ಮಡಿಕೇರಿ, ಆ. ೫: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಬಸ್ ನೌಕರರು ಹಮ್ಮಿಕೊಂಡಿದ್ದ ಮುಷ್ಕರದ ಬಿಸಿ ಜಿಲ್ಲೆಗೂ ತಟ್ಟಿತು. ಇಂದು ಬೆಳಗ್ಗಿನ ವೇಳೆ ಜಿಲ್ಲೆಯ ಬಹುತೇಕ ಕಡೆಗಳಲ್ಲು ಸರ್ಕಾರಿ ಬಸ್ ಓಡಾಟವಿತ್ತಾದರೂ ನಂತರ ಸರ್ಕಾರಿ ಬಸ್‌ಗಳ ಓಡಾಟ ಅತೀ ವಿರಳವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಬೆಳಗ್ಗಿನ ವೇಳೆ ಕೆಲ ಹೊತ್ತು ಸರ್ಕಾರಿ ಬಸ್‌ಗಳು ಸಂಚರಿಸಿದವಾದರೂ ಬಳಿಕ ಸಂಚಾರ ಇರಲಿಲ್ಲ. ನಿನ್ನೆಯ ಬಸ್ ನೌಕರರ ಮುಷ್ಕರದ ಮಾಹಿತಿಯಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲೂ ಇಳಿಕೆ ಕಂಡುಬAತು. ಈ ನಡುವೆ ಜಿಲ್ಲಾಡಳಿತದ ನಿರ್ದೇಶನದಂತೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಖಾಸಗಿ ಬಸ್, ಮಿನಿ ಬಸ್ ಸೇರಿದಂತೆ ಸುಮಾರು ಮೂವತ್ತು ಖಾಸಗಿ ವಾಹನಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ನಿಯೋಜಿಸಲಾಗಿತ್ತು. ಮಡಿಕೇರಿ ಸರ್ಕಾರಿ ಬಸ್ ನಿಲ್ದಾಣದಿಂದಲೇ ಪ್ರಯಾಣಿಕರನ್ನು ಸುಳ್ಯ, ಕುಶಾಲನಗರದತ್ತ ಕರೆದೊಯ್ಯಲು ಅವಕಾಶ ಕಲ್ಪಿಸಲಾಗಿತ್ತು. ಬೆಳಿಗ್ಗೆ ಮಡಿಕೇರಿಯಿಂದ ಜಿಲ್ಲೆ ವ್ಯಾಪ್ತಿಯ ಬೇರೆ ಬೇರೆ ಕಡೆಗಳಿಗೆ ತೆರಳಿದ್ದ ಸರ್ಕಾರಿ ಬಸ್‌ಗಳು ಬಳಿಕ ಸಂಚಾರ ಸ್ಥಗಿತಗೊಳಿಸಿದ್ದವು. ಮಡಿಕೇರಿ ಡಿಪೋ ಘಟಕದಿಂದ ಬಹುತೇಕ ಬಸ್‌ಗಳನ್ನು ಹೊರಡಿಸ ಲಾಯಿತಾದರೂ ನಿರಂತರ ಸಂಚಾರ ಕಂಡುಬರಲಿಲ್ಲ.

ಮಧ್ಯಾಹ್ನದ ಬಳಿಕ ಮಡಿಕೇರಿಯಿಂದ ಹೊರ ಜಿಲ್ಲೆಗಳತ್ತವೂ ಕೆಲ ಬಸ್‌ಗಳ ಸಂಚಾರ ಆರಂಭವಾಯಿತು. ಕೆಲ ಮಂದಿ ದೈನಂದಿನ ನೌಕರರು, ೬೪ ಮಂದಿ ತರಬೇತಿ ಹಾಗೂ ೫೮ ಮಂದಿ ಹೊರಗುತ್ತಿಗೆ

(ಮೊದಲ ಪುಟದಿಂದ) ಚಾಲಕರನ್ನು ಬಳಸಿಕೊಂಡು ಬಸ್ ಸಂಚಾರಕ್ಕೆ ಅನುವು ಮಾಡಲಾಗಿತ್ತು ಎಂದು ಡಿಪೋ ವ್ಯವಸ್ಥಾಪಕ ಈರಸಪ್ಪ ಮಾಹಿತಿ ನೀಡಿದರು. ಬುಧವಾರವೂ ಮುಷ್ಕರ ಮುಂದುವರೆದರೆ ಈ ಚಾಲಕರುಗಳನ್ನೇ ಬಳಸಿಕೊಂಡು ಬಸ್ ಸಂಚಾರ ವ್ಯವಸ್ಥೆ ಮಾಡುವುದಾಗಿ ಅವರು ತಿಳಿಸಿದರು.

ಮುಷ್ಕರ ಮುಂದುವರಿದರೆ ಸರ್ಕಾರಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾದರೆ ಅಗತ್ಯವಿರುವೆಡೆಗಳಲ್ಲಿ ಖಾಸಗಿ ಬಸ್, ಮಿನಿ ಬಸ್ ಸೇರಿದಂತೆ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಿ ಇಂದು ಮಾಡಿರುವ ವ್ಯವಸ್ಥೆಯನ್ನು ಮುಂದುವರೆಸಲಾಗುವುದೆAದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್ ಮಾಹಿತಿ ನೀಡಿದರು. ಸರ್ಕಾರಿ ಬಸ್ ನಿಲ್ದಾಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಕೆಲ ಪ್ರಯಾಣಿಕರು ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ತಿಕ್ಕಾಟದಿಂದಾಗಿ ನಾವು ತೊಂದರೆ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಲ ಸಾರಿಗೆ ನೌಕರರು ಮಾತನಾಡಿ, ಯಾವುದೇ ಸರ್ಕಾರಗಳು ಬಂದರೂ ಕೆ.ಎಸ್.ಆರ್.ಟಿ.ಸಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಆದ್ದರಿಂದ ಹೋರಾಟ ಅನಿವಾರ್ಯ ಎಂದು ಹೇಳಿದರು. ಮುಷ್ಕರದ ಹಿನ್ನೆಲೆಯಲ್ಲಿ ಬಹುತೇಕ ಬಸ್‌ಗಳು ಸರ್ಕಾರಿ ಬಸ್ ನಿಲ್ದಾಣದಲ್ಲಿ ನಿಲ್ಲಲ್ಪಟ್ಟಿದ್ದವು. ಸರ್ಕಾರಿ ಬಸ್ ನಿಲ್ದಾಣ ಹಾಗೂ ಕೆಎಸ್‌ಆರ್‌ಟಿಸಿ ಡಿಪೋ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸೋಮವಾರಪೇಟೆ: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಿಂದ ಮಡಿಕೇರಿ, ಮೈಸೂರು, ಮಂಗಳೂರು, ಬೆಂಗಳೂರು, ಹಾಸನ ಸೇರಿದಂತೆ ವಿವಿಧ ಭಾಗಗಳಿಗೆ ತೆರಳುವ ಬಸ್‌ಗಳು ಸಂಚಾರ ಸ್ಥಗಿತಗೊಂಡಿದ್ದರಿAದ ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ಬಸ್‌ಗಳನ್ನು ಅವಲಂಬಿಸುವAತಾಯಿತು.

ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ನಡೆಸುತ್ತಿದ್ದ ಮಹಿಳಾ ಪ್ರಯಾಣಿಕರು ಇಂದು ಖಾಸಗಿ ಬಸ್‌ಗಳಲ್ಲಿ ಶುಲ್ಕ ಪಾವತಿಸಿ ತೆರಳಬೇಕಾಯಿತು. ಸೋಮವಾರಪೇಟೆಯಿಂದ ಕುಶಾಲನಗರ, ಮಡಿಕೇರಿ, ಶನಿವಾರಸಂತೆ, ಅರಕಲಗೂಡು, ಹಾಸನಕ್ಕೆ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ನಿಗದಿತ ಸಮಯಕ್ಕೆ ಬಸ್ ಇಲ್ಲದೇ ಸಮಸ್ಯೆಯಾಯಿತು.

ನಿನ್ನೆ ರಾತ್ರಿ ಪಟ್ಟಣಕ್ಕೆ ಆಗಮಿಸಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್‌ಗಳು ಮಾತ್ರ ಇಂದು ಬೆಳಿಗ್ಗೆ ಸಂಬAಧಿಸಿದ ಡಿಪೋಗಳತ್ತ ಪ್ರಯಾಣ ಬೆಳೆಸಿದವು. ಯಾವೊಂದು ಬಸ್ ಸಹ ನಿಗದಿತ ಸಮಯಕ್ಕೆ ಹೊರಡಲಿಲ್ಲ. ಮಡಿಕೇರಿ ಡಿಪೋದಿಂದ ಸೋಮವಾರಪೇಟೆಗೆ ಗ್ರಾಮಾಂತರ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಮಡಿಕೇರಿಗೆ ತೆರಳುವ ಮಂದಿ ಖಾಸಗಿ ಬಸ್‌ಗಳನ್ನು ಅವಲಂಭಿಸಬೇಕಾಯಿತು.

ಬೆಳಿಗ್ಗೆ ೬.೩೦ಕ್ಕೆ ಮಡಿಕೇರಿಯಿಂದ ಬಂದ ಬಸ್ ಬೆಂಗಳೂರಿಗೆ ತೆರಳದೇ ವಾಪಸ್ ೧೦.೩೦ಕ್ಕೆ ಡಿಪೋಗೆ ವಾಪಸ್ಸಾಯಿತು. ೬.೩೦ಕ್ಕೆ ಶಾಂತಳ್ಳಿ ಮಾರ್ಗ ಮಡಿಕೇರಿಗೆ ಒಂದು ಬಸ್ ತೆರಳಿತು. ೭.೩೫ಕ್ಕೆ ಸೋಮವಾರಪೇಟೆಯಿಂದ ಕುಡಿಗಾಣಕ್ಕೆ ಹೋಗುವ ಬಸ್ ಸೇವೆ ಸ್ಥಗಿತಗೊಂಡಿತ್ತು. ಈ ಬಸ್ ಕುಡಿಗಾಣದಿಂದ ವಾಪಸ್ಸಾಗಿ ಹಾಸನಕ್ಕೆ ತೆರಳಬೇಕಿತ್ತು. ೮ ಗಂಟೆಗೆ ತೆರಳಬೇಕಿದ್ದ ಶನಿವಾರಸಂತೆ,ಕೊಡ್ಲಿಪೇಟೆ, ಸಕಲೇಶಪುರ, ಬೇಲೂರು ಬಸ್ ಸಂಚಾರ ಬಂದ್ ಆಗಿತ್ತು.

ಪುಷ್ಪಗಿರಿ-ನಗರಳ್ಳಿ ಬಸ್ ಇಲ್ಲದ್ದರಿಂದ ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲಾ ಕಾಲೇಜಿಗೆ ಆಗಮಿಸಲು ಸಾಧ್ಯವಾಗಲಿಲ್ಲ. ೯ ಗಂಟೆಗೆ ಮಡಿಕೇರಿ ಬಿಟ್ಟು ಸೋಮವಾರಪೇಟೆಯಿಂದ ಬೆಂಗಳೂರಿಗೆ ಹೋಗುವ ಬಸ್, ಸೋಮವಾರಪೇಟೆಯಿಂದ ಕುಶಾಲನಗರಕ್ಕೆ ಹೋಗಿ ಅಲ್ಲೇ ನಿಲುಗಡೆಗೊಂಡಿತು.

ತಾಕೇರಿ ಮಾರ್ಗದ ಬಸ್ ಮಾತ್ರ ಮಡಿಕೇರಿಯಿಂದ ಸೋಮವಾರಪೇಟೆಗೆ ಆಗಮಿಸಿ ನಂತರ ವಾಪಸ್ ತೆರಳಿತು. ಕುಶಾಲನಗರದಿಂದ ಸೋಮವಾರಪೇಟೆಗೆ ಆಗಮಿಸಿ ಕೊಣನೂರು ಮಾರ್ಗವಾಗಿ ಹಾಸನಕ್ಕೆ ೯.೩೦ಕ್ಕೆ ತೆರಳು ಬಸ್ ಸಹ ಸಂಚಾರ ಸ್ಥಗಿತಗೊಳಿಸಿತ್ತು. ಚಿಕ್ಕಮಗಳೂರು-ಮಡಿಕೇರಿ ಬಸ್ ೧೦ ಗಂಟೆಗೆ ಮಡಿಕೇರಿಗೆ ಹೋಗಬೇಕಿದ್ದರೂ ೯.೪೦ಕ್ಕೆ ತೆರಳಿತು.

ಮಡಿಕೇರಿ-ಸೋಮವಾರಪೇಟೆ-ಬೆಂಗಳೂರು ಬಸ್ ಕುಶಾಲನಗರಕ್ಕೆ ತೆರಳಿ ಅಲ್ಲೇ ಸ್ಥಗಿತಗೊಂಡಿತು. ೭ ಗಂಟೆಗೆ ತೆರಳಬೇಕಿದ್ದ ಸಕಲೇಶಪುರ-ಮಂಗಳೂರು ಬಸ್ ೬ ಗಂಟೆಗೆ ಸೋಮವಾರಪೇಟೆಯಿಂದ ತೆರಳಿತು. ಸೋಮವಾರಪೇಟೆ-ಮಡಿಕೇರಿ- ಧರ್ಮಸ್ಥಳ ಬಸ್ ಮಡಿಕೇರಿಗೆ ತೆರಳಿತು. ಬೆಂಗಳೂರಿAದ ಸೋಮವಾರಪೇಟೆಗೆ ಆಗಮಿಸಿದ ಬಸ್ ೬ ಗಂಟೆಗೆ ಮಡಿಕೇರಿಗೆ ತೆರಳಿತು. ಪ್ರಮುಖವಾಗಿ ಕುಶಾಲನಗರಕ್ಕೆ ಬೆಳಿಗ್ಗೆ ೮, ೮.೩೦ ಹಾಗೂ ೯ ಗಂಟೆಗೆ ತೆರಳುವ ಬಸ್‌ಗಳು ಇಂದು ೭.೩೦ರ ಒಳಗೆ ಸೀಟು ಖಾಲಿಯಿದ್ದರೂ ಕುಶಾಲನಗರಕ್ಕೆ ತೆರಳಿ ಅಲ್ಲೇ ನಿಲುಗಡೆಗೊಂಡವು.

ಒಟ್ಟಾರೆ ಸಾರಿಗೆ ಇಲಾಖಾ ನೌಕರರ ಮುಷ್ಕರದಿಂದಾಗಿ ಜನಸಾಮಾನ್ಯ ಪ್ರಯಾಣಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಸಮಸ್ಯೆಗೆ ಸಿಲುಕುವಂತಾಯಿತು. ಮುಷ್ಕರದ ಹಿನ್ನೆಲೆ ಸೋಮವಾರಪೇಟೆ ಸರ್ಕಾರಿ ಬಸ್ ನಿಲ್ದಾಣದ ಆವರಣ ಖಾಲಿಯಾಗಿತ್ತು. ನಾಲೈದು ಬಸ್‌ಗಳು ಪ್ಲಾಟ್ ಫಾರಂನಿAದ ಹೊರಗೆ ನಿಲುಗಡೆಗೊಂಡಿದ್ದವು. ಬೆಂಗಳೂರು, ಮೈಸೂರು ಸೇರಿದಂತೆ ಅಂತರ್‌ಜಿಲ್ಲೆಗಳಿಗೆ ತೆರಳಬೇಕಿದ್ದ ಪ್ರಯಾಣಿಕರು, ಗಂಟೆ ಗಟ್ಟಲೆ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು.

ಸೋಮವಾರಪೇಟೆಯಿಂದ ತೆರಳುತ್ತಿದ್ದ ಬಸ್ ಗಳು ಅರಕಲಗೂಡು, ಸಕಲೇಶಪುರ, ಕುಶಾಲನಗರ ನಿಲ್ದಾಣದಲ್ಲಿ ನಿಲುಗಡೆಯಾದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕೆಲವರು ಖಾಸಗಿ ವಾಹನಗಳ ಮೊರೆ ಹೋದರೆ, ಇನ್ನು ಕೆಲವರು ಪ್ರಯಾಣ ಮೊಟಕುಗೊಳಿಸಿ ಮನೆಗೆ ವಾಪಸ್ ಆದರು.