ವೀರಾಜಪೇಟೆ, ಆ. ೧: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಸಮೀಪವಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಗುಡ್ಡ ಕುಸಿತಗೊಂಡು ಮಳೆಯಿಂದ ಭಾರೀ ಪ್ರಮಾಣದ ಮಣ್ಣು ಕೊಚ್ಚಿಹೋಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ.
ವೀರಾಜಪೇಟೆ ಹೋಬಳಿಯ ಪಾಲಂಗಾಲ ಗ್ರಾಮದ ಸ.ನಂ ೧೭೧/೧೧ಪಿ೨ ರಲ್ಲಿ ಈ ಭೂಕುಸಿತ ಸಂಭವಿಸಿದೆ. ೩೪೧.೦೦ ಎಕ್ರೆ ಅರಣ್ಯ ಪ್ರದೇಶದ ಕೊಡಗು ಮತ್ತು ಕೇರಳ ಗಡಿ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಎತ್ತರದ ಪ್ರದೇಶದಿಂದ ಕುಸಿತ ಸಂಭವಿಸಿ, ನೂರಾರು ಮೀಟರ್ಗಳ ಉದ್ದಕ್ಕೆ ಸಾಗಿದೆ. ಅರಣ್ಯ ಪ್ರದೇಶದೊಳಗೆ ವ್ಯಾಪ್ತಿ ಇದ್ದುದ್ದರಿಂದ ಹೆಚ್ಚಿನ ಹಾನಿಯಾಗಿಲ್ಲ. ಈ ಭೂಕುಸಿತ ಜಾಗದಿಂದ ಅಂದಾಜು ೧೫ ಕಿ.ಮೀ. ವ್ಯಾಪ್ತಿ ಯಲ್ಲಿ ಜನವಸತಿ ಇಲ್ಲ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ತೋಡು ಹರಿಯುತ್ತಿದ್ದು, ಮಳೆಯ ತೀವ್ರತೆಯ ಹಿನ್ನೆಲೆ ಮರಗಳು ಬಿದ್ದು, ತೋಡಿನಲ್ಲಿ ನೀರು ಹರಿಯಲಾಗದೆ ಸಮಸ್ಯೆಯುಂಟಾಗಿ ಅರಣ್ಯದಲ್ಲಿನ ಗುಡ್ಡ ಕುಸಿತಗೊಂಡು ಸಂಪೂರ್ಣ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಸ್ಥಳಕ್ಕೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು, ವೀರಾಜಪೇಟೆ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಲೆಕ್ಕಿಗರಾದ ಅನುಷಾ, ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಹಾಗೂ ವಾರ್ಡ್ ಸದಸ್ಯರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.