ನಾಪೋಕ್ಲು, ಜು. ೪: ವಿಶಿಷ್ಟ ಸಂಸ್ಕೃತಿ ಸಂಪ್ರದಾಯವನ್ನು ಹೊಂದಿ ರುವ ಕೊಡಗು ಗೌಡ ಸಮುದಾಯ ಸಾರ್ವಜನಿಕ ಸಮಾರಂಭಗಳ ಮೂಲಕ ಎಲ್ಲೆಡೆ ಪಸರಿಸುವ ಪ್ರಯತ್ನ ಮಾಡ ಬೇಕೆಂದು ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಕೆ.ವಿ. ಶ್ರೀಧರ್ ಕರೆ ನೀಡಿದರು.
ಆಟಿ ೧೮ರ ಪ್ರಯುಕ್ತ ಮೈಸೂರು ಕೊಡಗು ಗೌಡ ಸಮಾ ಜದಲ್ಲಿ ಭಾನುವಾರ ಏರ್ಪಡಿಸಿದ್ದ ಆಟಿ ಗೌಜಿ ಕಾರ್ಯಕ್ರಮದಲ್ಲಿ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿ, ಅರೆಭಾಷೆ ಗೌಡ ಸಮುದಾಯದ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಕ್ರಮಗಳನ್ನು ಉಳಿಸಿ-ಬೆಳೆಸುವುದರೊಂದಿಗೆ ಎಲ್ಲೆಡೆ ಹರಡುವಂತೆ ನೋಡಿಕೊಳ್ಳಬೇಕು. ಯುವಪೀಳಿಗೆಗೂ ಸಂಸ್ಕೃತಿಯ ಅರಿವು ಆಗಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಮಾತನಾಡಿ, ಕೊಡಗಿನಲ್ಲಿ ಮಳೆಗಾಲದ ವಾತಾವರಣದಲ್ಲಿ ಪರಿಸರದಲ್ಲಿ ಸಿಗುವ ಆಹಾರ ಉತ್ಪನ್ನಗಳನ್ನು ಬಳಸಿ ಜನರು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಮೈಸೂರಿನಲ್ಲಿ ನೆಲೆಸಿರುವ ನಮ್ಮ ಸಮುದಾಯದ ಜನರಿಗೆ ಈ ಆರೋ ಗ್ಯದಾಯಕ ಆಹಾರವನ್ನು ಒದಗಿಸುವ ಉದ್ದೇಶದಿಂದ ಆಟಿ ಗೌಜಿ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೊಡಗು ಗೌಡ ಮಹಿಳಾ ಒಕ್ಕೂಟದ ನಡುಬೆಟ್ಟಿ ಗೀತಾ ಲಕ್ಷö್ಮಣ ಮಾತನಾಡಿದರು.
ಸಮಾಜದ ಹಿರಿಯರಾದ ಕುಯ್ಯುಮುಡಿ ರಾಮಪ್ಪ ಹಾಗೂ ನಡುಮನೆ ರುಕ್ಮಿಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಪೊನ್ನೆಟಿ ನಂದ ಹಾಗೂ ಕೊಡಗು ಗೌಡ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಕುಂಟುಪಣಿ ಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೊಡಗು ಗೌಡ ಸಮಾಜದ ನಿರ್ದೇಶಕ ಪಟ್ಟಡ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿ, ಕರ್ಣಯನ ಸುನಿತಾ ಪ್ರಾರ್ಥಿಸಿದರು. ಹೊಸೂರು ಮಮತ ವಂದಿಸಿದರು.