ಸೋಮವಾರಪೇಟೆ,ಜು.೨೧: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿ, ಸ್ಥಳೀಯರ ಭಕ್ತಿ ಪ್ರಧಾನ ಕ್ಷೇತ್ರವಾಗಿರುವ ಕೋಟೆಬೆಟ್ಟ ಬೊಟ್ಲಯ್ಯಪ್ಪ ದೇವಾಲಯಕ್ಕೆ ಪಾದರಕ್ಷೆ ಧರಿಸಿ ತೆರಳಿದ್ದ ಪ್ರವಾಸಿಗನೋರ್ವವನ್ನು ಸ್ಥಳೀಯರು ಪ್ರಶ್ನಿಸಿದ ಸಂದರ್ಭ ಯುವಕ ಸ್ಥಳದಿಂದ ಕಾಲ್ಕಿತ್ತ ಘಟನೆ ನಡೆದಿದೆ.
ಗರ್ವಾಲೆ, ಸೂರ್ಲಬ್ಬಿ, ಮುಟ್ಲು, ಹಮ್ಮಿಯಾಲ, ಮುಕ್ಕೋಡ್ಲು ಸೇರಿದಂತೆ ಸುತ್ತಮುತ್ತಲ ಭಾಗದ ಮಂದಿಗೆ ಕೋಟೆಬೆಟ್ಟದ ತಟದಲ್ಲಿರುವ ಶ್ರೀ ಬೊಟ್ಲಪ್ಪ ಈಶ್ವರ ದೇವಾಲಯ ಶ್ರದ್ಧಾಭಕ್ತಿಯ ಕೇಂದ್ರವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿ ತಾಣವಾಗಿ ಖ್ಯಾತಿ ಗಳಿಸುತ್ತಿದೆ.
ಹಲವಷ್ಟು ಪ್ರವಾಸಿಗರು ಆಗಮಿಸುವ ಈ ಕ್ಷೇತ್ರವು ಪ್ರಕೃತಿ ಸೌಂದರ್ಯದ ಗಣಿಯಂತಿದ್ದು, ಪುರಾತನ ದೇವಾಲಯ ಇರುವುದರಿಂದ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಆದರೆ ಮೋಜು ಮಸ್ತಿಗೆಂದೇ ಆಗಮಿಸುವ ಕೆಲ ಪ್ರವಾಸಿಗರು ಕ್ಷೇತ್ರದ ಪಾವಿತ್ರö್ಯತೆಗೆ ಧಕ್ಕೆ ತರುತ್ತಿರುವುದು ಇತ್ತೀಚಿನ ವಿದ್ಯಮಾನವಾಗಿದೆ.
ಪ್ರವಾಸಿ ಯುವಕನೋರ್ವ ಪಾದರಕ್ಷೆ ಧರಿಸಿಯೇ ಬೊಟ್ಲಪ್ಪ ಈಶ್ವರ ದೇವಾಲಯದ ಮೆಟ್ಟಿಲುಗಳನ್ನು ಏರಿ ದೇವಾಲಯದ ಪ್ರದೇಶಕ್ಕೆ ತೆರಳಿದ್ದು, ವಾಪಸ್ ಆಗುವ ಸಂದರ್ಭ ಸ್ಥಳೀಯರು ಈತನನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಉಡಾಫೆಯ ಉತ್ತರ ನೀಡಿದ ಪ್ರವಾಸಿಗನನ್ನು ಹಿಡಿದುಕೊಳ್ಳಲು ತೆರಳಿದ ಸಂದರ್ಭ, ಸ್ಥಳೀಯರನ್ನು ನೂಕಿ ಮೆಟ್ಟಿಲಿನ ಮೇಲ್ಭಾಗಕ್ಕೆ ಓಡಿ ಹೋಗಿದ್ದಾನೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರವಾಸಿಗರ ಇಂತಹ ವರ್ತನೆಗೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪಾದರಕ್ಷೆಗಳನ್ನು ಧರಿಸಿ ದೇವಾಲಯಕ್ಕೆ ತೆರಳಬಾರದು ಎಂದು ಸೂಚನಾ ಫಲಕ ಅಳವಡಿಸಿದ್ದರೂ ಸಹ, ಇದನ್ನು ಲೆಕ್ಕಿಸದೇ ಕೆಲವರು ತೆರಳುತ್ತಿರುವುದು ಸರಿಯಲ್ಲ. ಶ್ರದ್ಧಾಕೇಂದ್ರಗಳ ಪಾವಿತ್ರö್ಯತೆಗೆ ಧಕ್ಕೆಯಾಗದಂತೆ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ