ಶನಿವಾರಸಂತೆ, ಆ. ೨ : ೨೫ ಸಂಘಟನೆಗಳನ್ನು ಒಳಗೊಂಡಿರುವ ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಕೊಡಗು, ಹಾಸನ, ಚಿಕ್ಕಮಗಳೂರು ೩ ಜಿಲ್ಲೆಗಳಿಗೆ ಸೀಮಿತವಾಗಿ ಹೋರಾಟ ನಡೆಸುತ್ತಿದೆ. ಸಂಘ ಬೆಳೆದು ಬೆಳೆಗಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಭೆಯನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ಬಿ. ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರಸಂತೆ ಸಮೀಪದ ಮಾದ್ರೆ ರಸ್ತೆಯಲ್ಲಿರುವ ಐಸಿರಿ ಫಾರ್ಮ್ಸ್ ರೆಸಾರ್ಟ್ನ ಸಭಾಂಗಣದಲ್ಲಿ ಶನಿವಾರಸಂತೆ ಹೋಬಳಿ ನಮ್ಮ ಬೆಳೆಗಾರರ ಸ್ವ ಸಹಾಯ ಸಂಘದ ವತಿಯಿಂದ ನಡೆದ ಕರ್ನಾಟಕ ಗ್ರೋವರ್ಸ್ ಫೆಡರೇಷನ್ನ ೭ನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದಲ್ಲಿ ಶೇಕಡ ೯೮ರಷ್ಟು ಸಣ್ಣ ಬೆಳೆಗಾರರಿದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಭೂಮಿಗಾಗಿ, ಭೂಮಿ ಗೇಣಿ ಕೊಡುವ ವಿಚಾರವಾಗಿ ಹೋರಾಟ ಮಾಡಬೇಕಾಗಿದೆ. ಕಾಫಿ ಮಂಡಳಿ ಹಾಗೂ ಬೆಳೆಗಾರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವುದಿಲ್ಲ. ಯೋಜನೆ ತಯಾರಿಸಿ, ಸಮಸ್ಯೆಗಳ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸಬೇಕು. ಸಿಸಿಆರ್ವಿಗೆ ಬೆಳೆಗಾರರು ಸಹಕಾರ ನೀಡಬೇಕು ಎಂದರು.
ಕೆಜಿಎಫ್ನ ಪ್ರಧಾನ ಕಾರ್ಯದರ್ಶಿ ಟಿ.ಪಿ. ಸುರೇಂದ್ರ ಅವರು ಕಾಡಾನೆಗಳ ಸಮಸ್ಯೆ ಬಗ್ಗೆ ಮಾತನಾಡಿ, ಕಾಡಾನೆಗಳ ಸಮಸ್ಯೆಗಳ ಬಗ್ಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಅರಣ್ಯ ಇಲಾಖೆ ಕಾಡಾನೆಗಳ ಸಾವಿಗೆ ಕಾರಣ ತಿಳಿಸುತ್ತಿಲ್ಲ. ಕಾಡು ಕಡಿದು ನಾಶ ಮಾಡುತ್ತಿರುವುದರಿಂದ ಕಾಡಾನೆಗಳು ನಗರ ಪ್ರದೇಶದತ್ತ ದಾಳಿ ಮಾಡುತ್ತಿವೆ ಎಂದರು.
ಕೆಜಿಎಫ್ ಉಪಾಧ್ಯಕ್ಷ ಬಿ.ಎಂ. ನಾಗರಾಜ್ ಮಾತನಾಡಿ, ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಭೆ ಆಯೋಜಿಸಲಾಗಿದೆ. ೭೫-೧೦೦ ಇಂಚು ಮಳೆಯಾಗಿದ್ದು; ಬೆಳೆಗಾರರ ಸಮಸ್ಯೆ, ಬೆಳೆ ಹಾನಿ ಬಗ್ಗೆ ಚಿಂತನೆ ನಡೆಸಿ, ಪರಿಹಾರ ಒದಗಿಸುವಂತೆ ಹೇಳಿದರು.
ವಿವಿಧೆಡೆಯಿಂದ ಆಗಮಿಸಿದ್ದ ಬೆಳೆಗಾರರು ಕೃಷಿ, ಬೆಳೆ ಹಾನಿ, ಕಾಫಿ ಬ್ರಾಂಡ್, ಅರಣ್ಯ ಭೂಮಿ, ಜಮ್ಮಾ ಮತ್ತು ಇತರೆ ಕೃಷಿ ಭೂಮಿ, ಕಾಡಾನೆಗಳ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
ಶನಿವಾರಸಂತೆ ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ಅಧ್ಯಕ್ಷ ಎಸ್.ಎಂ.ಉಮಾಶAಕರ್ ಮಾತನಾಡಿ, ಸಂಘಕ್ಕೆ ಸ್ವಂತ ಕಟ್ಟಡ ಇಲ್ಲದಿರುವ ಬಗ್ಗೆ ಹಾಗೂ ಕೆಜಿಎಫ್ ಸಂಘಟನಾ ಕಾರ್ಯದರ್ಶಿ ಎಸ್.ಸಿ. ಪುಟ್ಟಸ್ವಾಮಿ ಸ್ಥಳೀಯ ಸಮಸ್ಯೆಗಳು ಹಾಗೂ ಸಭೆಯಲ್ಲಿ ಮಂಡಿಸಿದ ನಿರ್ಣಯಗಳು ಕಾರ್ಯರೂಪಕ್ಕೆ ಬರುವಂತೆ ಒತ್ತಾಯಿಸಿ ಮಾತನಾಡಿದರು. ಖಜಾಂಚಿ ಎಂ.ಕೆ. ಸುಂದರೇಶ್ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಜಯರಾಂ, ಮಾಜಿ ಅಧ್ಯಕ್ಷ ಡಾ. ಮೋಹನ್ ಕುಮಾರ್, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಲತೇಶ್ ಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶನಿವಾರಸಂತೆ ನಮ್ಮ ಬೆಳೆಗಾರರ ಸ್ವ ಸಹಾಯ ಸಂಘದಲ್ಲಿ ೧೭ ವರ್ಷ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷ ಆರ್.ಪಿ.ಲಕ್ಷ್ಮಣ್ - ಪತ್ನಿ ಗಂಗಮ್ಮ ದಂಪತಿ, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಲತೇಶ್ ಗೌಡ, ಕಾರ್ಯದರ್ಶಿ ಮಹೇಶ್, ಬೆಳೆಗಾರರಾದ ಎ.ಡಿ. ದೊಡ್ಡಪ್ಪ, ದೇವಾಂಬಿಕಾಮಹೇಶ್ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೆಜಿಎಫ್ ಉಪಾಧ್ಯಕ್ಷರಾದ ಸಿ.ಎಸ್. ಸುರೇಶ್, ಕೆ.ಕೆ. ವಿಶ್ವನಾಥ್, ಸಂಘಟನಾ ಕಾರ್ಯದರ್ಶಿಗಳಾದ ಬಿ.ಜಿ .ಯತೀಶ್, ಅಶೋಕ್, ತಾಲೂಕು ರೈತ ಸಂಘದ ಕಾರ್ಯದರ್ಶಿ ಜಿ.ಎಂ. ಹೂವಯ್ಯ, ನಮ್ಮ ಬೆಳೆಗಾರರ ಸ್ವಸಹಾಯ ಸಂಘದ ಉಪಾಧ್ಯಕ್ಷ ಎಚ್.ಎಸ್. ದಿವಾಕರ್, ಹಿರಿಯ ಸಹಕಾರಿ ಎಚ್.ಎಸ್. ಸುಬ್ಬಪ್ಪ, ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಮಾಶಂಕರ್ ಸ್ವಾಗತಿಸಿ, ವಂದಿಸಿದರು.