ನಾಪೋಕ್ಲು, ಆ. ೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಹಾಗೂ ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ, ಮನೋರಂಜನಾ ಕೂಟ, ಬಿದ್ದಾಟಂಡ ಕುಟುಂಬಸ್ಥರ ಸಹಯೋಗದೊಂದಿಗೆ ತಾ.೭ ರಂದು ಇಲ್ಲಿನ ಬಿದ್ದಾಟಂಡ ಕುಟುಂಬಸ್ಥರ (ಬುಟ್ಟಿಆಕ್) ಗದ್ದೆಯಲ್ಲಿ ಬೇಲ್ ನಮ್ಮೆಯನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ತಿಳಿಸಿದ್ದಾರೆ.
ಇಲ್ಲಿನ ಬಿದ್ದಾಟಂಡ ಕುಟುಂಬಸ್ಥರ ಗದ್ದೆಯಲ್ಲಿ ಜರುಗಲಿರುವ ಬೇಲ್ ನಮ್ಮೆ ಪೂರ್ವಸಿದ್ಧತೆಯ ಬಗ್ಗೆ ಪ್ರಮುಖರೊಂದಿಗೆ ಪರಿಶೀಲಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಕೃಷಿ ಚಟುವಟಿಕೆಗಳು ಪೂರ್ಣಗೊಂಡ ಬಳಿಕ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಗುತ್ತದೆ. ಕೃಷಿ ಚಟುವಟಿಕೆಗಳಿಗೆ ಇನ್ನಷ್ಟು ಸಡಗರ ಸಂಭ್ರಮ ತುಂಬಿಕೊಳ್ಳಲು ಕಕ್ಕಡ ೧೮ಕ್ಕೆ ಪೂರಕವಾಗಿ ಬೇಲ್ ನಮ್ಮೆಯನ್ನು ಆಯೋಜಿಸಲಾಗಿದೆ. ಕೂಡು ನಾಟಿ, ನಾಟಿ ಓಟದಂತಹ ಚಟುವಟಿಕೆಗಳ ಜೊತೆಯಲ್ಲಿ ಕೃಷಿಗೆ ಪೂರಕವಾದ ಆಟೋಟಗಳನ್ನು ಹಮ್ಮಿಕೊಳ್ಳಲಾಗುವುದು. ಕೊಡಗಿನಲ್ಲಿ ಬದುಕಿನ ಆಧಾರ ಕೃಷಿ ಆಗಿದ್ದು ಅದನ್ನು ಉತ್ತೇಜಿಸುವುದು. ಕೃಷಿಯಾಧಾರಿತ ಬದುಕಿನಲ್ಲಿ ಯುವಜನರನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ಇದರ ಮುಖ್ಯ ಉದ್ದೇಶ ಎಂದರು.
ಕಾರ್ಯಕ್ರಮದAದು ಸಾರ್ವಜನಿಕರನ್ನು ಒಳಗೊಂಡAತೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರಾಥಮಿಕ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅವರ ನೇತೃತ್ವದಲ್ಲಿ ಈ ಹಿಂದೆ ನಾಪೋಕ್ಲುವಿನಲ್ಲಿ ಬೇಲ್ ನಮ್ಮೆಯನ್ನು ಆಯೋಜಿಸಲಾಗಿತ್ತು. ಕಳೆದ ವರ್ಷ ಸಾಂಕೇತಿಕವಾಗಿ ಮುತ್ತಾರುಮುಡಿಯಲ್ಲಿ ಬೇಲ್ ನಮ್ಮೆಯನ್ನು ಅಕಾಡೆಮಿ ವತಿಯಿಂದ ಆಯೋಜಿಸಲಾಗಿತ್ತು. ಈ ವರ್ಷ ಮತ್ತಷ್ಟು ವೈಭವಪೂರ್ಣವಾಗಿ ಬೇಲ್ ನಮ್ಮೆಯನ್ನು ಆಯೋಜಿಸಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂದರು.
ಈ ಸಂದರ್ಭ ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ, ಮನೋರಂಜನಾ ಕೂಟದ ಅಧ್ಯಕ್ಷ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ನಿರ್ದೇಶಕ ಸದಸ್ಯರು. ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಕಾರ್ಯದರ್ಶಿ ಚೀಯಕ್‌ಪೂವಂಡ ಅಪ್ಪಚ್ಚು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರು, ಬಿದ್ದಾಟಂಡ ಕುಟುಂಬದ ಹಿರಿಯರಾದ ಡಿಕ್ಕಿ ಸೋಮಯ್ಯ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.