ಕೋವರ್‌ಕೊಲ್ಲಿ ಇಂದ್ರೇಶ್

ಬೆಂಗಳೂರು, ಆ. ೫: ಅಂತರರಾಷ್ಟಿçÃಯ ದೂರವಾಣಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತನೆ ಮಾಡಿ ಸರ್ಕಾರ ಮತ್ತು ದೂರಸಂಪರ್ಕ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗುತ್ತಿದ್ದ ಈರ್ವರು ಆರೋಪಿಗಳನ್ನು ಸಿಸಿಬಿಯ ಸೈಬರ್ ಕ್ರೆöÊಂ ಪೋಲೀಸ್ ತಂಡ ಸೋಮವಾರ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರನ್ನು ಕೇರಳದ ಮಲಪ್ಪುರಂ ಮೂಲದ ಮೊಹಮ್ಮದ್ ಸಫ್ವಾನ್ ಮತ್ತು ಕೊಡಗು ಮಾದಾಪುರ ಸಮೀಪದ ಗರಗಂದೂರು ಗ್ರಾಮದ ಎಂ.ಎ. ಫಯಾಜ್ ಎಂದು ಗುರುತಿಸಲಾಗಿದ್ದು, ಇಬ್ಬರು ಕೂಡ ಇಮ್ಮಡಿಹಳ್ಳಿಯ ಮನೆಯಲ್ಲಿ ರಹಸ್ಯವಾಗಿ ಟೆಲಿಫೋನ್ ಎಕ್ಸ್ಚೇಂಜ್ ಸ್ಥಾಪನೆ ಮಾಡಿಕೊಂಡಿದ್ದರು. ಇವರು ಕೊಲ್ಲಿ ರಾಷ್ಟç ಹಾಗೂ ಇತರ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಬಡ ಕಾರ್ಮಿಕರನ್ನು, ಉದ್ಯೋಗಸ್ಥರನ್ನೂ ಸಂಪರ್ಕಿಸಿ ಕಡಿಮೆ ಹಣದಲ್ಲಿ ತಾಯ್ನಾಡಿಗೆ ಕರೆ ಮಾಡಿ ತಮ್ಮವರ ಜೊತೆ ಮಾತನಾಡಬಹುದು ಎಂದು ಆಮಿಷವೊಡ್ಡಿ ಅವರನ್ನು ಸೆಳೆಯುತ್ತಿದ್ದರು. ಇವರ ಅಮಿಷಕ್ಕೆ ಒಪ್ಪಿದ ವಿದೇಶೀ ಗ್ರಾಹಕರು ಇವರ ಅಕ್ರಮ ಟೆಲಿಫೋನ್ ಎಕ್ಸ್ಚೇಂಜ್‌ಗೆ ಕರೆ ಮಾಡುತ್ತಿದ್ದರು. ಆ ಕರೆಗಳಿಗೆ ಇವರು ಅವರ ಕುಟುಂಬಸ್ಥರಿಗೆ ಸಂಪರ್ಕ ಕಲ್ಪಿಸುತ್ತಿದ್ದರು. ಅದೇ ರೀತಿ ಭಾರತದಿಂದಲೂ ವಿದೇಶಕ್ಕೆ ಕರೆ ಮಾಡಲು ಅನುವು ಮಾಡಿಕೊಡುತ್ತಿದ್ದರು. ಈ ರೀತಿಯಾಗಿ ಅಂತರರಾಷ್ಟಿçÃಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡಿ ಸರ್ಕಾರ ಮತ್ತು ಟೆಲಿಕಾಂ ಕಂಪನಿಗಳ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗುತ್ತಿತ್ತು.

ಈ ರೀತಿ ಅಕ್ರಮ ಕರೆ ಮಾಡುತ್ತಿದ್ದುದನ್ನು ಜಿಯೋ ಟೆಲಿಕಾಂ ಸಂಸ್ಥೆಯ ತಂತ್ರಜ್ಞರು ಪತ್ತೆ ಹಚ್ಚಿ ಸಿಸಿಬಿ ಪೋಲೀಸರ ಬಳಿ ದೂರು ದಾಖಲಿಸಿದ್ದರು. ದೂರಿನ ಬೆನ್ನಲ್ಲೇ ಸೋಮವಾರ ಸಿಸಿಬಿ ಪೊಲೀಸರು ಇಮ್ಮಡಿಹಳ್ಳಿ ಮನೆ ಮೇಲೆ ದಾಳಿ ಮಾಡಿ ಅಲ್ಲಿದ್ದ ಸೆಟ್ ಟಾಪ್ ಬಾಕ್ಸ್ಗಳು, ೭೦೨ ಸಿಮ್ ಕಾರ್ಡ್ಗಳು, ೯ ಸಿಮ್ ಬಾಕ್ಸ್, ೬ ರೌಟರ್, ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ವಸ್ತುಗಳ ಮೌಲ್ಯ ೧೦ ಲಕ್ಷ ರೂಪಾಯಿಗಳೆಂದು ಪೋಲೀಸರು ತಿಳಿಸಿದ್ದಾರೆ. ವಿದೇಶದಿಂದ ಕೊರಿಯರ್ ಮೂಲಕ ಕಳಿಸಲಾದ ಸಿಮ್ ಬಾಕ್ಸ್ಗಳನ್ನು ಆರೋಪಿಗಳು ವಂಚನೆಗೆ ಬಳಸಿಕೊಂಡಿದ್ದರು.

ಈ ಕುರಿತು ಮಾಹಿತಿ ನೀಡಿದ ಸಿಸಿಬಿ ಡಿಸಿಪಿ ರಾಜಾ ಇಮಾಂ ಖಾಸಿಂ ಅವರು ಆರೋಪಿಗಳು ಅನೇಕ ತಿಂಗಳುಗಳಿAದಲೇ ಈ ವಂಚನೆಯಲ್ಲಿ ತೊಡಗಿಕೊಂಡಿದ್ದು ಕರೆಗಳ ಪರಿವರ್ತನೆಯಿಂದಾಗಿ ಇಬ್ಬರೂ ಆರೋಪಿಗಳಿಗೆ ತಿಂಗಳಿಗೆ ನಾಲ್ಕರಿಂದ ಐದು ಲಕ್ಷ ರೂಪಾಯಿಗಳಷ್ಟು ಆದಾಯ ಲಭಿಸುತ್ತಿತ್ತು ಎಂದು ಹೇಳಿದರು. ಸದ್ಯ ಸಿಸಿಬಿ ಸೈಬರ್ ಕ್ರೆöÊಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿಂದೆ ಕೂಡ ಇಂಥದ್ದೇ ದಂಧೆ ನಗರದಲ್ಲಿ ಕಂಡು ಬಂದಿತ್ತು. ಆಗ ಸಿಸಿಬಿ ಪೊಲೀಸರು ಹಲವರನ್ನು ಬಂಧಿಸಿ ಜೈಲಿಗಟ್ಟಿದ್ದರು. ಪ್ರಸ್ತುತ ಭಾರತದಿಂದ ಕೊಲ್ಲಿ ರಾಷ್ಟç ಅಥವಾ ವಿದೇಶಗಳಿಗೆ ಕರೆ ಮಾಡಲು ನಿಮಿಷಕ್ಕೆ ೧೫ ರೂಪಾಯಿನಿಂದ ೨೫ ರೂಪಾಯಿನವರೆಗೂ ದರ ಇದೆ. ತಿಂಗಳ ರೀಚಾರ್ಜ್ ಪ್ಲಾನ್ ಅನ್ವಯ ಕರೆ ದರ ಬದಲಾಗುತ್ತದೆ. ವಿದೇಶಗಳಿಂದ ಇಲ್ಲಿಗೆ ಕರೆ ಮಾಡಲು ದುಪ್ಪಟ್ಟು ಹಣ ತೆರಬೇಕಾಗುತ್ತದೆ. ಆರೋಪಿಗಳು ವಿದೇಶೀ ಗ್ರಾಹಕರಿಂದ ನಿಮಿಷಕ್ಕೆ ೧೦ ರೂಪಾಯಿವರೆಗೆ ದರ ವಸೂಲಿ ಮಾಡುತ್ತಿದ್ದರೆಂದು ಪೋಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ಸಿಮ್ ಕಾರ್ಡ್ಗಳನ್ನು ಇತರೆ ಸೈಬರ್ ಅಪರಾಧಗಳಿಗೂ ಬಳಸಿರುವ ಶಂಕೆಯಿದ್ದು, ತನಿಖೆ ಮುಂದುವರೆದಿದೆ. ಅಲ್ಲದೆ ಸರಕಾರ ಹಾಗೂ ದೂರಸಂಪರ್ಕ ಕಂಪನಿಗಳಿಗೆ ಆಗಿರುವ ಕೋಟ್ಯಾಂತರ ರೂಪಾಯಿ ನಷ್ಟದ ಪ್ರಮಾಣವನ್ನು ಲೆಕ್ಕಹಾಕಬೇಕಾಗಿದೆ ಎಂದು ಡಿಸಿಪಿ ಖಾಸಿಂ ತಿಳಿಸಿದ್ದಾರೆ.