ಮಡಿಕೇರಿ, ಆ. ೨: ಕೋರ್ಟ್ ಆದೇಶದ ಅನ್ವಯ ಕಾಫಿ ಮಂಡಳಿಗೆ ಪಾವತಿಸಲು ಬಾಕಿ ಉಳಿದಿರುವ ರೂ. ೬.೫೦ ಕೋಟಿ ಬಡ್ಡಿ ಹಣವನ್ನು ಮನ್ನಾ ಮಾಡಲು ಕೇಂದ್ರ ಸರಕಾರದ ಗಮನ ಸೆಳೆಯುವಂತೆ ಕಾಫಿ ಬೆಳೆಗಾರರ ಸಹಕಾರ ಸಂಘವು ಸಂಸದ ಯದುವೀರ್ ಒಡೆಯರ್ ಅವರನ್ನು ಮನವಿ ಮಾಡಿತು.
ನಗರದ ಕಾಫಿ ಕೃಪಾ ಕಟ್ಟಡದಲ್ಲಿರುವ ಕಾಫಿ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಹಿರಿಯ ಕಾಫಿ ಬೆಳೆಗಾರರು, ಸಹಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಿ ಸಂಸದರಿಗೆ ಕಾಫಿ ಬೆಳೆಗಾರರ ಸಂಘದ ಪ್ರಮುಖರು ಮನವಿ ಸಲ್ಲಿಸಿ ವಾಸ್ತವ ವಿಷಯದ ಕುರಿತು ಮನವರಿಕೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ನಾಪಂಡ ರವಿಕಾಳಪ್ಪ, ೧೯೫೬ರಲ್ಲಿ ಕಾಫಿ ಬೆಳೆಗಾರರ ಶ್ರೇಯೋಭಿವೃದ್ಧಿಗಾಗಿ ಆರಂಭಗೊAಡ ಸಹಕಾರ ಸಂಘ ಪ್ರಸ್ತುತ ೯,೨೧೪ ಸದಸ್ಯರನ್ನು ಹೊಂದಿದೆ. ಏಷ್ಯಾ ಖಂಡದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಹೊಂದಿದ ಹೆಗ್ಗಳಿಕೆಗೂ ನಮ್ಮ ಸಂಘ ಪಾತ್ರವಾಗಿತ್ತು. ಹತ್ತು ಹಲವು ಕಾರ್ಯಕ್ರಮದ ಮೂಲಕ ಬೆಳೆಗಾರರ ಸ್ವಾವಲಂಬನೆಗ ಸಂಘ ಅಪಾರ ಶ್ರಮಿಸಿದೆ. ಕಾಫಿ ಸಹಕಾರ ಸಂಘವೂ ‘ಎ ಪೋಲಿಂಗ್ ಏಜೆಂಟ್’ ಆಗಿ ಕಾಫಿ ಮಂಡಳಿ ಜೊತೆ ಕಾರ್ಯನಿರ್ವಹಿಸುತ್ತಿತ್ತು. ಕಾಫಿ ಖರೀದಿಸಿ ಮಾರಾಟ ಮಾಡಿ ಹೆಚ್ಚಿನ ಆದಾಯವನ್ನು ಬೆಳೆಗಾರರಿಗೆ ನೀಡುವ ಕೆಲಸವೂ ಆಗುತ್ತಿತ್ತು. ಮುಕ್ತ ಮಾರುಕಟ್ಟೆ ತೆರೆದುಕೊಂಡ ನಂತರ ಸಂಘದ ಬೆಳವಣಿಗೆ ಕುಸಿಯಲಾರಂಭಿಸಿತು. ಕಾಫಿಗೆ ದಿಢೀರ್ ಬೆಲೆ ಕುಸಿತದಿಂದ ನಷ್ಟಕ್ಕೊಳಗಾಗುವ ಸನ್ನಿವೇಶ ಉಂಟಾಗಿ ಸಾಲ ಪಡೆದು ಕಾರ್ಯಾಚರಿಸುವ ಸ್ಥಿತಿ ನಿರ್ಮಾಣವಾಯಿತು. ಈ ವೇಳೆ ಕಾಫಿ ಬೋರ್ಡ್ನಿಂದ ಬರಬೇಕಾದ ಹಣ ಬಾರದೆ ಸಂದಿಗ್ಧ ಸ್ಥಿತಿ ಸೃಷ್ಟಿಯಾದ ಸಂದರ್ಭ ರೂ. ೬೦ ಲಕ್ಷ ಮೌಲ್ಯದ ಕಾಫಿಯನ್ನು ಮಾರಾಟ ಮಾಡಿ ಆ ಹಣವನ್ನು ಬಳಸಿಕೊಳ್ಳಬೇಕಾಯಿತು. ಇದರೊಂದಿಗೆ ಮತ್ತಷ್ಟು ಹಣದ ಅವಶ್ಯಕತೆಯೂ ಎದುರಾಯಿತು ಎಂದು ವಿವರಿಸಿದರು.
ರೂ. ೧.೫೫ ಕೋಟಿಯಷ್ಟು ಹಣ ಸಂಘದಿAದ ಬರಬೇಕೆಂದು ಕಾಫಿ ಮಂಡಳಿ
(ಮೊದಲ ಪುಟದಿಂದ) ನ್ಯಾಯಾಂಗ ಮೊರೆ ಹೋಯಿತು. ವಾರ್ಷಿಕವಾಗಿ ಶೇ. ೧೮ ಬಡ್ಡಿಯಂತೆ ಒಟ್ಟು ಹಣ ಪಾವತಿಸುವಂತೆ ಕೋರ್ಟ್ ಆದೇಶಿಸಿತು. ಈ ವೇಳೆ ಅಸಲು ಹಣವನ್ನು ಪಾವತಿಸಿ, ಬಡ್ಡಿ ಮನ್ನಾಕ್ಕೆ ಮನವಿ ಮಾಡುವಂತೆ ಕೋರಿದಾಗ ಒಂದು ಹಂತದಲ್ಲಿ ಅಸಲು ಪಾವತಿಸಿದ್ದಲ್ಲಿ ಶಿಫಾರಸ್ಸು ಮಾಡಿ ಬಡ್ಡಿ ಮನ್ನಾಕ್ಕೆ ಪ್ರಯತ್ನಿಸುವಾಗಿ ಮಂಡಳಿ ಭರವಸೆ ನೀಡಿದ ಹಿನ್ನೆಲೆ ಅಸಲು ಮೊತ್ತವನ್ನು ಸಾಲ ಮಾಡಿ ಪಾವತಿಸಲಾಯಿತು. ಆದರೆ, ಕಾಫಿ ಮಂಡಳಿ ಬಡ್ಡಿ ಪಾವತಿಗೆ ಒತ್ತಡ ಹೇರಲಾರಂಭಿಸಿತು. ಈವರೆಗೂ ಬಡ್ಡಿ ಮನ್ನಾವಾಗಿಲ್ಲ. ಬಡ್ಡಿ ಬೆಳೆದು ರೂ. ೬.೫೦ ಕೋಟಿಗೆ ತಲುಪಿದೆ. ಇದನ್ನು ಕೇಂದ್ರ ಸರಕಾರ ಮಟ್ಟದಲ್ಲಿ ಕೊಂಡೊಯ್ದು ವಾಣಿಜ್ಯ ಸಚಿವರ ಗಮನಕ್ಕೆ ತಂದು ಬಡ್ಡಿ ಮನ್ನಾಕ್ಕೆ ಪ್ರಯತ್ನಿಸಬೇಕೆಂದು ಸಂಸದರಲ್ಲಿ ರವಿಕಾಳಪ್ಪ ಮನವಿ ಮಾಡಿದರು.
ಮಾಚಿಮಂಡ ಸುರೇಶ್ ಮಾತನಾಡಿ, ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರ ಗಮನ ಸೆಳೆಯುವ ಕೆಲಸವಾಗಬೇಕೆಂದು ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಆರ್ಥಿಕ ಕೊರತೆ ಎದುರಿಸುತ್ತಿರುವ ಸಂಘದ ಪುನಶ್ಚೇತನಕ್ಕೆ ಸಹಾಯ ಮಾಡಬೇಕು ಎಂದು ಕೋರಿದರು.
ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ಬೆಳೆಗಾರರ ಜೀವಾಳವಾಗಿದ್ದ ಸಂಘ ಮುಕ್ತ ಮಾರುಕಟ್ಟೆಯಿಂದ ಸಮಸ್ಯೆಗೆ ಸಿಲುಕಿತು. ಸಂಸದರಿAದ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ಡಿಸಿಸಿ ಬ್ಯಾಂಕ್ ಬೆಳವಣಿಗೆಗೆ ಕಾಫಿ ಸಹಕಾರ ಸಂಘ ಕಾರಣ. ರೂ. ೧.೯೭ ಕೋಟಿ ಸಾಲ ಪೈಕಿ ೯೮ ಲಕ್ಷ ಬಡ್ಡಿ ಮನ್ನಾ ಮಾಡಿದ್ದೇವೆ. ಸಣ್ಣ ಜಿಲ್ಲೆಯಲ್ಲಿರುವ ಬ್ಯಾಂಕ್ ಬಡ್ಡಿ ಮನ್ನಾ ಮಾಡಿರುವಾಗ ಕೇಂದ್ರ ಸರಕಾರದ ಮೂಲಕ ಈ ಹಣವನ್ನು ಮನ್ನಾ ಮಾಡಬಹುದಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿದ ಪರಿಣಾಮ ಸಂಘದ ಜಾಗ ಮಾರಾಟ ಮಾಡಲು ಅವಕಾಶವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗಮನಕ್ಕೆ ತಂದರು.
ಹಿರಿಯ ಕಾಫಿ ಬೆಳೆಗಾರ ನೆಲ್ಲಮಕ್ಕಡ ಶಂಭು ಸೋಮಯ್ಯ ಮಾತನಾಡಿ, ಬೆಳೆಗಾರರ ಮೇಲೆ ಮಮತೆಯಿಟ್ಟು ವಾಣಿಜ್ಯ ಸಚಿವರೊಂದಿಗೆ ಚರ್ಚಿಸಿ ಬಡ್ಡಿ ಮನ್ನಾಕ್ಕೆ ಸಂಸದರು ಮನಸ್ಸು ಮಾಡಬೇಕು. ಈ ಸಂಘದ ಕುಸಿತದಿಂದ ಇತರ ಸಹಕಾರ ಸಂಘವೂ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ಸಾಲಕ್ಕಿಂತ ಹೆಚ್ಚು ಬಡ್ಡಿಯಾಗಬಾರದೆಂಬ ಕಾನೂನಿದೆ. ಕ್ಯೂರಿಂಗ್ ವರ್ಕ್ ಇರುವುದರಿಂದ ಕೈಗಾರಿಕೆ ಕಾಯಿದೆಯಡಿ ಸಂಘ ಕೆಲಸ ಮಾಡುತ್ತಿದೆ. ಕೈಗಾರಿಕೆ ಅಭಿವೃದ್ಧಿಗೆ ಸರಕಾರ ಹತ್ತುಹಲವು ಯೋಜನೆ ರೂಪಿಸಿದೆ. ಈ ದೃಷ್ಟಿಕೋನದಲ್ಲಿ ಚಿಂತಿಸಿ ಅನುದಾನ ತರಲು ಸಂಸದರು ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಮಾತನಾಡಿ, ಬಡ್ಡಿ ಮನ್ನಾ ಬಗ್ಗೆ ಹಲವು ಪ್ರಯತ್ನ ನಡೆದಿದೆೆ. ಪಕ್ಕದ ರಾಜ್ಯದವರ ಹಿಡಿತಕ್ಕೆ ಕಾಫಿ ಬೆಳೆ ಸಿಲುಕುತ್ತಿದೆ. ಈಗಾಗಲೇ ಅಸಲು ಪಾವತಿಸಿದ್ದು, ಬಡ್ಡಿ ಮನ್ನಾ ಆಗಬೇಕಾಗಿದೆ. ಇದು ಕೊಡಗಿನ ಉಳಿವಿನ ಪ್ರಶ್ನೆ ಆಗಿದೆ. ಈ ವಿಷಯವಾಗಿ ನಿರಂತರವಾಗಿ ಕೇಂದ್ರದ ಗಮನ ಸೆಳೆಯಬೇಕು. ಸಂಘದೊAದಿಗೆ ಸಂಸದರು ಕೈಜೋಡಿಸಬೇಕು ಎಂದರು.
ಕಾಫಿ ಬೋರ್ಡ್ ಸದಸ್ಯ ತಳೂರು ಕಿಶೋರ್ ಕುಮಾರ್ ಮಾತನಾಡಿ, ಈ ವಿಚಾರ ನ್ಯಾಯಾಂಗ ಹಂತದಲ್ಲಿರುವ ಕಾರಣ ಕೆಲ ತಾಂತ್ರಿಕ ತೊಂದರೆಯಿದ್ದು, ಅದನ್ನು ಮೊದಲು ಪರಿಹರಿಸಬೇಕೆಂದು ತಿಳಿಸಿದರು.
ರವಿಕಾಳಪ್ಪ ಮಾತನಾಡಿ, ಸಂಘದ ಬೆಳವಣಿಗೆಗೆ ಅನೇಕ ಕಾರ್ಯಕ್ರಮ ರೂಪಿಸುವಂತೆ ಚಿಂತನೆಯೊAದಿಗೆ ನಮ್ಮದೇ ಕಾಫಿ ಬ್ರಾö್ಯಂಡ್ ಮಾಡುವ ಪರಿಕಲ್ಪನೆ ಇದೆ ಎಂದರು. ಪ್ರತಿಕೂಲ ಹವಾಮಾನದಿಂದ ಕಾಫಿ ಬೆಳೆ ನಷ್ಟವಾಗುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸಬೇಕೆಂದು ಕೋರಿದರು.
ಸಂಸದರ ಭರವಸೆ
ಸಂಸದ ಯದುವೀರ್ ಒಡೆಯರ್ ಮಾತನಾಡಿ, ಕಾಫಿ ಎಂದರೆ ಕೊಡಗು ಎಂಬ ಮಾತಿದೆ. ಕಾಫಿ ಬೆಳೆ ಕರ್ನಾಟಕದ ಆಸ್ತಿಯಾಗಿದ್ದು, ಇದನ್ನು ‘ಬ್ರಾö್ಯಂಡಿAಗ್’ ಮಾಡಲು ವಿಫಲರಾದ ಹಿನ್ನೆಲೆ ನಿರೀಕ್ಷಿತ ಲಾಭವಾಗುತ್ತಿಲ್ಲ. ಕಾಫಿ ಉತ್ಪನ್ನ ಸ್ಥಳೀಯವಾಗಿ ಉತ್ಪಾದನೆ ಆಗಬೇಕು ಎಂದ ಅವರು, ಬಡ್ಡಿ ಮನ್ನಾದ ಬಗ್ಗೆ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರ ಗಮನ ಸೆಳೆಯುತ್ತೇನೆ. ಕಾಫಿ ಬೋರ್ಡ್ನೊಂದಿಗೆ ಚರ್ಚಿಸುತ್ತೇನೆ. ನನ್ನ ಹಂತದಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಸಂಘದ ಉಪಾಧ್ಯಕ್ಷ ಎಸ್.ಎಸ್. ಸುರೇಶ್, ಸಹಕಾರ ಇಲಾಖೆ ಅಧಿಕಾರಿ ರವಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗುಮ್ಮಟಿರ ಕಿಲನ್ ಗಣಪತಿ, ಸತೀಶ್ ಜೋಯಪ್ಪ, ಪ್ರಮುಖರಾದ ಮಾಚಿಮಂಡ ಸುರೇಶ್, ಮನೋಜ್ ಮಂದಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನೆಲ್ಲೀರ ಚಲನ್‌ಕುಮಾರ್ ಕಾಫಿ ಬೆಳೆಗಾರರ ಸಹಕಾರ ಸಂಘದ ನಿರ್ದೇಶಕರುಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.