ಐಗೂರು, ಜು.೨೧: ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಐಗೂರು ಪದವಿಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ಗಿರೀಶ್ ಮಲ್ಲಪ್ಪ, ಐಎಎಸ್, ಐಪಿಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘವು ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರಲ್ಲದೆ, ಸದೃಢ ಸಮಾಜ ನಿರ್ಮಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು ಎಂದರು.
ಪ್ರಾಸ್ತಾವಿಕ ನುಡಿಯನ್ನಾಡಿದ ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಮುರುಳೀಧರ್, ಶಾಂತಳ್ಳಿ ಗ್ರಾಮದಲ್ಲಿ ಜನಿಸಿದ ಕೊಡಗು ಪತ್ರಿಕಾ ರಂಗದ ಭೀಷ್ಮ ಬಿ.ಎಸ್. ಗೋಪಾಲಕೃಷ್ಣ ಅವರು ಸ್ಥಾಪಿಸಿದ ಶಕ್ತಿ ದಿನಪತ್ರಿಕೆಗೆ ೬೮ ವರ್ಷವಾಗಿದ್ದು, ಇಂದು ಕೊಡಗಿನ ಮನೆ ಮಾತಾಗಿದೆ ಎಂದರು.
ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಸ್. ಎನ್. ಯೋಗೇಶ್ ಮಾತನಾಡಿ ರಾತ್ರಿ ವೇಳೆ ನಿದ್ದೆಗೆಟ್ಟು ಪತ್ರಿಕೆಗಳನ್ನು ಮುದ್ರಿಸಿ, ಬೆಳಗಿನ ಜಾವ ಮನೆಮನೆಗಳಿಗೆ ತಲುಪಿಸುವ ಪತ್ರಿಕಾ ರಂಗದ ಕಾರ್ಯ ಮಹತ್ವವಾದದ್ದು ಎಂದರು. ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಕುಮಾರ್ ಪ್ರಾಂಶುಪಾಲರಾದ ಉಮೇಶ್ ಮತ್ತು ಮುಖ್ಯ ಶಿಕ್ಷಕ ಯಶ್ವಂತ್ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಹರೀಶ್ ಕುಮಾರ್ ವಹಿಸಿದ್ದರು. ೨೦೨೪- ೨೫ನೇ ಸಾಲಿನ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಾದ ನಿಕ್ಷಿತ ಪಿ. ಸಿ. ಮತ್ತು ರಮ್ಯಾ ಹೆಚ್ .ಆರ್. ಇವರನ್ನು ಸನ್ಮಾನಿಸಿ, ವಿದ್ಯಾರ್ಥಿಗಳಾದ ಚಿರುಶ್ರೀ ಮತ್ತು ಚಂದನ್ ಇವರಿಗೆ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಪತ್ರಿಕೆಗಳ ಮಹತ್ವದ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಚಿರುಶ್ರೀ ಮತ್ತು ದ್ವಿತೀಯ ಸ್ಥಾನಗಳಿಸಿದ ಯಶಸ್ವಿ ಆರ್, ಇವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸಂಘದ ವತಿಯಿಂದ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಹೊನ್ನಪ್ಪ, ಸಂಘದ ಉಪಾಧ್ಯಕ್ಷ ಕವನ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ , ನಿರ್ದೇಶಕರಾದ ಇರ್ಫಾನ್ , ಗುರುದರ್ಶನ್ , ತಾಲೂಕು ಸಂಘದ ಖಜಾಂಚಿ ದುಶ್ಯಂತಕುಮಾರ್, ಸದಸ್ಯರಾದ ಸುಕುಮಾರ್, ವಸಂತ್, ಜೈನುದ್ದೀನ್, ಮಾಜಿ ಗ್ರಾಮ ಪಂ. ಸದಸ್ಯ ದಿನೇಶ್, ಶಿಕ್ಷಕರಾದ ಮಂಜುನಾಥ್, ಕೃಷ್ಣಪ್ಪ , ರಂಜನಿ, ಎಸ್ .ಎಸ್. ., ರೇಖಾ , ಗುಲಾಬಿ, ಶಶಿಕಲಾ ನಿಶ್ಚಯ್ ,ಸೌಭಾಗ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಪಿ. ಲೋಕೇಶ್ ಸ್ವಾಗತಿಸಿ ಶಿಕ್ಷಕ ಜಿ .ಮಂಜುನಾಥ್ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ ವಂದಿಸಿದರು.