ಚೆಯ್ಯಂಡಾಣೆ, ಆ. ೧: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ಗ್ರಾಮದ ಬೆಳೆÀಗಾರರ ತೋಟಗಳಿಗೆ ಲಗ್ಗೆಇಟ್ಟು ದಾಂಧÀಲೆ ನಡೆಸಿ ಕೃಷಿ ಗಿಡಗಳನ್ನು ಹಾನಿ ಪಡಿಸಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

ಕೋಕೇರಿ ಗ್ರಾಮದ ಪೆಮ್ಮಂಡ ರಘು ಪೂಣಚ್ಚ ಅವರ ತೋಟಕ್ಕೆ ಲಗ್ಗೆಇಟ್ಟ ಕಾಡಾನೆ ತೋಟದಲ್ಲಿ ಕಾಫಿ, ಬಾಳೆ ಮತ್ತಿತರ ಗಿಡಗಳನ್ನು ತುಳಿದು ನಾಶಪಡಿಸಿದೆ.

ತೋಟದಲ್ಲಿ ೫೦ಕ್ಕೂ ಅಧಿಕ ಅಡಿಕೆ ಗಿಡಗಳನ್ನು ನಾಶಪಡಿಸಿದ್ದು, ಈ ವ್ಯಾಪ್ತಿಯ ಮಚ್ಚಂಡ ಸುಮತಿ ಕುಂಞಪ್ಪ ಹಾಗೂ ಮತ್ತಿತÀರÀರ ತೋಟಕ್ಕೆ ಕೂಡ ಲಗ್ಗೆಇಟ್ಟು ಅಪಾರ ಪ್ರಮಾಣದ ಹಾನಿಪಡಿಸಿದೆ.

ಈ ವ್ಯಾಪ್ತಿಯಲ್ಲಿ ೨೦ ಕ್ಕೂ ಅಧಿಕ ಕಾಡಾನೆಗಳು ತೋಟದಲ್ಲೇ ಸಂಚಾರ ನಡೆಸುತ್ತಿದ್ದು, ಇದರ ಆವಾಸ ಸ್ಥಳ ಕಾಫಿ ತೋಟವೇ ಆಗಿದೆ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

ಗ್ರಾಮದ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು, ನಡೆದಾಡಲು ಜನರು ಭಯಪಡುವ ಪರಿಸ್ಥಿತಿ ಉದ್ಭವವಾಗಿದೆ, ಕಾರ್ಮಿಕರಂತೂ ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.