ಕೂಡಿಗೆ, ಆ. ೫: ಹಾರಂಗಿ ಅಣೆಕಟ್ಟೆಯಲ್ಲಿ ಈ ಸಾಲಿನ ಜುಲೈ ಅಂತ್ಯಕ್ಕೆ ೨೭ ಟಿ.ಎಂ.ಸಿ ಅಷ್ಟು ದಾಖಲೆಯ ನೀರು ಹರಿದು ಬಂದ ಹಿನ್ನೆಲೆ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗಿದೆ. ಕಳೆದ ಸಾಲಿನಲ್ಲಿ ಆಗಸ್ಟ್ ಅಂತ್ಯಕ್ಕೆ ಇಷ್ಟು ನೀರು ಸಂಗ್ರಹವಾಗಿತ್ತು, ಈ ಸಾಲಿನಲ್ಲಿ ಜುಲೈ ಅಂತ್ಯದಲ್ಲಿಯೇ ಸಂಗ್ರಹವಾಗಿದೆ.

ಹಾರAಗಿ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಸತೀಶ್ ಹಾಗೂ ಕಾರ್ಯಪಾಲಕ ಅಭಿಯಂತರ ಐ.ಕೆ ಪುಟ್ಟಸ್ವಾಮಿ ಅವರ ಮಾರ್ಗದರ್ಶನದಲ್ಲಿ ಅಣೆಕಟ್ಟೆಯ ನೀರಿನ ಸಂಗ್ರಹ ಮಟ್ಟದ ಅನ್ವಯ ಅಣೆಕಟ್ಟೆಯ ಹಿತದೃಷ್ಟಿಯಿಂದ ಹೆಚ್ಚುವರಿ ನೀರನ್ನು ಅಣೆಕಟ್ಟೆಯಿಂದ ನದಿಗೆ ಹರಿಸಲಾಗಿದೆ. ಅಣೆಕಟ್ಟೆಯಲ್ಲಿ ಇಂದಿನ ನೀರಿನ ಗರಿಷ್ಠ ಮಟ್ಟ ೨,೮೫೬.೧೭ ಅಡಿಗಳಷ್ಟಿದ್ದು ಅಣೆಕಟ್ಟಿಯಲ್ಲಿ ೭.೫೪ ಟಿ.ಎಂ.ಸಿ ನೀರು ಸಂಗ್ರಹವಾಗಿದೆ. ಕಳೆದ ಕೆಲವು ದಿನಗಳಿಂದ ಈ ವ್ಯಾಪ್ತಿಯಲ್ಲಿ ಬಿಸಿಲಿನ ವಾತಾವರಣ ಇರುವುದರಿಂದ ನದಿಗೆ ಕೇವಲ ೨,೦೦೦ ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. -ನಾಗರಾಜಶೆಟ್ಟಿ