ಲಿ ಮಾಯವಾಗತೊಡಗಿದ್ದು ಕೆರೆ ಮತ್ತೆ ಹಿಂದಿನ ಸ್ವರೂಪಕ್ಕೆ ಬಂದು ನಿಂತಿದೆ.
ಇನ್ನಾದರೂ ಕುಶಾಲನಗರ ಯೋಜನಾ ಪ್ರಾಧಿಕಾರ ಈ ಕೆರೆಗೆ ಮೀಸಲಿಟ್ಟಿರುವ ಸುಮಾರು ೩ ಕೋಟಿ ಹಣವನ್ನು ಸಮರ್ಪಕವಾಗಿ ಬಳಸಿ ಕುಶಾಲನಗರದ ಐತಿಹಾಸಿಕ ತಾವರೆಕೆರೆಯನ್ನು ಉತ್ತಮ ಪ್ರವಾಸಿ ಕೇಂದ್ರವನ್ನಾಗಿಸಲು ಕ್ರಿಯಾಯೋಜನೆ ರೂಪಿಸಲಿ ಎನ್ನುವುದು ಈ ಭಾಗದ ನಾಗರಿಕರ ಆಗ್ರಹವಾಗಿದೆ.
-ಚಂದ್ರಮೋಹನ್