(ಕೆ.ಎಂ. ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಆ. ೩: ಸೋಮವಾರಪೇಟೆ ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಗುಡಿಸಲು ಕಟ್ಟಿಕೊಂಡು ತನ್ನ ಮಗನೊಂದಿಗೆ ವಾಸ ಮಾಡುತ್ತಿದ್ದ ವಯೋವೃದ್ಧೆ ಬೈರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತಾಲೂಕು ಆಡಳಿತ ಎಚ್ಚೆತ್ತುಕೊಂಡು ಬೈರಿ ಅವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಲು ನಿರ್ಧಾರ ಕೈಗೊಂಡಿದೆ. ಶಾಸಕ ಡಾ.ಮಂತರ್ ಗೌಡ ಅವರು ಕೂಡ ಭೇಟಿ ನೀಡಿ ಕುಟಂಬದ ಸಮಸ್ಯೆಯನ್ನು ಆಲಿಸಿ, ವೈಯಕ್ತಿಕ ಪರಿಹಾರ ನೀಡಿ, ಮನೆ ನಿರ್ಮಿಸಿಕೊಡುವ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಸೂಚನೆ ಕೊಟ್ಟಿದ್ದಾರೆ.

ಇದೀಗ ಹರದೂರು ಗ್ರಾಮ ಪಂಚಾಯಿತಿಯ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಬಡಕುಟುಂಬದ ಬೈರಿ ಅವರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್ ಅವರು ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ ಅವರ ನೆರವೂ ಸೇರಿಸಿ ಸ್ವಂತ ಖರ್ಚಿನಲ್ಲಿ ಮನೆ ನಿರ್ಮಿಸಿ ಕೊಡಲು ನಿರ್ಧರಿಸಿದ್ದಾರೆ. ಮುಂದಿನ ವಾರದಿಂದಲೇ ಮನೆಯ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ.