ಬೆಂಗಳೂರು, ಆ. ೩: ಹಾಸನದ ಯಸಳೂರು ಬಳಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಆನೆ ಅರ್ಜುನನ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ಸ್ಥಾಪಿಸಲಾಗಿದ್ದು, ಸೋಮವಾರ ಗಜಪಯಣದ ವೇಳೆ ಮಾವುತ ಹಾಗೂ ಸಿಬ್ಬಂದಿಗೆ ಪ್ರಥಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ. ಕೋಟೆ ಶಾಸಕ ಅನಿಲ್ ಕುಮಾರ್ ಸಿ ಅವರು ಅರ್ಜುನನ ಹೆಸರಲ್ಲಿ ವಾರ್ಷಿಕ ಪ್ರಶಸ್ತಿ ಸ್ಥಾಪಿಸುವ ಸಲಹೆ ನೀಡಿದ್ದರು. ಈ ಸಲಹೆ ಪುರಸ್ಕರಿಸಿ, ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟುವ ಹಾಗೂ ವನ್ಯಪ್ರಾಣಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿರುವ ಹಾಗೂ ಸೆರೆಹಿಡಿಯುವ ಆನೆಗಳನ್ನು ಪಳಗಿಸಿ ಆರೈಕೆ ಮಾಡುವಲ್ಲಿ ಯಶಸ್ವಿಯಾಗಿರುವ ಮಾವುತ ಹಾಗೂ ಸಿಬ್ಬಂದಿಗಳನ್ನು ಗುರುತಿಸಿ ಪ್ರತಿವರ್ಷ ನಡೆಯುವ ಗಜಪಯಣದ ಸಂದರ್ಭದಲ್ಲಿ “ಅರ್ಜುನ ಆನೆ” ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದರು.

೧೯೬೮ರಲ್ಲಿ ಕಾಕನಕೋಟೆಯಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ ೨೨ ಬಾರಿ ಜಂಬೂಸವಾರಿಯಲ್ಲಿ ಭಾಗಿಯಾಗಿ, ೮ ಬಾರಿ ೭೫೦ ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು, ದೇಶದ ಜನರ ಮನ ಗೆದ್ದಿದ್ದ. ಅರಣ್ಯ ಸಿಬ್ಬಂದಿಯ ಪ್ರಾಣ ಉಳಿಸಲು ಪ್ರಾಣತ್ಯಾಗ ಮಾಡಿದ ಅರ್ಜುನನ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲು ಈ ಪ್ರಶಸ್ತಿ ಸ್ಥಾಪಿಸಲಾಗಿದೆ ಎಂದರು.

ಸೋಮವಾರ ವೀರನಹೊಸಹಳ್ಳಿಯಲ್ಲಿ ನಡೆಯಲಿರುವ ಗಜ ಪಯಣದ ಸಂದರ್ಭದಲ್ಲಿ ಹಾಸನ, ಸಕಲೇಶಪುರ, ಕೊಡಗು ಮೊದಲಾದ ಕಡೆಗಳಲ್ಲಿ ಆನೆ ಮತ್ತು ವನ್ಯಜೀವಿ ಸೆರೆ ಕಾರ್ಯಾಚರಣೆಗಳಲ್ಲಿ ಯಶಸ್ವಿಯಾಗಿ ಭಾಗಿಯಾಗಿರುವ ಭೀಮ ಆನೆಯ ಮಾವುತ ಗುಂಡ ಹಾಗೂ ಕವಾಡಿ ನಂಜುAಡಸ್ವಾಮಿ ಅವರಿಗೆ ೨೦೨೫ರ ಸಾಲಿನ “ಅರ್ಜುನ ಆನೆ” ಪ್ರಶಸ್ತಿ ನೀಡಲು ೨೦೨೫ರ ದಸರಾ ಆನೆಗಳ ಆಯ್ಕೆ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಅರಮನೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಗಜ ಪಯಣಕ್ಕೆ ಬರುವ ಆನೆಗಳಿಗೆ ರಾಜಾತಿಥ್ಯ ನೀಡಲು ಭರ್ಜರಿ ಸಿದ್ಧತೆ ಆರಂಭಿಸಲಾಗಿದೆ. ತಾ.೪ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಆನೆ ಶಿಬಿರದಿಂದ ಗಜ ಪಯಣ ಆರಂಭವಾಗಲಿದ್ದು, ಮೈಸೂರು ಅರಮನೆಗೆ ದಸರಾ ಆನೆಗಳು ಆಗಮಿಸಲಿವೆ. ಆನೆಗಳ ವಾಸದ ಸ್ಥಳ, ಮಾವುತರು, ಕಾವಾಡಿಗಳಿಗೆ ಮನೆ ನಿರ್ಮಾಣ ಚಟುವಟಿಕೆ ಭರದಿಂದ ಸಾಗಿದೆ. ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ೯ ಆನೆಗಳು ಮೈಸೂರಿಗೆ ಆಗಮಿಸಲಿವೆ.

ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಭೀಮ, ದುಬಾರೆ ಶಿಬಿರದ ಕಂಜನ್, ಧನಂಜಯ, ಪ್ರಶಾಂತ, ಬಳ್ಳೆ ಶಿಬಿರದ ಮಹೇಂದ್ರ, ದೊಡ್ಡಹರವೆ ಶಿಬಿರದ ಏಕಲವ್ಯ, ದುಬಾರೆ ಶಿಬಿರದ ಕಾವೇರಿ, ಪ್ರಶಾಂತ ಆನೆ ಮೊದಲ ಹಂತದಲ್ಲಿ ಆಗಮಿಸಲಿವೆ. -ಕೋವರ್ ಕೊಲ್ಲಿ ಇಂದ್ರೇಶ್