ಕೂಡಿಗೆ, ಜು. ೩೧: ವಿವಿಧೆಡೆ ನಡೆಯುತ್ತಿರುವ ಜಲ ಜೀವನ್ ಮಿಷನ್ ಕಾಮಗಾರಿಗಳ ಪ್ರಗತಿ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಪರಿಶೀಲನೆ ನಡೆಸಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ತಂಡದೊAದಿಗೆ ಕುಶಾಲನಗರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನಡೆದಿರುವ ಕಾಮಗಾರಿಗಳ ಗುಣಮಟ್ಟ ಹಾಗೂ ಪ್ರಗತಿಯ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ನಂಜರಾಯಪಟ್ಟಣ, ೭ನೇ ಹೊಸಕೋಟೆ, ಕೂಡುಮಂಗಳೂರು, ಹೆಬ್ಬಾಲೆ ಸೇರಿದಂತೆ ವಿವಿಧ ಕಡೆಗಳಿಗೆ ತೆರಳಿದ ಆನಂದ್ ಪ್ರಕಾಶ್ ಮೀನಾ ಅವರು, ಅಳವಡಿಸಿರುವ ನಲ್ಲಿ ಸಂಪರ್ಕ, ಅದರ ಗುಣಮಟ್ಟ, ಮೀಟರ್ ಅಳವಡಿಕೆ, ಕುಡಿಯುವ ನೀರಿನ ಪೂರೈಕೆ, ರಸ್ತೆ ಪುನಶ್ಚೇತನ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ತಪಾಸಣೆಯ ಯಂತ್ರಗಳ ಪರಿಶೀಲನೆ ಕೈಗೊಂಡರು.

ಇದೇ ಸಂದರ್ಭ ಶಾಲೆ, ಗ್ರಂಥಾಲಯ ಮತ್ತು ಅಂಗನವಾಡಿಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸರಬರಾಜು ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಪ್ರಮುಖ ಹೆಬ್ಬಾಲೆಯಲ್ಲಿ ಕಾವೇರಿ ನದಿಯಿಂದ ಕುಡಿಯುವ ನೀರಿನಲ್ಲಿ ಸರಬರಾಜು ಮಾಡುವ ಜಾಕ್‌ವೆಲ್ ಸ್ಥಳಕ್ಕೂ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಭಾಸ್ಕರ್, ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರ ಕುಮಾರ್, ಸೇರಿದಂತೆ ಸಹಾಯಕ ಇಂಜಿನಿಯರ್ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.