ಗೋಣಿಕೊಪ್ಪಲು, ಆ. ೫: ಆನೆ ಮಾನವ ಸಂಘರ್ಷದಿAದ ರೈತರು ಹಾಗೂ ಕಾರ್ಮಿಕರು ನೆಮ್ಮದಿ ಕಳೆದುಕೊಂಡಿದ್ದಾರೆ. ನಿರಂತರವಾಗಿ ಕಾಡಾನೆ ಹಾಗೂ ಹುಲಿಗಳ ಉಪಟಳದಿಂದ ಜೀವನ ಸಾಗಿಸುವುದು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯು ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲದಿರುವುದನ್ನು ಮನಗಂಡ ರೈತರು ಹಾಗೂ ಕಾರ್ಮಿಕರು ಕೊಡಗಿನ ತಿತಿಮತಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕೆಲ ಕಾಲ ರಾಜ್ಯ ಹೆದ್ದಾರಿಯನ್ನು ಸ್ಥಗಿತಗೊಳಿಸಿ, ಮಾನವ ಸರಪಳಿ ನಿರ್ಮಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಕರ್ನಾಟಕ ರಾಜ್ಯರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಜಮಾವಣೆಗೊಂಡ ಜಿಲ್ಲೆಯ ೫ ತಾಲೂಕಿನ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು; ತಿತಿಮತಿ ಪಟ್ಟಣದಿಂದ ಮೆರವಣಿಗೆ ಯಲ್ಲಿ ಸಾಗಿ ಅರಣ್ಯ ಕಚೇರಿಯ ಮುಂದೆ ನಿಗದಿಪಡಿಸಲಾಗಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸುವ ಮೂಲಕ ಹಲವು ನಿರ್ಣಯಗಳನ್ನು ಕೈಗೊಂಡರು.

ಕಾಮಗಾರಿ ಆರಂಭಗೊಳ್ಳಲಿದೆ

ಇತ್ತೀಚಿನ ದಿನಗಳಲ್ಲಿ ಆನೆ ಮಾನವ ಸಂಘರ್ಷದಿAದ ಜನರ ನೆಮ್ಮದಿ ಹಾಳಾಗಿರುವುದರಿಂದ ಅನಿವಾರ್ಯವಾಗಿ ರೈತರು ಹಾಗೂ ಕಾರ್ಮಿಕರು ಬೀದಿ ಗಿಳಿದು ಪ್ರತಿಭಟನೆ ಮಾಡುವ ಸಂದರ್ಭ ಎದುರಾಗಿದೆ.

(ಮೊದಲ ಪುಟದಿಂದ)ಈ ನಿಟ್ಟಿನಲ್ಲಿ ಮೊದಲ ಭಾಗವಾಗಿ ಸಾಂಕೇತಿಕವಾಗಿ ಮಾನವ ಸರಪಳಿ ನಿರ್ಮಿಸಿ ರೈತರು, ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಸರ್ಕಾರದ ಮುಂದೆ ಇಡುವ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ಒಂದು ತಿಂಗಳೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಮನು ಸೋಮಯ್ಯ ಹೇಳಿದರು. ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಕೊಡಗು ಸಿಸಿಎಫ್ ಸುನಾಲ್ ಅವರಿಗೆ ನೀಡುವ ಮೂಲಕ ಆದಷ್ಟು ಬೇಗನೇ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಮನವಿ ಪತ್ರ ಸ್ವೀಕರಿಸಿದ ಕೊಡಗು ಜಿಲ್ಲಾ ಸಿಸಿಎಫ್ ಸುನಾಲ್ ಅವರು ಜಿಲ್ಲೆಗೆ ಆಗಮಿಸಿ ಅಧಿಕಾರ ಸ್ವೀಕರಿಸಿ ೧ ತಿಂಗಳು ಕಳೆದಿದೆ.

ಇಲ್ಲಿಯ ಸಮಸ್ಯೆಗಳನ್ನು ಅಧಿಕಾರಿಗಳಿಂದ ಪಡೆದಿದ್ದೇನೆ. ಆನೆ-ಮಾನವ ಸಂಘರ್ಷ ತಡೆಗಟ್ಟಲು ಬೇಕಾದಂತಹ ಕ್ರಮಗಳಾದ ರೈಲ್ವೆ ಬ್ಯಾರಿಕೇಡ್,ಕಂದಕ ನಿರ್ಮಾಣ, ಸೋಲಾರ್ ಬೇಲಿ ನಿರ್ಮಾಣ ಹಾಗೂ ಕಂದಕ ದುರಸ್ತಿ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ರೈತರ ತೋಟದಲ್ಲಿ ಆಗುತ್ತಿರುವ ಬೆಳೆ ನಷ್ಟದ ಬಗ್ಗೆ ಪರಿಹಾರವನ್ನು ರೈತರಿಗೆ ಸಕಾಲದಲ್ಲಿ ವಿತರಿಸಲಾಗುತ್ತಿದೆ. ಮಳೆ ಕಡಿಮೆಯಾಗುತ್ತಿದಂತೆ ಕಾಮಗಾರಿಗಳು ಆರಂಭಗೊಳ್ಳಲಿದೆ ಎಂದು ಸಭೆಗೆ ಮಾಹಿತಿ ಒದಗಿಸಿದರು.

ರೈತರಿಗೆ ಕಿರುಕುಳ

ಮಧ್ಯ ಪ್ರವೇಶಿಸಿದ ಮನು ಸೋಮಯ್ಯ ಜಿಲ್ಲೆಗೆ ಆಗಮಿಸುವ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವುದು ಸರಿಯಲ್ಲ. ಸರ್ಕಾರದ ನಿಯಮಗಳನ್ನು ಪಾಲಿಸದೆ ಏಕಾಏಕಿ ರೈತರ ತೋಟಗಳಿಗೆ ತೆರಳಿ ಬೇಲಿ ಕಿತ್ತು ಹಾಕುವುದು, ಸರ್ವೆ ಕಾರ್ಯ ಮಾಡುವುದು ನಡೆಯುತ್ತಿದೆ. ಹುಲಿ ಸೆರೆಗೆ ಅನುಮತಿ ಸಿಕ್ಕಿದ್ದರೂ ಹುಲಿಯನ್ನು ಸೆರೆ ಹಿಡಿಯಲು ಸಾಧ್ಯವಾಗುತ್ತಿಲ್ಲ. ಕೆಲವು ಅಧಿಕಾರಿಗಳಿಂದ ರೈತರಿಗೆ ಕಿರುಕುಳ ಆಗುವುದು ಕಂಡು ಬರುತ್ತಿದೆ. ಇಂತಹ ಕೆಲಸಗಳನ್ನು ತಕ್ಷಣ ನಿಲ್ಲಿಸಬೇಕು. ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ನೆಪ ಮಾತ್ರಕ್ಕೆ ಕೊಡಗು ಜಿಲ್ಲೆಗೆ ಆಗಮಿಸಿ ಇಲ್ಲಿಯ ರೈತರ ತಾಳ್ಮೆಯನ್ನು ಪರೀಕ್ಷೆ ಮಾಡುವ ಅಧಿಕಾರಿಗಳು ನಮಗೆ ಬೇಕಾಗಿಲ್ಲ. ಮಾನವೀಯತೆಯಿಂದ ಕೆಲಸ ನಿರ್ವಹಿಸುವ ಅಧಿಕಾರಿಗಳು ಮಾತ್ರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಸ್ಪAದಿಸುವ ಕೆಲಸ

ಸಭೆಯಲ್ಲಿ ಭಾಗವಹಿಸಿದ್ದ ನಾಗರಹೊಳೆ ವನ್ಯ ಜೀವಿ ವಿಭಾಗದ ನಿರ್ದೇಶಕಿ ಸೀಮಾ ಮಾತನಾಡಿ ಈಗಾಗಲೇ ಸರ್ಕಾರದಿಂದ ಮಂಜೂರಾಗಿರುವ ೨೧ ಕೋಟಿ ಅನುದಾನಕ್ಕೆ ಡಿಪಿಆರ್ ತಯಾರಾಗಿದ್ದು ಟೆಂಡರ್ ಪ್ರಕ್ರಿಯೆ ಮುಂದುವರೆಯುತ್ತಿದೆ. ಆನೆ-ಮಾನವ ಸಂಘರ್ಷ ತಡೆಗಟ್ಟಲು ಇಲಾಖೆ ಕಟಿಬದ್ಧವಾಗಿದೆ ಎಂದರು.

ಮಡಿಕೇರಿ ವಿಭಾಗದ ಡಿಸಿಎಫ್ ಅಭಿಷೇಕ್, ವೀರಾಜಪೇಟೆ ಡಿಸಿಎಫ್ ಜಗನ್ನಾಥ್, ಮಡಿಕೇರಿ ವನ್ಯಜೀವಿ ವಿಭಾಗದ ಡಿಸಿಎಫ್ ನೆಹರು ಮಾತನಾಡಿ ಹುಲಿ ಸೆರೆಗೆ ಅನುಮತಿ ಲಭ್ಯವಿದ್ದು ಇಲಾಖೆಯು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಕಾರ್ಯಾಚರಣೆಯನ್ನು ಮುಂದೆಯೂ ವಿಸ್ತರಿಸಲಾಗುವುದು.ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಶುಭಾಶ್, ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಉಪಾಧ್ಯಕ್ಷರಾದ ಸೋಮವಾರಪೇಟೆಯ ಪೂವಯ್ಯ, ಕಾರ್ಮಿಕ ಸಂಘಟನೆಯ ಅಧ್ಯಕ್ಷ ಭರತ್, ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಬಾಂಡ್ ಗಣಪತಿ, ಹೊಸೂರು ಭಾಗದ ಪ್ರಮುಖರಾದ ಕೊಲ್ಲಿರ ಗೋಪಿ ಚಿಣ್ಣಪ್ಪ, ತಿತಿಮತಿ ಭಾಗದ ಚೆಪ್ಪುಡೀರ ಕಾರ್ಯಪ್ಪ, ಅರಮಣಮಾಡ ರಂಜನ್ ಚಂಗಪ್ಪ, ಸೇರಿದಂತೆ ಹಲವು ಗಣ್ಯರು ತಮ್ಮ ಭಾಗದಲ್ಲಿ ಕಾಡಾನೆ ಹಾಗೂ ಹುಲಿಗಳಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು.

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ವಿರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶ, ರೈತ ಸಂಘದ ಪದಾಧಿಕಾರಿಗಳಾದ ಪುಚ್ಚಿಮಾಡ ರಾಯ್ ಮಾದಪ್ಪ, ಕವಿತರಾಮು ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಅರಣ್ಯ ಇಲಾಖೆಯ ಅಧಿಕಾರಿಗಳಾದ ಎಸಿಎಫ್ ಗೋಪಾಲ್, ಆರ್‌ಎಫ್‌ಒ ಗಂಗಾಧರ್, ಶಂಕರ್ ಸೇರಿದಂತೆ ಇನ್ನಿತರ ವಲಯದ ಅಧಿಕಾರಿಗಳು ಇದ್ದರು. ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಮುಂದಾಳತ್ವದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಸಭೆಯ ನಡುವೆ ಮಳೆ ಸುರಿಯುತ್ತಾದರೂ ಸಭೆಯು ಸಾಂಗವಾಗಿ ಜರುಗಿತು. ಅಧಿಕಾರಿಗಳ ಮುಂದೆ ರೈತರು ತಮ್ಮ ಸಮಸ್ಯೆಗಳನ್ನು ಹಂಚಿಕೊAಡರು. ಸುಜಯ್ ಬೋಪಯ್ಯ ಸ್ವಾಗತಿಸಿ, ಪುಚ್ಚಿಮಾಡ ಸುಭಾಶ್ ವಂದಿಸಿದರು. - ಹೆಚ್.ಕೆ.ಜಗದೀಶ್