*ಗೋಣಿಕೊಪ್ಪ, ಆ. ೩: ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬರುತ್ತಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ವಿಚಾರದಲ್ಲಿ ಜಾಗೃತರಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್ ಸೂಚಿಸಿದರು.
ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆದ ಪೊನ್ನಂಪೇಟೆ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯಲ್ಲಿ ಅವರು ಮಾತನಾಡಿದರು.
ಪಿಡಿಓಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಅಂಗಡಿಗಳಿಗೆ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿ, ಪಡಿತರ ಅಕ್ಕಿ ಸೋರಿಕೆಯಾಗದಂತೆ ಗಮನಹರಿಸಿ, ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿಯನ್ನು ತೂಗಲು ಡಿಜಿಟಲ್ ಯಂತ್ರಗಳ ಬಳಕೆ ಕಡ್ಡಾಯ ಈ ನಿಯಮವನ್ನು ಅನುಸರಿಸದೇ ಇದ್ದಲ್ಲಿ ಅಂತವರ ಪರವಾಗಿಯನ್ನು ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದರು. ಬಹುತೇಕ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಟ್ರಾರ್ನ್ಸ್ಫಾರ್ಮರ್ ಅಳವಡಿಕೆಗೆ ವಿದ್ಯುತ್ ಇಲಾಖೆ ಶೀಘ್ರಗತಿಯಲ್ಲಿ ಮುಂದಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭ ಪೊನ್ನಂಪೇಟೆ ಅರಣ್ಯ ಕಾಲೇಜು ಮತ್ತು ಸಿಐಟಿ ಕಾಲೇಜಿಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಭೇಟಿ ನೀಡಿ ಯುವನಿಧಿ ಯೋಜನೆಗೆ ನೊಂದಾಯಿಸಿಕೊಳ್ಳಲು ಮಾರ್ಗದರ್ಶನ ನೀಡಿದರು.
ಎಸ್.ಎಸ್.ಎಲ್.ಸಿ. ಮುಗಿಸಿದವರು ಮತ್ತು ಪದವಿ, ಪದವಿ ಪೂರ್ವ ತರಗತಿಗಳ ವಿದ್ಯಾರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಲಾಯಿತು. ಯುವ ನಿಧಿ ಯೋಜನೆಯ ಫಲಕ ಮತ್ತು ಕರಪತ್ರಗಳನ್ನು ತಾ.ಪಂ. ಕಚೇರಿ ಮುಂಭಾಗದಲ್ಲಿ ಅನಾವರಣಗೊಳಿಸಿ ಯುವನಿಧಿ ಯೋಜನೆಯ ಬಗ್ಗೆ ಅರಿವು ಮೂಡಿಸಲಾಯಿತು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯರುಗಳಾದ ಅನೀಷ್ ಅಹಮದ್, ಖಾಲಿದ್, ಲಾಲು ಸ್ಟಾಲಿನ್, ಪರ್ಮಾಲೆ ಗಣೇಶ್, ಅಪ್ಪಣ್ಣ, ಅಚ್ಚುತ್, ಭವಿನ್ ಕುಶಾಲಪ್ಪ, ರಾಮಕೃಷ್ಣ, ಸಿದ್ದು ನಾಚಪ್ಪ, ಫಿಲೋಮಿನಾ ಲಿಖಿತ ಮತ್ತು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಇದ್ದರು.