ಕೊಡ್ಲಿಪೇಟೆ, ಆ. ೩: ಸಮೀಪದ ಬ್ಯಾಡಗೊಟ್ಟ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಜನವಸತಿ ಹಾಗೂ ಕೃಷಿ ಪ್ರದೇಶದಲ್ಲಿ ಧಾಳಿ ನಡೆಸುತ್ತಿದೆ. ನಿನ್ನೆ ರಾತ್ರಿ ಬ್ಯಾಡಗೊಟ್ಟ ಗ್ರಾಮದ ಹಾರೂನ್ ಎಂಬವರು ತನ್ನ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಮೇಲೆ ಧಾಳಿ ನಡೆಸಿದೆ.
ಒಂಟಿ ಕಾಡಾನೆಯೊಂದು ಕಳೆದ ಒಂದು ವಾರದಿಂದ ಸಮೀಪದ ಕಣಾರಳ್ಳಿ ಗ್ರಾಮದ ಪಾಳು ಬಿದ್ದಿರುವ ತೋಟವೊಂದರಲ್ಲಿ ಬೀಡು ಬಿಟ್ಟಿದ್ದು ರಾತ್ರಿ ಸಮಯದಲ್ಲಿ ಗ್ರಾಮದ ಸುತ್ತಮುತ್ತಲಿನ ಬ್ಯಾಡಗೊಟ್ಟ, ಬೆಂಬಳೂರು, ಊರುಗುತ್ತಿ, ಮಲ್ಲಳ್ಳಿ, ಶಿವರಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಮನೆಯ ಸುತ್ತಮುತ್ತ ಬೆಳೆದಿರುವ ಬೆಳೆಗಳನ್ನು ನಾಶ ಮಾಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾಡಾನೆಯ ಸಂಚಾರದಿAದ ಈ ಭಾಗದ ಜನರಲ್ಲಿ ಭಯದ ವಾತಾವರಣ ಉಂಟಾಗಿದೆ.
ಶನಿವಾರ ತಡರಾತ್ರಿ ಮನೆ ಮುಂಭಾಗ ರಸ್ತೆಬದಿ ನಿಲ್ಲಿಸಿದ್ದ ಕಾರಿಗೆ ಹಾನಿಗೊಳಿಸಿದೆ, ಮಾನವರ ಮೇಲೆ ಧಾಳಿಯಾಗುವುದಕ್ಕಿಂತ ಮೊದಲು ಈ ಆನೆಯನ್ನು ಕಾಡಿಗೆ ಸ್ಥಳಾಂತರಿಸಬೇಕು. ಸ್ಥಳೀಯವಾಗಿ ಉಪ ವಲಯಾರಣ್ಯಾಧಿಕಾರಿಗೆ ವಾಹನವನ್ನು ನೀಡಬೇಕು.
ಅರಣ್ಯ ಇಲಾಖೆ ಬೆಳೆ ಹಾನಿಯಾದ ಕೃಷಿಕರು ಹಾಗೂ ಕಾರಿನ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ಸದಸ್ಯ ಹನೀಫ್ ಆಗ್ರಹಿಸಿದ್ದಾರೆ.
ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ವಾಟರ್ ಮ್ಯಾನ್ ಯುವರಾಜ್ ಮಾತನಾಡಿ, ಮುಂಜಾನೆ ನೀರು ಬಿಡಲು ತೆರಳುವ ಸಂದರ್ಭ ಭಯಾತಂಕದಿAದ ತೆರಳಬೇಕಿದೆ.
ಹಲವು ದಿನಗಳಿಂದ ಈ ಆನೆ ಸಂಚರಿಸುತ್ತಿದ್ದು, ಮನೆ ಹಿಂಭಾಗದಲ್ಲಿ ಇದ್ದ ಬಾಳೆ ಹಾಗೂ ತೋಟದಲ್ಲಿರುವ ಗಿಡಗಳಿಗೆ ಹಾನಿ ಮಾಡಿದೆ. ಇದನ್ನು ಆದಷ್ಟು ಬೇಗ ಸ್ಥಳಾಂತರಿಸಬೇಕೆAದು ಒತ್ತಾಯಿಸಿದ್ದಾರೆ.
ಆನೆಯು ರಾತ್ರಿಯಿಡಿ ಸುತ್ತಾಡಿ ಹಗಲು ಕಣಾರಳ್ಳಿಯಲ್ಲಿರುವ ದಿ. ಜಬ್ಬಾರ್ ಸಾಬ್ರು ಎಂಬವರ ಮಕ್ಕಳ ಹೆಸರಿನಲ್ಲಿರುವ ನೂರು ಎಕರೆ ಪಾಳು ಬಿದ್ದ ತೋಟದಲ್ಲಿ ಬೀಡು ಬಿಡುತ್ತಿದೆ.
ತೋಟದ ಮಾಲೀಕರಿಗೆ ನೋಟೀಸ್ ನೀಡಿ ಕಾಡನ್ನು ತೆರವುಗೊಳಿಸುವಂತೆ ಸೂಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಆನೆಯ ಚಲನ ವಲನದ ಮಾಹಿತಿ ಪಡೆದು ಸ್ಥಳೀಯ ಉಪ ಅರಣ್ಯಾಧಿಕಾರಿ ವಿಶ್ವನಾಥ್ ಮತ್ತು ಸಿಬ್ಬಂದಿ ಆನೆಯನ್ನು ಕಾಡಿಗಟ್ಟಲು ಪ್ರಯತ್ನಿಸುತ್ತಿದ್ದಾರೆ.