ಮಡಿಕೇರಿ, ಆ. ೪ : ಜಾನಪದ ಕಥೆಗಳು ಪ್ರಕೃತಿಯಲ್ಲಿನ ನೈಜ ಪುಷ್ಪಗಳಂತೆ ಸದಾ ಪರಿಮಳ ಬೀರುತ್ತಾ ಕಥಾ ಲೋಕದಲ್ಲಿ ಕಂಗೊಳಿಸುತ್ತದೆ. ಹೀಗಾಗಿ ಜಾನಪದ ಕಥೆಗಳು ಜನರ ಕಥೆಗಳಾಗಿ ಅತ್ಯಂತ ಮಹತ್ವ ಪಡೆಯುತ್ತದೆ. ಜಾನಪದೀಯ ಮೂಲದ ಕಥೆಗಳನ್ನು ಎಂದಿಗೂ ಮರೆಯಬಾರದು ಎಂದು ತ್ರಿಭಾಷಾ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಕಥೆಗಾರರಿಗೆ ಕರೆ ನೀಡಿದ್ದಾರೆ.

ಕೊಡಗು ಪತ್ರಕರ್ತರ ಸಂಘದ ಆಶ್ರಯದಲ್ಲಿ ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘ ಮತ್ತು ಕಾಮಧೇನು ಗೋಶಾಲೆ ಟ್ರಸ್ಟ್ ಸಂಯುಕ್ತಾಶ್ರದಲ್ಲಿ ಅಮ್ಮತ್ತಿಯ ಕಾವಾಡಿಯಲ್ಲಿನ ಗೋಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಥಾ ಸಮಯ - ಕಥೆ ಹೇಳುವ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿ ಅವರು ಮಾತನಾಡಿದರು. ೧೯೪೦ ರ ದಶಕದಲ್ಲಿ ಖ್ಯಾತ ಕಲಾವಿದ ಕರೀಂಖಾನ್ ಅವರು ಜಾನಪದ ಕಲೆ, ಸಾಹಿತ್ಯಕ್ಕೆ ಹೊಸ ರೂಪು ನೀಡಿದರು. ಅನಂತರವೇ ಕರ್ನಾಟಕದಲ್ಲಿ ಜಾನಪದ ಕಥೆ, ಕವನಗಳಿಗೆ ಆದ್ಯತೆ ದೊರಕಿತು ಎಂದು ಬಾಚರಣಿಯಂಡ ಅಪ್ಪಣ್ಣ ಸ್ಮರಿಸಿದರು. ನಾಡಿನ ಹೆಮ್ಮೆಯ ಕಥೆಗಾರರಾಗಿದ್ದ ಪೂರ್ಣಚಂದ್ರ ತೇಜಸ್ವಿ ನಮ್ಮಿಂದ ಮರೆಯಾಗಿದ್ದರೂ ಅವರ ಸಾಹಿತ್ಯ ಕೃತಿಗಳು ಸದಾ ಲೇಖಕರಿಗೆ ನವಚೈತನ್ಯ ನೀಡುವಂತಿದೆ. ಇಂಥ ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳು ಹೆಚ್ಚು ಓದಿ ಜ್ಞಾನವಂತರಾಗಬೇಕೆAದು ಅವರು ಕರೆ ನೀಡಿದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್. ಟಿ. ಕಥಾ ಸಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೊಬೈಲ್ ಕಾಲಘಟ್ಟದಲ್ಲಿ ಕಥೆ ಹೇಳಲು ಅಮ್ಮ- ಅಪ್ಪನಿಗೆ ವ್ಯವಧಾನವಿಲ್ಲ. ಕಥೆ ಕೇಳಲೂ ಮೊಬೈಲ್ ಗುಂಗಿನಲ್ಲಿ ಮುಳುಗಿರುವ ಮಕ್ಕಳಿಗೆ ಆಸಕ್ತಿ ಇಲ್ಲದಂತಾಗಿದೆ. ಇಂಥ ಕಾಲದಲ್ಲಿ ಕಥಾ ಸಮಯದಂಥ ಕಾರ್ಯಕ್ರಮಗಳು ಮಕ್ಕಳಲ್ಲಿ ಕಥೆ ಹೇಳುವ ಮತ್ತು ಕಥೆಗಳನ್ನು ಕೇಳುವ ಹೊಸ ಚಿಂತನೆ ಸೃಷ್ಟ್ಟಿಸುವಂತಾಗಬೇಕೆAದು ಸಲಹೆ ನೀಡಿದರು. ಜಾನಪದದ ಕಥೆಯ ಹಾಡಾಗಿರುವ ಧರಣಿ ಮಂಡಲವು ಎಂದೆAದಿಗೂ ಗೋವುಗಳ ಮಹತ್ವ ಸಾರುತ್ತವೆ. ಕಥಾ ಸಮಯ ಕಾರ್ಯಕ್ರಮ ಗೋಶಾಲೆಯಲ್ಲಿಯೇ ಆಯೋಜಿತವಾಗಿರುವುದು ವಿಶೇಷ ಎಂದೂ ಅನಿಲ್ ಹೇಳಿದರು.

ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ ಮಾತನಾಡಿ, ಕಾಲ ಬದಲಾದರೂ ಇತಿಹಾಸವನ್ನು ಮರೆಯದೇ ಇತಿಹಾಸದ ಪ್ರಮುಖ ಕಥೆಗಳನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರಲ್ಲದೇ, ಹಳೇ ಕಾಲದಲ್ಲಿ ದಟ್ಟಾರಣ್ಯದ ನಡುವೇ ಒಂಟಿ ಮನೆಗಳಲ್ಲಿ ಜನ ವಾಸವಾಗಿದ್ದರೂ ವನ್ಯಜೀವಿಗಳ ಸಮಸ್ಯೆ ಕಾಡುತ್ತಿರಲಿಲ್ಲ. ಆದರೆ ಬದಲಾದ ಕಾಲದಲ್ಲಿ ನಾಡಿಗೇ ವನ್ಯಜೀವಿಗಳು ನುಗ್ಗಿ ದಾಂಧಲೆ ಸೃಷ್ಟಿಸುತ್ತಿವೆ. ವನ್ಯಜೀವಿ- ಮಾನವನ ನಡುವಿನ ಸೌಹಾರ್ದ ಸಂಬAಧಿತ ಕಥೆಗಳೂ ಇಂದಿನ ಅಗತ್ಯದಂತಿದೆ ಎಂದರು. ಕಥಾ ಸಮಯದಂಥ ಚಿಂತನೆಗೊಡ್ಡುವ ಕಾರ್ಯಕ್ರಮಗಳು ಅತ್ಯಂತ ಮೌಲ್ಯಯುತವಾಗಿದೆ ಎಂದು ಅವರು ಬಣ್ಣಿಸಿದರು.

ಅಸೀಮಾ ಮಾಸ ಪತ್ರಿಕೆಯ ಸಂಪಾದಕ ಮಾಣಿಪಂಡ ಸಂತೋಷ್ ತಮ್ಮಯ್ಯ ಮಾತನಾಡಿ, ಸೃಷ್ಟಿಯ ಪ್ರತೀ ಅಂಶದಲ್ಲಿಯೂ ಒಂದೊAದು ಕಥೆಯಿದೆ. ಬೇರೊಬ್ಬರ ಕಣ್ಣಲ್ಲಿ ಪ್ರತಿಯೋರ್ವರೂ ಒಂದು ಕಥೆಯಾಗುತ್ತೇವೆ ಎಂದರಲ್ಲದೇ ಕೂಡುಕುಟುಂಬ ಪದ್ಧತಿ ಕಡಮೆಯಾಗುತ್ತಿರುವ ಈ ದಿನಗಳಲ್ಲಿ ಮಕ್ಕಳ ಕಥೆಗಳಲ್ಲಿ ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅತ್ತೆ, ನಾದಿನಿಯ ಪಾತ್ರಗಳೇ ಕಾಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅಂಥ ಸಂಬAಧಗಳ ಬಗ್ಗೆ ಮಕ್ಕಳಿಗೆ ಗೊತ್ತೇ ಇಲ್ಲದಾದಾಗ ಆ ಪಾತ್ರಗಳನ್ನು ಕಥೆಗಳಲ್ಲಿ ಹೇಗೆ ಸೃಷ್ಟಿಸಲು ಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದರು.

ಕಥೆ ಬರೆಯುವವರು ವಿಮರ್ಶಕರ ವಿಮರ್ಶೆಗಳಿಗೆ ಮನಸ್ಸು ನೋಯಿಸಿಕೊಂಡು ಹೊಸ ಕಥೆಗಳನ್ನು ಬಲಿಗೊಡದಿರಿ. ಕಥೆಗಳು ಪಾತ್ರಗಳಾಗದೇ ಕಥೆಗಳು ಜೀವಂತವಾಗಿರುವAತೆ ಕಥೆಗಾರರು ಬರೆಯಿರಿ ಎಂದು ಸಂತೋಷ್ ತಮ್ಮಯ್ಯ ಸಲಹೆ ಮಾಡಿದರು.

ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಮಾತನಾಡಿ, ಕಥೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ವಿನೂತನ ರೀತಿಯಲ್ಲಿ ಕಥಾ ಸಮಯ ಆಯೋಜಿಸಿದ್ದು ನಿರೀಕ್ಷೆಗೂ ಮೀರಿದ ಸ್ಪಂದನ ದೊರಕಿದೆ ಎಂದರು. ವಿದ್ಯಾರ್ಥಿಗಳಲ್ಲಿ ಕಥೆ ಬರೆಯಲು ಇಂಥ ಕಾರ್ಯಕ್ರಮ ಪ್ರೋತ್ಸಾಹ ನೀಡುತ್ತದೆ ಎಂದು ಅವರು ಹೇಳಿದರು.

ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರ ಬಿ.ಜಿ. ಅನಂತಶಯನ ಮಾತನಾಡಿ, ಯಾವುದೇ ಬರಹ ಆಗಿರಲಿ ಅದರಲ್ಲಿ ಭಾಷಾ ಸೌಂದರ್ಯ, ಭಾಷೆಯ ಗಟ್ಟಿತನ ಮುಖ್ಯವಾಗಬೇಕು. ಕ್ರಿಯಾತ್ಮಕತೆ ಕಥೆಗಳ ಮೂಲವಾಗಿರಬೇಕು. ಬಾವಿಯೊಳಗಿನ ಕಪ್ಪೆಯಂತೆ ಕಥೆಗಾರನ ಕಥಾ ಸೃಷ್ಟಿ ಇರದೇ ಪ್ರತಿ ಕಥೆಯಲ್ಲಿಯೂ ನಾವೀನ್ಯತೆ ಕಂಗೊಳಿಸಬೇಕೆAದು ಸಲಹೆ ನೀಡಿದರು.

ಕೊಡಗು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಮಾತನಾಡಿ, ಮಕ್ಕಳಿಗೆ ಕಥೆ ಹೇಳುವ ಮತ್ತು ಕೇಳುವ ಆಸಕ್ತಿ ಇಂದಿಗೂ ಉಳಿದುಕೊಂಡಿದೆ. ಪ್ರತಿ ಕಥೆಯಲ್ಲಿಯೂ ಸಂದೇಶ ಹಾಸುಹೊಕ್ಕಾಗಿರಬೇಕು. ಕಥಾ ಸಮಯದಂಥ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪಾಲಿಗೆ ಕಥೆ ಬರೆಯುವ ಕಥಾ ಶಿಬಿರಗಳಂತಿರಬೇಕೆAದು ಹೇಳಿದರು.

ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಕೆ. ರಾಮಚಂದ್ರ ಭಟ್ ಮಾತನಾಡಿ, ಗೋವುಗಳ ಪಾಲನೆಯಿಂದ ಮನೆ ಸಮೃದ್ಧವಾಗುತ್ತದೆ. ಗೋಶಾಲೆಯಲ್ಲಿ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವದಂಥ ಕಾರ್ಯಕ್ರಮಗಳನ್ನು ಆಯೋಜಿಸಿ ಗೋವುಗಳ ಜತೆ ಸೌಹಾರ್ದತೆ ಬೆಳೆಸಿಕೊಳ್ಳಬೇಕು. ನಮಗೆ ಗೋವು ಉತ್ಪನ್ನಗಳು ಬೇಕು. ಆದರೆ ಗೋವಿನ ಸಂರಕ್ಷಣೆ ಬೇಡ ಎಂಬ ಧೋರಣೆ ಸರಿಯಿಲ್ಲ ಎಂದು ಹೇಳಿದರು. ಗೋವುಗಳ ಸಂರಕ್ಷಣೆಯಾಗದೇ ಹೋದಲ್ಲಿ ಧರ್ಮವೂ ಸಂರಕ್ಷಣೆಯಾಗದು ಎಂಬುದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕೆಂದೂ ಅವರು ಹೇಳಿದರು. ಗೋವುಗಳ ಜತೆ ಬೆಸುಗೆಯೇ ಒಂದು ಕಥೆಯಾಗುತ್ತದೆ. ಗೋವುಗಳ ನಾಶವಾದರೆ ಅದೂ ಮತ್ತೊಂದು ದುರಂತದ ಕಥೆಯಾದೀತು ಎಂದೂ ಅವರು ಎಚ್ಚರಿಸಿದರು.

ಹಿರಿಯ ಪಕ್ಷಿ ತಜ್ಞ ಡಾ. ಎಸ್.ವಿ. ನರಸಿಂಹನ್ ಮಾತನಾಡಿ, ಕಥೆ ರಚನೆಯಲ್ಲಿ ಸ್ವಂತಿಕೆ ಹೆಚ್ಚಾಗಿರಲಿ ಎಂದು ಸಲಹೆ ನೀಡಿದರು. ಕಾಮಧೇನು ಗೋಶಾಲಾ ಸಂರಕ್ಷಣಾ ಟ್ರಸ್ಟ್ನ ಟ್ರಸ್ಟಿ ಕೆ.ಕೆ. ಶ್ಯಾಮ, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಷಾ ಪ್ರೀತಮ್ ಸ್ವಾಗತಿಸಿ, ನಿರೂಪಿಸಿದರು. ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ವೀರಾಜಪೇಟೆ ತಾಲೂಕು ಸಂಘದ ನಿರ್ದೇಶಕರು, ಸದಸ್ಯರು, ಜಿಲ್ಲಾ ಸಂಘದ ನಿರ್ದೇಶಕರಾದ ಶಿವಪ್ಪ, ಗುರುದರ್ಶನ್, ಸಂಘದ ಸದಸ್ಯರು, ಗೋಶಾಲಾ ಸಂರಕ್ಷಣಾ ಟ್ರಸ್ಟ್ ಪ್ರಮುಖರು ಹಾಜರಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದು ಕಥೆಗಳನ್ನು ವಾಚಿಸಿದ್ದು ವಿಶೇಷವಾಗಿತ್ತು.