ಶ್ರೀಮಂಗಲ, ಜು. ೨೧: ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ೨೦೨೫ರ ಜನವರಿ ತಿಂಗಳಿಗಿAತ ಹಿಂದಿನ ಯಾವುದೇ ಕಡತಗಳು ವಿಲೇವಾರಿ ಆಗದೇ ಉಳಿದಿದ್ದರೆ, ಅದರ ಬಗ್ಗೆ ಜಿಲ್ಲಾ ಸಾರ್ವಜನಿಕ ಹಿತಾರಕ್ಷಣಾ ಸಮಿತಿಗೆ ಆಗಸ್ಟ್ ೧೦ ರ ಒಳಗೆ ಮಾಹಿತಿ ನೀಡುವಂತೆ ಜಿಲ್ಲಾ ಸಾರ್ವಜನಿಕ ಹಿತಾರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಂದ ಬಹಳಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ತಾಲೂಕು ಕಚೇರಿಯಿಂದ ಮಾಹಿತಿ ಹಕ್ಕು ಕಾಯ್ದೆ ಅಡಿ ಈ ಬಗ್ಗೆ ಮಾಹಿತಿ ಕೇಳಿದ್ದು, ಅದರಂತೆ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ೨೦೨೪ ಜನವರಿಯಿಂದ ೨೦೨೫ ಜನವರಿವರೆಗೆ ೨೯೪೦ ಕಡತಗಳು ಸಾರ್ವಜನಿಕರಿಂದ ಬಂದಿದ್ದು, ಇದರಲ್ಲಿ ೨೨೭೬ ವಿಲೇವಾರಿಯಾಗಿದೆ. ಆದರೆ ೬೬೪ ಅರ್ಜಿಗಳು ಬಾಕಿ ಇದ್ದು ಇವುಗಳು ಸರ್ವೆ ಇಲಾಖೆ, ನಾಡಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಬಾಕಿ ಇದೆ ಎಂದು ತಿಳಿಸಿದ್ದಾರೆ.
ಆದರೆ ಬಹಳಷ್ಟು ಸಾರ್ವಜನಿಕರು ತಮ್ಮ ಕಡತಗಳು ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಹಲವು ವರ್ಷಗಳಿಂದ ಉಳಿದುಕೊಂಡಿವೆ. ಯಾವುದೇ ಕ್ರಮ ಆಗಿಲ್ಲ ಎಂದು ದೂರು ಬಂದಿದ್ದು ಈ ಬಗ್ಗೆ ಸಾರ್ವಜನಿಕರು ಆಗಸ್ಟ್ ೧೦ ರೊಳಗೆ ಕಡತ ಪ್ರತಿ ಸಹಿತ ಜಿಲ್ಲಾ ಸಾರ್ವಜನಿಕ ಹಿತಾರಕ್ಷಣಾ ಸಮಿತಿಗೆ ಮಾಹಿತಿ ನೀಡಬಹುದು, ಈ ಬಗ್ಗೆ ತಹಶೀಲ್ದಾರ್ ಅವರಿಂದ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುವುದು ಹೇಳಿದರು.
ಪೊನ್ನಂಪೇಟೆ ತಾಲೂಕಿನಲ್ಲಿ ಸುಮಾರು ೬೦೦ ಪಡಿತರ ಚೀಟಿಗಳು ರದ್ದಾಗಿದ್ದು, ಹೊಸದಾಗಿ ೧೦೦೦ ಕ್ಕೂ ಅಧಿಕ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆಯಾಗಿದೆ, ಪಡಿತರ ಚೀಟಿ ರದ್ದಾಗಿರುವ, ಹೊಸದಾಗಿ ಪಡೆಯಲು ವಿಳಂಬದಿAದ ಜನತೆಗೆ ಕಷ್ಟವಾಗಿದ್ದು, ತಾಲೂಕು ಆಹಾರ ಇಲಾಖೆಯ ಅಧಿಕಾರಿಗಳ ಸ್ಪಷ್ಟನೆಯಂತೆ ರದ್ದಾಗಿರುವ ಪಡಿತರ ಚೀಟಿಗೆ ನಿಖರ ಕಾರಣಗಳನ್ನು ತಿಳಿಸಿಲ್ಲ. ಹಾಗೆಯೇ ಹೊಸ ಪಡಿತರ ಚೀಟಿ ಸ್ವೀಕಾರಕ್ಕೆ ಸಾಫ್ಟ್ ವೇರ್ ತೆರೆದುಕೊಳ್ಳುತ್ತಿಲ್ಲ ಎಂದು ಮಾಹಿತಿ ನೀಡಿದ್ದು ಈ ಬಗ್ಗೆ ವೀರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಲಿಖಿತವಾಗಿ ಮನವಿ ಸಲ್ಲಿಸಿ ಸಮಸ್ಯೆಯನ್ನು ಆದಷ್ಟು ಶೀಘ್ರ ಬಗೆಹರಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಮಾಣೀರ ಮುತ್ತಪ್ಪ, ಮಾಣೀರ ವಿಜಯ ನಂಜಪ್ಪ, ಚೊಟ್ಟೆ ಯಾಂಡಮಾಡ ವಿಶ್ವನಾಥ್, ಕಾಳಿಮಾಡ ದಿಲೀಪ್, ಕಾಳಿಮಾಡ ತಮ್ಮು ಮುತ್ತಣ್ಣ ಹಾಜರಿದ್ದರು.