ಮಡಿಕೇರಿ, ಆ. ೧: ಕೊಡಗು ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಬಟರ್ ಫ್ರೂಟ್ (ಬೆಣ್ಣೆ ಹಣ್ಣು) ಬೆಳೆಯುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ವಾರ್ಷಿಕವಾಗಿ ಎರಡರಿಂದ ಮೂರು ಬಾರಿ ಫಸಲು ನೀಡುವುದರಿಂದ ತೋಟದಲ್ಲಿ ಇತ್ತೀಚಿನ ದಿನಗಳಲ್ಲಿ ಬಟರ್ ಫ್ರೂಟ್ ಬೆಳೆಗೆ ಬೆಳೆಗಾರರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದೀಗ ಜಿಲ್ಲೆಯಲ್ಲಿ ಬಟರ್ ಫ್ರೂಟ್ ಗಿಂತ ಬಟರ್ ಫ್ರೂಟ್ ಬೀಜಕ್ಕೆ ಹೆಚ್ಚು ಬೇಡಿಕೆ ಶುರುವಾಗಿದೆ.

ಒಂದು ಬಟರ್ ಫ್ರೂಟ್ ಬೀಜ ೬ ರಿಂದ ೮ರೂ. ವರೆಗೆ ಮಾರಾಟವಾಗುತ್ತಿದೆ.

ಜಿಲ್ಲೆಯಲ್ಲಿ ಬಟರ್ ಫ್ರೂಟ್ ನರ್ಸರಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಬಟರ್ ಫ್ರೂಟ್ ಬೀಜಕ್ಕೂ ಕೂಡ ಬೇಡಿಕೆ ಹೆಚ್ಚತೊಡಗಿದೆ. ಬಟರ್ ಫ್ರೂಟ್ ವ್ಯಾಪಾರಿಗಳು ಬಟರ್ ಫ್ರೂಟ್ ವ್ಯಾಪಾರದೊಂದಿಗೆ ಇದೀಗ ಬಟರ್ ಫ್ರೂಟ್ ಬೀಜದ ವ್ಯಾಪಾರಕ್ಕೂ ಇಳಿದು ಒಳ್ಳೆಯ ಲಾಭಗಳಿಸುತ್ತಿದ್ದಾರೆ.

ಬಟರ್ ಫ್ರೂಟ್ ಗಿಡ ಕಸಿ ಮಾಡಲು ಬೀಜ!

ಜಿಲ್ಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಬಟರ್ ಫ್ರೂಟ್ ಕಸಿ ಮಾಡಿರುವ ಗಿಡಗಳಿಗೆ ಭಾರೀ ಬೇಡಿಕೆ ಇದೆ.

ಕಸಿ ಮಾಡಿರುವ ವಿವಿಧ ಬಟರ್ ಫ್ರೂಟ್ ತಳಿಗಳು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ, ಮಹಾರಾಷ್ಟç, ಕೇರಳ ರಾಜ್ಯಗಳಿಗೆ ಕೊಡಗು ಜಿಲ್ಲೆಯಿಂದ ಸರಬರಾಜು ಆಗುತ್ತಿವೆ. ಬಟರ್ ಫ್ರೂಟ್ ಕಸಿ ಮಾಡಿರುವ ಗಿಡಗಳು ೧೦೦ ರಿಂದ ೧೫೦ರೂಗಳವರೆಗೆ ಮಾರಾಟವಾಗುತ್ತಿದೆ. ಹೊರ ರಾಜ್ಯಕ್ಕೆ ವಾರ್ಷಿಕವಾಗಿ ಲಕ್ಷಾಂತರ ಗಿಡಗಳು ಸರಬರಾಜಾಗುತ್ತಿವೆ.

ಬಟರ್ ಫ್ರೂಟ್ ಕಸಿ ಮಾಡಿರುವ ಗಿಡಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬಟರ್ ಫ್ರೂಟ್ ಬೀಜಕ್ಕೂ ಡಿಮ್ಯಾಂಡ್ ಹೆಚ್ಚಾಗಿದೆ.

(ಮೊದಲ ಪುಟದಿಂದ) ಯಾರಿಗೂ ಬೇಡದೆ ತೋಟದಲ್ಲಿ ಕೊಳೆತು ಬಿದ್ದಿದ್ದ ಬಟರ್ ಫ್ರೂಟ್ ಬೀಜಗಳಿಗೆ ಇದೀಗ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಬಟರ್ ಫ್ರೂಟ್ ನರ್ಸರಿ ಕೃಷಿಯಲ್ಲಿ ತೊಡಗಿಸಿಕೊಂಡಿರುವವರು ಬೆಣ್ಣೆಹಣ್ಣು ಬೆಳೆದಿರುವವರಿಂದ ಬೀಜಗಳನ್ನು ಖರೀದಿಸುತ್ತಿದ್ದಾರೆ.

ಅದಲ್ಲದೇ ಬಟರ್ ಫ್ರೂಟ್ ಕೊಯ್ಲಿನ ಸಂದರ್ಭದಲ್ಲಿ ವ್ಯಾಪಾರಿಗಳು ೨ರಿಂದ ಮೂರು ರೂಗಳಿಗೆ ಬಟರ್ ಫ್ರೂಟ್ ಬೀಜಗಳನ್ನು ಖರೀದಿಸಿ ೬ ರಿಂದ ೮ ರೂವರೆಗೆ ನರ್ಸರಿ ಮಾಡುವವರಿಗೆ ಮಾರಾಟ ಮಾಡುತ್ತಿದ್ದಾರೆ.

ಬೆಣ್ಣೆ ಹಣ್ಣುಗಳ ಬೀಜಕ್ಕೆ ಡಿಮ್ಯಾಂಡ್ ಸೃಷ್ಟಿಯಾಗುತ್ತಿದ್ದಂತೆ ವ್ಯಾಪಾರಿಗಳು ಬಟರ್ ಫ್ರೂಟ್ ಗಿಂತ ಬೀಜ ಖರೀದಿಸಲು ಹೆಚ್ಚು ಆಸಕ್ತಿ ತೋರಿದ್ದಾರೆ. ಬಟರ್ ಫ್ರೂಟ್ ಮರಗಳಿಂದ ಹಣ್ಣಾಗಿ ನೆಲಕ್ಕೆ ಬಿದ್ದಿರುವ ಬೀಜಗಳನ್ನು ಹೆಕ್ಕಿ ತೆಗೆದು ಮಾರಾಟ ಮಾಡುತ್ತಿದ್ದಾರೆ.

ಅದಲ್ಲದೇ ಕೊಯ್ಲು ಮಾಡುವಾಗ ಹಣ್ಣಾಗಿರುವ ಹಾಗೂ ಬೆಳೆದಿರುವ ಬಟರ್ ಫ್ರೂಟ್‌ಗಳಿಂದಲೂ ಬೀಜಗಳನ್ನು ಹೊರತೆಗೆದು ಮಾರಾಟ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಬಟರ್ ಫ್ರೂಟ್‌ಗೆ ಬೇಡಿಕೆ ಹೆಚ್ಚಾದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬಟರ್ ಫ್ರೂಟ್ ಗಿಡಗಳ ನರ್ಸರಿ ಕೂಡ ಹೆಚ್ಚಾಗಿದೆ. ಮನೆಯ ಹಿಂಭಾಗದ ಸಣ್ಣ ಭಾಗದಲ್ಲಿ ಕೂಡ ಬಟರ್ ಫ್ರೂಟ್ ಕಸಿ ಮಾಡಿರುವ ಗಿಡಗಳನ್ನು ಬೆಳೆಸುತ್ತಿದ್ದಾರೆ.

ತೋಟಗಳಲ್ಲಿ ಕೊಳೆತು ಬಿದ್ದಿದ್ದ ಬಟರ್ ಫ್ರೂಟ್ ಬೀಜಕ್ಕೆ ಇದೀಗ ಜಿಲ್ಲೆಯಲ್ಲಿ ಬೇಡಿಕೆ ಸೃಷ್ಟಿಯಾಗಿರುವುದು ವಿಶೇಷ.

(ಕೆ.ಎಂ ಇಸ್ಮಾಯಿಲ್ ಕಂಡಕರೆ)