ಗೋಣಿಕೊಪ್ಪಲು, ಆ. ೩: ದ. ಕೊಡಗಿನ ಮಾಯಮುಡಿ, ತಿತಿಮತಿ, ದೇವರಪುರ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರ ಹಾಗೂ ರೈತರ ಸಭೆ ಮಾಯಮುಡಿ ಗ್ರಾಮದ ಕಂಗಳತ್ ನಾಡ್ ಮಹಿಳಾ ಸಮಾಜದಲ್ಲಿ ಜರುಗಿತು.

ಈ ಹಿಂದೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ವನ್ಯಮೃಗಗಳಿಂದ ಆಗುತ್ತಿರುವ ತೊಂದರೆ ಹಾಗೂ ಅವುಗಳ ನಿಯಂತ್ರಣ ಮತ್ತು ಕೈಗೊಂಡ ಕ್ರಮಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.

ಗ್ರಾಮದಲ್ಲಿ ಎರಡು ಗುಂಪಿನಲ್ಲಿದ್ದ ಸುಮಾರು ೨೦ ಕಾಡಾನೆಗಳಲ್ಲಿ ೬ ವಾಪಾಸು ಬಂದಿದ್ದು, ೨ ಆನೆಗಳು ಮಾಯಮುಡಿ ಸುತ್ತಮುತ್ತಲಿರುವ ಕಾಫಿ ತೋಟದಲ್ಲಿ ಕಾಣಿಸಿಕೊಂಡಿವೆ. ಈ ಆನೆಗಳು ಅರಣ್ಯಕ್ಕೆ ಹೋಗುತ್ತಿಲ್ಲ. ಅಲ್ಲದೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅರಣ್ಯಕ್ಕೆ ಅಟ್ಟಿದ ಆನೆಗಳು ಸರಿಯಾದ ಬಂದೋಬಸ್ತ್ ಇಲ್ಲದೆ ಅರಣ್ಯದಿಂದ ಹೊರಗಡೆ ವಾಪಸು ಬಂದಿವೆ.

ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳ ನಿರ್ಲಕ್ಷö್ಯ ಇದಕ್ಕೆ ಕಾರಣ ಎಂದು ಸಭೆಯಲ್ಲಿದ್ದವರು ಗಂಭೀರ ಆರೋಪ ಮಾಡಿದರು. ವನ್ಯಜೀವಿ ವಿಭಾಗದ ಸಿಬ್ಬಂದಿಗಳು ವ್ಯವಸ್ಥಿತವಾಗಿ ಕಾವಲು ಕಾಯುತ್ತಿಲ್ಲ. ಆನೆ ನಿಯಂತ್ರಣ ಮಾಡುವ ಸಿಬ್ಬಂದಿಗಳು ರಾತ್ರಿ ಪಾಳಿಯಲ್ಲಿ ಸೂಕ್ತವಾಗಿ ಕಾರ್ಯ ನಿರ್ವಹಿಸದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ದೂರಿದರು. ಪ್ರಮುಖವಾಗಿ ಸಿಬ್ಬಂದಿಗಳಿಗೆ ಬೇಕಾದ ಸಲಕರಣೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೀಡುತ್ತಿಲ್ಲ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಲು ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ. ಅರಣ್ಯದಿಂದ ಆನೆಗಳು ಬರುವ ನಿರ್ದಿಷ್ಟ ಸ್ಥಳಗಳಲ್ಲಿ ಪಹರೆ ಹೆಚ್ಚಿಸುವುದರಿಂದ ಶೇ. ೯೦ ಭಾಗದಷ್ಟು ಆನೆಗಳು ಅರಣ್ಯದಿಂದ ಹೊರಗೆ ಬರುವುದನ್ನು ತಡೆಯಬಹುದು. ಅರಣ್ಯ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಇಚ್ಛಾಶಕ್ತಿ ಅಗತ್ಯವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತಗೊಂಡವು. ಮುಂದೆ ಅರಣ್ಯ ಇಲಾಖೆಯವರು ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡಬೇಕಾಗಿದೆ. ಹೆಬ್ಬಾಲೆ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರೂ ರಾತ್ರಿ ವೇಳೆ ಗೇಟ್ ಹಾಕುತ್ತಿಲ್ಲ. ತಿತಿಮತಿ ಮರಪಾಲದ ಬಳಿ ಸೋಲಾರ್ ಬೇಲಿ ಹಾಕಿದರೆ ಕಾಡಾನೆಗಳು ಅರಣ್ಯದಿಂದ ಹೊರಗೆ ಬರುವುದನ್ನು ತಡೆಗಟ್ಟಬಹುದಾಗಿದೆ ಎಂಬ ಸಲಹೆ ಬಂದವು.

ಬೇಸಿಗೆ ಸಮಯದಲ್ಲಿ ಆನೆಕಂದಕವನ್ನು ದುರಸ್ತಿ ಮಾಡಿದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆನೆ ಬರುವುದನ್ನು ತಡೆಯಬಹುದಿತ್ತು, ಈಗಾಗಲೇ ಅಳವಡಿಸಿರುವ ರೈಲ್ವೇ ಬ್ಯಾರಿಕೇಡ್‌ನಿಂದ ಪ್ರಯೋಜನವಾಗುತ್ತಿಲ್ಲ. ನಿರ್ವಹಣೆ ಕೊರತೆಯಿಂದ ಸಮಸ್ಯೆ ಹೆಚ್ಚಾಗಿದೆ ಎಂದು ಸಭೆಯಲ್ಲಿದ್ದ ಗ್ರಾಮದ ಪ್ರಮುಖರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ ಮುಂದಿನ ೧೦ ದಿನಗಳ ಒಳಗೆ ಪ್ರಸ್ತುತ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯ ಮಾಡಬೇಕು. ಮುಂದಿನ ದಿನಗಳಲ್ಲಿ ಇಲ್ಲಿನ ಭತ್ತದ ಗದ್ದೆ ಹಾಗೂ ಕಾಫಿ ಫಸಲು ಪೂರ್ಣ ಹಾಳಾಗುವ ಆತಂಕ ವ್ಯಕ್ತವಾಗುತ್ತಿದೆ. ತಕ್ಷಣ ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಕೊಳ್ಳಲು ಗ್ರಾಮಸ್ಥರು ನಿರ್ಣಯ ಕೈಗೊಂಡರು.

ಸಭೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಚೆಪ್ಪುಡಿರ ಪ್ರದೀಪ್, ಮನೆಯಪಂಡ ಮಹೇಶ್, ಕಾಣತಂಡ ಧಮಯಂತಿ, ಮಹಿಳಾ ಸಮಾಜದ ಅಧ್ಯಕ್ಷರಾದ ಚೆಪ್ಪುಡಿರ ರಾಧಾ ಅಚ್ಚಯ್ಯ, ಕೊಣಿಯಂಡ ರೋಹಿಣಿ, ಸಣ್ಣುವಂಡ ಸಂಪತ್, ನೆರೋತ್ ಕಾಫಿ ತೋಟದ ಡಾಲಿ, ನೋಕ್ಯದ ವಿಲ್ಸನ್ ಮುಂತಾದವರು ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.

ಗ್ರಾಮದ ಹಿರಿಯರಾದ ಚೆಕ್ಕೆರ ಡಾ. ತಮ್ಮಯ್ಯ, ಆನೆಗಳ ಚಲನವಲನದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಯ ಬಗ್ಗೆ ಮಾಹಿತಿ ಒದಗಿಸಿದರು. ಸಂಚಾಲಕರಾದ ಸಣ್ಣುವಂಡ ರಮೇಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಿತಿಮತಿ ಭಾಗದ ಸಂಚಾಲಕರಾದ ಚೆಪ್ಪುಡಿರ ಕಾರ್ಯಪ್ಪ ಮಾತನಾಡಿ,

ಆನೆಗಳಿಂದ ಆಗುತ್ತಿರುವ ಹಾನಿ, ಕಾರ್ಮಿಕರ ಸಾವು ನಂತರ ಆಗುವ ನಷ್ಟಕಷ್ಟಗಳ ಬಗ್ಗೆ ಗಮನ ಸೆಳೆದರು. ಸುತ್ತಮುತ್ತಲಿನ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. - ಹೆಚ್.ಕೆ. ಜಗದೀಶ್