ಐಗೂರು, ಆ. ೫: ಜೋರಾಗಿ ಮಳೆ ಬಂದಾಗ ಸೋಮವಾರಪೇಟೆ-ಮಡಿಕೇರಿ ಹೆದ್ದಾರಿಯ ಕೋವರ್‌ಕೊಲ್ಲಿಯಲ್ಲಿ ದ್ವಿಚಕ್ರ ವಾಹನ ಸವಾರರ ಸರಣಿ ಅಪಘಾತಗಳು ಪ್ರತಿನಿತ್ಯ ನಡೆಯುತ್ತಿದ್ದು ಇಲಾಖೆ ಇತ್ತ ಗಮನ ಹರಿಸಬೇಕಾಗಿದೆ.

ಹೆದ್ದಾರಿ ರಸ್ತೆಯ ಕೋವರ್‌ಕೊಲ್ಲಿ ಜಂಕ್ಷನ್‌ನ ಇಳಿಜಾರು ರಸ್ತೆಯಲ್ಲಿ ಜೋರಾಗಿ ಮಳೆ ಬಂದಾಗ ರಸ್ತೆಯ ಇಕ್ಕೆಲಗಳ ನೀರು ಸರಾಗವಾಗಿ ಹರಿಯುವ ಚರಂಡಿಗಳು ಸಮರ್ಪಕವಾಗಿಲ್ಲದ ಕಾರಣ ದೊಡ್ಡ ಪ್ರಮಾಣದಲ್ಲಿ ಹರಿಯುವ ಮಳೆಯ ನೀರು ಕಲ್ಲು, ಮಣ್ಣುಗಳನ್ನು ಹೆದ್ದಾರಿ ರಸ್ತೆಗೆ ಎಳೆದು ತಂದು ಹಾಕುತ್ತಿದ್ದು ವಾಹನ ಸವಾರರ ಪ್ರಾಣಕ್ಕೆ ಸಂಚಕಾರವಾಗಿದೆ . ಇಂದು ಸಂಜೆ ೪ ಗಂಟೆಗೆ ಈ ಭಾಗದಲ್ಲಿ ೧ ಇಂಚಿನಷ್ಟು ಮಳೆಯಾಗಿದ್ದು, ಇಳಿಜಾರು ರಸ್ತೆಯಲ್ಲಿ ಹಲವಾರು ದ್ವಿಚಕ್ರ ವಾಹನ ಸವಾರರು ಮುಗ್ಗರಿಸಿ ಬಿದ್ದಿದ್ದು ದೊಡ್ಡ ಪ್ರಮಾಣದ ಅಪಾಯದಿಂದ ಪಾರಾಗಿದ್ದಾರೆ. ಪ್ರತಿನಿತ್ಯ ಸಂಚರಿಸುವ ಸವಾರರಿಗೆ ಈ ರಸ್ತೆಯ ಅನುಭವವಿದ್ದು ಹೊಸದಾಗಿ ಪ್ರಯಾಣಿಸುವ ದ್ವಿಚಕ್ರ ವಾಹನ ಸವಾರರು ಮುಗ್ಗರಿಸಿ ಬೀಳುವ ದೃಶ್ಯ ಸಾಮಾನ್ಯವಾಗಿತ್ತು. ಈ ಬಗ್ಗೆ ವಾಹನ ಸವಾರರು ಇಲಾಖೆಗೆ ಶಾಪ ಹಾಕುತ್ತಿದ್ದರು. ಆದಷ್ಟು ಬೇಗ ಲೋಕೋಪಯೋಗಿ ಇಲಾಖೆಯವರು ಎಚ್ಚೆತ್ತು ಕೊಂಡು ಚರಂಡಿಗಳನ್ನು ನಿರ್ಮಿಸಬೇಕಾಗಿದೆ. -ಸುಕುಮಾರ್