ಕೂಡಿಗೆ, ಜು. ೩೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರ ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಹಳೆಯ ತಾಜ್ಯಗಳನ್ನು ವಿಲೇವಾರಿ ಮಾಡುವ ಟೆಂಡರ್ ಪ್ರಕ್ರಿಯೆಯು ನಡೆದಿದ್ದು, ಇದೀಗ ಅತಿಯಾದ ಮಳೆಯಿಂದಾಗಿ ಹಳೆಯ ಕಸ ವಿಲೇವಾರಿ ಕಾರ್ಯ ಸ್ಥಗಿತಗೊಂಡಿದೆ. ಕುಶಾಲನಗರ ಪುರಸಭೆಯ ಸೂಚನೆ ಮೇರೆಗೆ ಘಟಕ ಮತ್ತು ಸುತ್ತಮುತ್ತಲಿನ ಮನೆಗಳ ಮುಂಭಾಗದ ಜಾಗಕ್ಕೆ ಯಾವುದೇ ರೋಗ ರುಜಿನಗಳು ಬಾರದಂತೆ ಮತ್ತು ದುರ್ವಾಸನೆ ಬಾರದಂತೆ ಡಿ.ಡಿ.ಟಿ. ಪೌಡರ್ ಸಿಂಪಡಣೆ ಮಾಡಲಾಗುತ್ತಿದೆ.
ಅತಿಯಾದ ಮಳೆಯಿಂದಾಗಿ ಸ್ಥಳಾಂತರ ಕಾರ್ಯ ಸ್ವಲ್ಪಮಟ್ಟಿಗೆ ಸ್ಥಗಿತಗೊಂಡಿದೆ. ಮಳೆಯ ಬಿಡುವಿನ ನಂತರ ಹಳೆಯ ಕಸವನ್ನು ಸ್ಥಳಾಂತರ ಮಾಡಲಾಗುವುದು.
ಘಟಕದ ಸಮೀಪದಲ್ಲಿರುವ ಮನೆಗಳಿಗೆ ದುರ್ವಾಸನೆ ಬಾರದಂತೆ ಡಿ.ಡಿ.ಟಿ. ಪೌಡರ್ ಸಿಂಪಡಣೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯಲ್ಲಿ ದುರ್ವಾಸನೆ ಬಾರದಂತೆ ಕ್ರಮಗಳನ್ನು ಕುಶಾಲನಗರ ಪುರಸಭೆಯ ವತಿಯಿಂದ ಕೈಗೊಳ್ಳಲಾಗುವುದು ಎಂದು ಆರೋಗ್ಯ ಅಧಿಕಾರಿ ಉದಯ್ ತಿಳಿಸಿದ್ದಾರೆ.