ಬೆಂಗಳೂರು, ಆ. ೩: ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ತಮ್ಮ ಕೆಲಸದ ನಿಮಿತ್ತ ಭೇಟಿ ನೀಡಿದಾಗ ಅವರೊಂದಿಗೆ ಗೌರವದಿಂದ ವರ್ತಿಸಿ, ಆಸನದ ವ್ಯವಸ್ಥೆಯನ್ನು ಮಾಡುವಂತೆ ಹಾಗೂ ಅವರುಗಳ ಮನವಿ, ಕೋರಿಕೆಗಳನ್ನು ಆದ್ಯತೆಯ ಮೇಲೆ ಪರಿಗಣಿಸಿ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಹಿರಿಯ ನಾಗರಿಕರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ದಿನೇನಿ ಅವರು ಮರು ಸುತ್ತೋಲೆ ಹೊರಡಿಸಿದ್ದಾರೆ.
ತಮ್ಮ ಆಗಸ್ಟ್ ೧ ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಈ ವಿಷಯ ತಿಳಿಸಿರುವ ಕಾರ್ಯದರ್ಶಿ ಅವರು ದಿನಾಂಕ ೨೧-೦೬-೨೦೨೧ ಈ ಕುರಿತು ಮೂಲ ಆದೇಶವನ್ನು ಹೊರಡಿಸಲಾಗಿರುತ್ತದೆ. ಆದರೆ, ಸದರಿ ಸುತ್ತೋಲೆಯನ್ನು ಪಾಲಿಸದೇ ಇರುವ ಬಗ್ಗೆ ಹಾಗೂ ಸರ್ಕಾರದ ನಿರ್ದೇಶನಗಳನ್ನು ಉಲಂಘಿಸುತ್ತಿರುವ ಕುರಿತು ಅನೇಕ ದೂರುಗಳು ಸ್ವೀಕೃತವಾಗಿದ್ದರಿಂದ ತಾ. ೨೧-೦೬-೨೦೨೧ರ ಸುತ್ತೋಲೆಯನ್ನು ಅಕ್ಷರಶ: ಪಾಲಿಸುವಂತೆ ರಾಜ್ಯದ ಎಲ್ಲಾ ಇಲಾಖೆಗಳ ಮುಖ್ಯಸ್ಥರು ತಮ್ಮ ಅಧೀನ ಕಚೇರಿಗಳಿಗೆ ಸ್ಪಷ್ಟ ಸೂಚನೆ ನೀಡುವಂತೆ ಹಾಗೂ ಈ ಬಗ್ಗೆ ದೂರುಗಳು ಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಪರಿಷ್ಕೃತ ಸುತ್ತೋಲೆಯನ್ನು ತಾ.೭-೦೬-೨೦೨೨ನ್ನು ಹೊರಡಿಸಲಾಗಿರುತ್ತದೆ. ಆದಾಗ್ಯೂ ಆ ಸುತ್ತೋಲೆಗಳಲ್ಲಿನ ಸೂಚನೆಗಳನ್ನು ಸರ್ಕಾರಿ ಕಚೇರಿಗಳಲ್ಲಿ ಪಾಲಿಸುತ್ತಿಲ್ಲವೆಂದು ದೂರುಗಳು ಸ್ವೀಕೃತವಾಗುತ್ತಿದೆ. ಆದ್ದರಿಂದ ಸರ್ಕಾರದ ಕಚೇರಿಗಳಿಗೆ ಭೇಟಿ ನೀಡುವ ಹಿರಿಯ ನಾಗರಿಕರನ್ನು ಒಳಗೊಂಡAತೆ, ಎಲ್ಲಾ ಸಾರ್ವಜನಿಕರನ್ನು ಗೌರವದಿಂದ ಕಂಡು, ಅವರುಗಳಿಗೆ ಆಸನದ ವ್ಯವಸ್ಥೆಯನ್ನು ಮಾಡುವಂತೆ, ಕೆಲಸದ ನಿಮಿತ್ತ ಕಚೇರಿಗಳಿಗೆ ಭೇಟಿ ನೀಡಿದಾಗ ಮನವಿ ಹಾಗೂ ಕೋರಿಕೆ ಗಳನ್ನು ಆದ್ಯತೆ ಮೇಲೆ ಪರಿಗಣಿಸಿ ಇಲಾಖೆಗಳು ಕೈಗೊಂಡಿರುವ ಕ್ರಮದ ಮಾಹಿತಿಯನ್ನು ಅವರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡುವಂತೆ ಹಾಗೂ ಇನ್ನು ಮುಂದೆ ಈ ಕುರಿತು ನಿರ್ದಿಷ್ಟ ದೂರುಗಳು ಸ್ವೀಕೃತವಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಈ ಮೂಲಕ ಮತ್ತೊಮ್ಮೆ ತಿಳಿಸುತ್ತಾ, ಇಲಾಖಾ ಮುಖ್ಯಸ್ಥರು ತಮ್ಮ ಅಧೀನ ಇಲಾಖೆಗಳಿಗೆ ಮತ್ತು ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸೂಚಿಸಿದ್ದಾರೆ. -ಕೋವರ್ ಕೊಲ್ಲಿ ಇಂದ್ರೇಶ್